ಬೆಂಕಿಗೆ ತುಪ್ಪ ಸುರಿಯಬೇಡಿ: ಹೃತಿಕ್ ರೋಷನ್ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್

ಕಂಗನಾ ರಣಾವತ್ ಮತ್ತು ಹೃತಿಕ್ ರೋಷನ್ ನಡುವಿನ ಕಿರಿಕ್ ಇಂದು ನಿನ್ನೆಯದಲ್ಲ. ಹತ್ತು ವರ್ಷಗಳ ಹಳೆಯ ಜಗಳ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕಂಗನಾ ವಿರುದ್ಧ ಜೆನ್​ ಜಿ ಯುವಜನತೆ ತಿರುಗಿ ಬಿದ್ದಿದ್ದಾರೆ. ಅದಕ್ಕೆ ಪರೋಕ್ಷವಾಗಿ ಹೃತಿಕ್ ರೋಷನ್ ಪ್ರೋತ್ಸಾಹ ನೀಡಿದ್ದಾರೆ. ಅದು ಕಂಗನಾ ಕೋಪಕ್ಕೆ ಕಾರಣ ಆಗಿದೆ.

ಬೆಂಕಿಗೆ ತುಪ್ಪ ಸುರಿಯಬೇಡಿ: ಹೃತಿಕ್ ರೋಷನ್ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್
Kangana Ranaut, Hrithik Roshan, Saba Azad

Updated on: Aug 02, 2026 | 12:38 PM

ಬಾಲಿವುಡ್‌ನ ವಿವಾದಾತ್ಮಕ ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ಮತ್ತು ನಟ ಹೃತಿಕ್ ರೋಷನ್ ನಡುವಿನ ಹಳೆಯ ವಾಕ್ಸಮರ ಮತ್ತೆ ಮುನ್ನೆಲೆಗೆ ಬಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹೃತಿಕ್ (Hrithik Roshan) ಮಾಡಿದ ಕಾಮೆಂಟ್ ಒಂದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಂಗನಾ, ‘ಅನಗತ್ಯ ಕಾಮೆಂಟ್ ಮಾಡುವ ಬದಲು, ನನಗೆ ಕಿರುಕುಳ ನೀಡುತ್ತಿರುವವರನ್ನು ಖಂಡಿಸಿ’ ಎಂದು ತಿರುಗೇಟು ನೀಡಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಇತ್ತೀಚೆಗೆ ಕಂಗನಾ ನೀಡಿದ್ದ ಹೇಳಿಕೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ‘ನಾವು ಹೃತಿಕ್ ರೋಷನ್ ಬಳಿ ಕ್ಷಮೆ ಕೇಳಬೇಕು’ ಎನ್ನುವ ಪೋಸ್ಟ್ ಒಂದು ವೈರಲ್ ಆಗಿತ್ತು. ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದ ಹೃತಿಕ್ ರೋಷನ್, ‘ಒಬ್ಬ ವ್ಯಕ್ತಿಯನ್ನು ದ್ವೇಷಿಸುವ ಕಾರಣಕ್ಕೆ ಇನ್ನೊಬ್ಬರ ಪರ ವಹಿಸುವುದು ಸರಿಯಲ್ಲ. ನಾನು ಸೂಕ್ತ ಸಂದರ್ಭ ಮತ್ತು ಸತ್ಯಾಸತ್ಯತೆ ತಿಳಿಯುವವರೆಗೆ ಕಾಯುತ್ತೇನೆ’ ಎಂದು ಬರೆದುಕೊಂಡಿದ್ದರು.

‘ಸಾಬಾ ಆಜಾದ್ ಜೊತೆ ಆನಂದವಾಗಿರಿ’

ಹೃತಿಕ್ ಅವರ ಈ ಪ್ರತಿಕ್ರಿಯೆಯನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಕಂಗನಾ ರಣಾವತ್, ನಟನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಪ್ರಿಯ ಹೃತಿಕ್, ನಿಮಗೆ ಸಾಬಾ ಆಜಾದ್ ರೂಪದಲ್ಲಿ ಸೂಕ್ತ ಸಂಗಾತಿ ಸಿಕ್ಕಿರುವುದಕ್ಕೆ ನನಗೆ ಸಂತೋಷವಿದೆ. ನೀವಿಬ್ಬರೂ ಒಟ್ಟಿಗೆ ಚೆನ್ನಾಗಿ ಕಾಣಿಸುತ್ತೀರಿ. ಈಗ ನೀವು ಅವರ ಜೊತೆ ರಿಲೇಷನ್​ಶಿಪ್​​ನಲ್ಲಿ ಇದ್ದೀರಿ. ಹೀಗಿರುವಾಗ ಮತ್ತೊಬ್ಬ ಮಹಿಳೆಯನ್ನು ಈ ರೀತಿ ಕೆಣಕುವುದು ನಿಮಗೆ ಶೋಭೆ ತರುವುದಿಲ್ಲ’ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ‘ನಿಮ್ಮ ಹೆಸರನ್ನು ಬಳಸಿಕೊಂಡು ನನ್ನನ್ನು ಪೀಡಿಸುತ್ತಿರುವ ಮತ್ತು ಕಿರುಕುಳು ನೀಡುತ್ತಿರುವ ಆನ್​ಲೈನ್ ಟ್ರೋಲರ್‌ಗಳನ್ನು ನೀವು ಖಂಡಿಸಬೇಕು. ಬೆಂಕಿಗೆ ತುಪ್ಪ ಸುರಿಯುವುದನ್ನು ನಿಲ್ಲಿಸಿ ಹಾಗೂ ನಿಮ್ಮ ಸಂಗಾತಿಗೆ ಮುಜುಗರ ತರಬೇಡಿ. ನಿಮಗೆ ಇನ್ನಾದರೂ ಬುದ್ಧಿ ಬರಲಿ. ಅನಗತ್ಯವಾಗಿ ಕಮೆಂಟ್ ಮಾಡುವುದು ನಿಲ್ಲಿಸಿ’ ಎಂದು ಖಾರವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: ‘ಇಂಥ ಅಸಹ್ಯ ಎಲ್ಲೂ ನೋಡಿಲ್ಲ’: ಜೆನ್ ಜಿ ಪ್ರತಿಭಟನೆ ವಿರುದ್ಧ ಕಂಗನಾ ರಣಾವತ್ ಗರಂ

2016ರ ವಿವಾದದ ಹಿನ್ನೆಲೆ:

ಕಂಗನಾ ಮತ್ತು ಹೃತಿಕ್ ರೋಷನ್ ನಡುವಿನ ವಿವಾದ 2016ರಲ್ಲಿ ಆರಂಭವಾಗಿತ್ತು. ತಾವು ಇಬ್ಬರೂ ಪ್ರೀತಿಯಲ್ಲಿದ್ದೆವು ಎಂದು ಕಂಗನಾ ಹೇಳಿದ್ದರು. ಆದರೆ ಅದನ್ನು ಹೃತಿಕ್ ಸಂಪೂರ್ಣವಾಗಿ ನಿರಾಕರಿಸಿದ್ದರು. ಈ ವಿವಾದವು ಕಾನೂನು ಸಮರ, ಲೀಕ್ ಆದ ಇಮೇಲ್‌ಗಳು ಹಾಗೂ ಬಹಿರಂಗ ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು. ಈಗ ಹಲವು ವರ್ಷಗಳ ನಂತರ ಮತ್ತೆ ಈ ಹಳೆಯ ಕಿಡಿ ಹೊತ್ತಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us