
ನಟಿ ಕಂಗನಾ ರಣಾವತ್ (Kangana Ranaut) ಅವರು ಈಗ ಬಿಜೆಪಿ ಸಂಸದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸ್ಪರ್ಧಿಸಿ ಅವರು ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಚುನಾವಣೆ ಗೆದ್ದರೆ ಚಿತ್ರರಂಗ ತೊರೆಯುವುದಾಗಿ ಅವರು ಪ್ರಚಾರದ ವೇಳೆ ಹೇಳಿದ್ದರು. ಈಗ ಅವರು ಗೆದ್ದಾಗಿದೆ. ಈಗ ಅವರು ಚಿತ್ರರಂಗ ತೊರೆಯುತ್ತಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಅವರೇ ನಿರ್ಧಾರ ತೆಗೆದುಕೊಳ್ಳಬೇಕಿದೆ. ಈ ಮಧ್ಯೆ ಅವರು ನಟಿಸಿ, ನಿರ್ದೇಶಿಸಿದ ‘ಎಮರ್ಜೆನ್ಸಿ’ ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದೆ.
1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಎಮರ್ಜೆನ್ಸಿ ಹೇರಿದ್ದರು. ಇದನ್ನು ಆಧಾರವಾಗಿಟ್ಟುಕೊಂಡು ಕಂಗನಾ ಕಥೆ ಬರೆದು ಸಿನಿಮಾ ಮಾಡಿದ್ದಾರೆ. ಈ ಚಿತ್ರ 2023ರಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ 14ರಂದು ಈ ಸಿನಿಮಾ ರಿಲೀಸ್ ಆಗಬೇಕಿದೆ. ಆದರೆ, ಈಗ ಸಿನಿಮಾದ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ ಹೋಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಕಂಗನಾ ರಣಾವತ್ ಅವರು ಬಿಜೆಪಿಯ ತತ್ವ ಸಿದ್ಧಾಂತಗಳಿಂದ ಪ್ರಭಾವಿತರಾದವರು. ಅವರು ಕಾಂಗ್ರೆಸ್ ಕಂಡ ಶ್ರೇಷ್ಠ ನಾಯಕಿಯ ಇಂದಿರಾ ಗಾಂಧಿ ಪಾತ್ರ ಮಾಡುತ್ತಾರೆ ಎಂದಾಗ ಎಲ್ಲರಿಗೂ ಅಚ್ಚರಿ ಆಗಿತ್ತು. ಸಿನಿಮಾ ಘೋಷಿಸುವಾಗ ಅವರು ಇನ್ನೂ ಬಿಜೆಪಿಯನ್ನೂ ಸೇರಿರಲಿಲ್ಲ. ಈಗ ಪರಿಸ್ಥಿತಿ ಹಾಗಿಲ್ಲ. ಅವರು ಬಿಜೆಪಿ ಸಂಸದೆ ಆಗಿದ್ದಾರೆ. ಹೀಗಾಗಿ, ಈ ಸಿನಿಮಾನ ಕಾಂಗ್ರೆಸ್ನವರು ಯಾವ ರೀತಿ ಸ್ವೀಕರಿಸುತ್ತಾರೆ ಅನ್ನೋದನ್ನು ನೋಡಬೇಕಿದೆ.
‘ಎಮರ್ಜೆನ್ಸಿ’ ಸಿನಿಮಾದಲ್ಲಿ ಇಂದಿರಾ ಗಾಂಧಿ ಅವರನ್ನು ಯಾವ ರೀತಿಯಲ್ಲಿ ತೋರಿಸಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಂದೊಮ್ಮೆ ಇಂದಿರಾ ಗಾಂಧಿಯವರನ್ನು ಕೆಟ್ಟವರು ಎಂದು ತೋರಿಸುವ ಪ್ರಯತ್ನ ನಡೆದಿದ್ದರೆ ಕಾಂಗ್ರೆಸ್ನವರು ಕಂಗನಾ ವಿರುದ್ಧ ಕಿಡಿಕಾರುತ್ತಾರೆ. ಸಿನಿಮಾ ಮೇಲೆ ನಿಷೇಧ ಹೇರುವಂತೆ ಒತ್ತಾಯ ಎದುರಾಗೋದು ಪಕ್ಕಾ ಎನ್ನಲಾಗಿದೆ.
ಇದನ್ನೂ ಓದಿ: ಮೊದಲ ಪ್ರಯತ್ನದಲ್ಲೇ ಗೆಲುವು, ಕಂಗನಾ ರನೌತ್ ಹೇಳಿದ್ದು ಹೀಗೆ
ಕಂಗನಾ ಅವರು ಕಳೆದ ವರ್ಷ ‘ಎಮರ್ಜೆನ್ಸಿ’ ಸಿನಿಮಾ ಜೂನ್ 14ರಂದು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಇಷ್ಟು ದಿನ ಅವರು ಚುನಾವಣಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಮುಂದಿನ ಕೆಲ ದಿನ ಸರ್ಕಾರದ ರಚನೆಯ ಕಸರತ್ತು ನಡೆಯಲಿದೆ. ಈ ಎಲ್ಲಾ ಕಾರಣದಿಂದ ಇನ್ನು 9 ದಿನಗಳಲ್ಲಿ ಈ ಸಿನಿಮಾ ರಿಲೀಸ್ ಆಗೋದು ಡೌಟ್ ಎನ್ನಲಾಗಿದೆ. ಹೀಗಾಗಿ, ಚಿತ್ರದ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ ಹೋಗುತ್ತದೆಯೇ ಎನ್ನುವ ಪ್ರಶ್ನೆ ಕಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.