ಟ್ವಿಟರ್ ಖಾತೆ ರದ್ದಾದ ನಂತರದಲ್ಲಿ ಕಂಗನಾ ರಣಾವತ್ಗೆ (Kangana Ranaut) ಕೈಕಟ್ಟಿ ಹಾಕಿದಂತಾಗಿತ್ತು. ಹೀಗಾಗಿ, ಅವರು ಇನ್ಸ್ಟಾಗ್ರಾಮ್ ಬಳಕೆ ಮಾಡುತ್ತಿದ್ದರು. ತಮ್ಮ ಹತಾಶೆಯನ್ನು ಇನ್ಸ್ಟಾಗ್ರಾಮ್ನಲ್ಲಿ ಹೊರಹಾಕುತ್ತಿದ್ದರು. ಈಗ ಅವರಿಗೆ ಮರಳಿ ತಮ್ಮ ಟ್ವಿಟರ್ ಖಾತೆ ಸಿಕ್ಕಿದೆ. ಟ್ವಿಟರ್ಗೆ ಮರಳಿದ ಬಳಿಕ ಅವರು ಹಾವಳಿ ಶುರುಹಚ್ಚಿಕೊಂಡಿದ್ದಾರೆ. ಈಗ ‘ಪಠಾಣ್’ ಸಿನಿಮಾ (Pathan Movie) ಬಗ್ಗೆ ಅವರು ಕಿಡಿಕಾರಿದ್ದಾರೆ.
ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಬಂಗಾರದ ಬೆಳೆ ತೆಗೆಯುತ್ತಿದೆ. ಈ ಸಿನಿಮಾ ನೂರಾರು ಕೋಟಿ ಗಳಿಕೆ ಮಾಡಿ ಬೀಗುತ್ತಿದೆ. ‘ಬಾಕ್ಸ್ ಆಫೀಸ್ ಗಳಿಕೆ ಮೇಲೆ ಒಂದು ಚಿತ್ರವನ್ನು ಅಳೆಯಬಾರದು’ ಎಂಬರ್ಥದಲ್ಲಿ ಕಂಗನಾ ಇತ್ತೀಚೆಗೆ ಮಾತನಾಡಿದ್ದರು. ಈಗ ಅವರು ನೇರವಾಗಿ ‘ಪಠಾಣ್’ ಚಿತ್ರದ ಬಗ್ಗೆ ಕೊಂಕು ನುಡಿದಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಕಂಗನಾ, ‘ಪಠಾಣ್ ಸಿನಿಮಾ ದ್ವೇಷದ ಮೇಲೆ ಪ್ರೀತಿ ಸಾಧಿಸಿರುವ ಗೆಲುವು ಎಂದು ಎಲ್ಲರೂ ಹೇಳುತ್ತಿದ್ದಾರೆ. ನಾನು ಇದನ್ನು ಒಪ್ಪುತ್ತೇನೆ. ಆದರೆ ಯಾರ ದ್ವೇಷದ ಮೇಲೆ ಯಾರ ಪ್ರೀತಿ? ಯಾರು ಟಿಕೆಟ್‌ಗಳನ್ನು ಖರೀದಿಸಿ ಚಿತ್ರವನ್ನು ಯಶಸ್ವಿ ಮಾಡಿದ್ದು? ಭಾರತದ ಪ್ರೀತಿ ಚಿತ್ರವನ್ನು ಗೆಲ್ಲಿಸಿದೆ. ಅದರಲ್ಲಿ ಶೇ. 80ರಷ್ಟು ಹಿಂದುಗಳೇ ಇದ್ದಾರೆ’ ಎಂದು ಕಂಗನಾ ಹೇಳಿದ್ದಾರೆ.
‘ಶತ್ರುರಾಷ್ಟ್ರ ಪಾಕಿಸ್ತಾನ ಹಾಗೂ ಐಎಸ್ಐನ ಒಳ್ಳೆಯವರು ಎಂದು ತೋರಿಸಿದ ಸಿನಿಮಾ ಯಶಸ್ಸು ಕಾಣುತ್ತಿದೆ. ದ್ವೇಷವನ್ನು ಮೀರಿ ಭಾರತದ ಈ ಮನೋಭಾವವೇ ಅದನ್ನು ಮಹಾನ್ ಆಗಿ ಮಾಡಿದೆ. ದ್ವೇಷ ಮತ್ತು ಶತ್ರುಗಳ ಕ್ಷುಲ್ಲಕ ರಾಜಕೀಯವನ್ನು ಜಯಿಸಿದ್ದು ಭಾರತದ ಪ್ರೀತಿ. ಯಾರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದೀರೋ ದಯವಿಟ್ಟು ಗಮನಿಸಿ ಪಠಾಣ್ ಒಂದು ಸಿನಿಮಾ ಆಗಲು ಮಾತ್ರ ಸಾಧ್ಯ. ಭಾರತದಲ್ಲಿ ಯಾವಾಗಲೂ ಮೊಳಗೋದು ಜೈ ಶ್ರೀರಾಂ ಮಾತ್ರ’ ಎಂದಿದ್ದಾರೆ ಅವರು.
All those who are claiming Pathan is triumph of love over hate,I agree but whose love over whose hate? Let’s be precise, whose is buying tickets and making it a success?Yes it is India’s love and inclusiveness where eighty percent Hindus lives and yet a film called Pathan (cont)
— Kangana Ranaut (@KanganaTeam) January 27, 2023
ಇದನ್ನೂ ಓದಿ: Kangana Ranaut: ‘ಪಠಾಣ್’ ಸೂಪರ್ ಹಿಟ್; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
‘ಭಾರತೀಯ ಮುಸ್ಲಿಮರು ದೇಶಭಕ್ತರು ಮತ್ತು ಅಫ್ಘಾನಿಸ್ತಾನದ ಪಠಾಣರಿಗಿಂತ ತುಂಬಾ ಭಿನ್ನರು ಎಂದು ನಾನು ನಂಬುತ್ತೇನೆ. ಮುಖ್ಯ ವಿಷಯವೆಂದರೆ ಭಾರತ ಎಂದಿಗೂ ಅಫ್ಘಾನಿಸ್ತಾನವಾಗುವುದಿಲ್ಲ. ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅಲ್ಲಿನ ಪರಿಸ್ಥಿತಿ ನರಕವನ್ನು ಮೀರಿದೆ. ಹೀಗಾಗಿ ಕಥೆಯ ಮೂಲಕ ಹೇಳೋದಾದರೆ ಇದು ಭಾರತದ ಪಠಾಣ್’ ಎಂದು ಕಂಗನಾ ಬರೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:19 am, Fri, 27 January 23