ನಿರ್ಮಾಪಕ ಕರಣ್ ಜೋಹರ್ (Karan Johan) ಅವರು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾಗೆ ‘ಧಡಕ್ 2’ (Dhadak 2) ಎಂದು ಶೀರ್ಷಿಕೆ ಇಡಲಾಗಿದೆ. ಇಂದು (ಮೇ 27) ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ‘ಅನಿಮಲ್’ ಖ್ಯಾತಿಯ ನಟಿ ತೃಪ್ತಿ ದಿಮ್ರಿ (Tripti Dimri) ಅವರು ನಟಿಸಲಿದ್ದಾರೆ. ಅವರ ಜೊತೆ ‘ಗಲ್ಲಿ ಬಾಯ್’ ಖ್ಯಾತಿಯ ಸಿದ್ಧಾಂತ್ ಚತುರ್ವೇದಿ ಅವರು ತೆರೆ ಹಂಚಿಕೊಳ್ಳಲಿದ್ದಾರೆ. ‘ಧಡಕ್ 2’ ಸಿನಿಮಾದಲ್ಲಿ ಜಾತಿಯ ಕುರಿತಾದ ಕಹಾನಿ ಇರಲಿದೆ ಎಂಬುದನ್ನು ಅವರು ತಿಳಿಸಿದ್ದಾರೆ.
ಕರಣ್ ಜೋಹರ್ ಅವರ ‘ಧರ್ಮ ಪ್ರೊಡಕ್ಷನ್ಸ್’ ಮೂಲಕ ‘ಧಡಕ್ 2’ ಸಿನಿಮಾ ನಿರ್ಮಾಣ ಆಗುತ್ತಿದೆ. ‘ಈ ಕಥೆ ಸ್ವಲ್ಪ ಡಿಫರೆಂಟ್. ಒಬ್ಬನಿದ್ದ ರಾಜ, ಒಬ್ಬಳಿದ್ದಳು ರಾಣಿ. ಜಾತಿ ಬೇರೆ ಆಗಿತ್ತು. ಕಥೆ ಮುಗಿಯಿತು’ ಎಂಬ ಕ್ಯಾಪ್ಷನ್ನೊಂದಿಗೆ ಕರಣ್ ಜೋಹರ್ ಅವರು ಈ ಸಿನಿಮಾದ ಮೋಷನ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಶಾಜಿಯಾ ಇಕ್ಬಾಲ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.
ಮೋಷನ್ ಪೋಸ್ಟರ್ ಜೊತೆಗೆ ‘ಧಡಕ್ 2’ ಸಿನಿಮಾದ ಬಿಡುಗಡೆ ದಿನಾಂಕವನ್ನೂ ತಿಳಿಸಲಾಗಿದೆ. ನವೆಂಬರ್ 22ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. 2023ರಲ್ಲಿ ತೆರೆಕಂಡ ‘ಅನಿಮಲ್’ ಸಿನಿಮಾದಿಂದ ನಟಿ ತೃಪ್ತಿ ದಿಮ್ರಿ ಅವರಿಗೆ ಖ್ಯಾತಿ ಹೆಚ್ಚಾಯಿತು. ಬಳಿಕ ಅವರಿಗೆ ಸಿಗುವ ಅವಕಾಶಗಳು ಕೂಡ ಜಾಸ್ತಿ ಆಗಿವೆ. ‘ಧಡಕ್ 2’ ಸಿನಿಮಾದಲ್ಲಿ ಅವರು ನಾಯಕಿ ಆಗಿದ್ದಾರೆ.
ಪ್ರಶಾಂತ್ ನೀಲ್, ಜೂ. ಎನ್ಟಿಆರ್ಗೆ ‘ಡ್ರ್ಯಾಗನ್’ ಟೈಟಲ್ ಕೊಟ್ಟಿದ್ದು ಕರಣ್ ಜೋಹರ್?
2018ರಲ್ಲಿ ಕರಣ್ ಜೋಹರ್ ನಿರ್ಮಾಣ ಮಾಡಿದ್ದ ‘ಧಡಕ್’ ಸಿನಿಮಾದಲ್ಲಿ ಕೂಡ ಜಾತಿಗೆ ಸಂಬಂಧಿಸಿದ ಕಥೆ ಇತ್ತು. ಆ ಸಿನಿಮಾ ಮೂಲಕ ನಟಿ ಜಾನ್ವಿ ಕಪೂರ್ ಅವರು ಬಾಲಿವುಡ್ಗೆ ಎಂಟ್ರಿ ನೀಡಿದರು. ಅದು ಮರಾಠಿಯ ‘ಸೈರಾಟ್’ ಸಿನಿಮಾದ ರಿಮೇಕ್ ಆಗಿತ್ತು. ಜಾನ್ವಿ ಕಪೂರ್ ಅವರಿಗೆ ಜೋಡಿಯಾಗಿ ಇಶಾನ್ ಕಟ್ಟರ್ ನಟಿಸಿದ್ದರು. ಈಗ ಕರಣ್ ಜೋಹರ್ ಅವರು ‘ಧಡಕ್ 2’ ಸಿನಿಮಾ ಅನೌನ್ಸ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.