ಚಿತ್ರರಂಗದ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಕರಣ್ ಜೋಹರ್ (Karan Johar) ಅವರದ್ದು ಕಲರ್ಫುಲ್ ವ್ಯಕ್ತಿತ್ವ. ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ನಿರ್ಮಾಪಕನಾಗಿ, ನಿರೂಪಕನಾಗಿ, ನಿರ್ದೇಶಕನಾಗಿ ಅವರು ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರಿಗೆ ಈಗ 51 ವರ್ಷ ವಯಸ್ಸು. ಸದ್ಯಕ್ಕಂತೂ ಅವರು ಮದುವೆ ಬಗ್ಗೆ ಯಾವುದೇ ಪ್ಲ್ಯಾನ್ ಇಟ್ಟುಕೊಂಡಿಲ್ಲ. ಬಾಡಿಗೆ ತಾಯಿ ಮೂಲಕ ಅವರು ಅವಳಿ ಮಕ್ಕಳನ್ನು ಪಡೆದು ಸಾಕುತ್ತಿದ್ದಾರೆ. ಕರಣ್ ಜೋಹರ್ ಅವರ ಲೈಂಗಿಕ ಆಸಕ್ತಿ ಬಗ್ಗೆ ಪದೇ ಪದೇ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ. ಅವರು ಸಲಿಂಗ ಕಾಮಿ (Gay) ಎಂದು ಅನೇಕರು ಊಹಿಸಿದ್ದಾರೆ. ಇತ್ತೀಚೆಗೆ ನೆಟ್ಟಿಗರೊಬ್ಬರು ಕರಣ್ ಜೋಹರ್ ಅವರಿಗೆ ನೇರವಾಗಿ ಈ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಬಂದ ಉತ್ತರ ಇಂಟರೆಸ್ಟಿಂಗ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಆಗಾಗ ಪ್ರಶ್ನೋತ್ತರ ನಡೆಸುತ್ತಾರೆ. ಸಾಮಾನ್ಯವಾಗಿ ಟ್ವಿಟರ್ನಲ್ಲಿ ಅಭಿಮಾನಿಗಳ ಜೊತೆ ಇಂಥ ಸಂವಾದ ನಡೆಯುತ್ತದೆ. ಈಗ ಸೋಶಿಯಲ್ ಮೀಡಿಯಾ ಜಗತ್ತಿಗೆ ಥ್ರೆಡ್ಸ್ ಎಂಟ್ರಿ ನೀಡಿದೆ. ಕರಣ್ ಜೋಹರ್ ಕೂಡ ಇದರಲ್ಲಿ ಖಾತೆ ತೆರೆದಿದ್ದಾರೆ. ಹಾಗಾಗಿ ಅವರು ಶನಿವಾರ (ಜುಲೈ 8) ಹತ್ತು ನಿಮಿಷಗಳ ಕಾಲ ಅಭಿಮಾನಿಗಳಿಂದ ಪ್ರಶ್ನೆ ಸ್ವೀಕರಿಸಿದರು. ಆಗ ಅವರಿಗೆ ಲೈಂಗಿಕತೆ ಬಗ್ಗೆ ಪ್ರಶ್ನೆ ಎದುರಾಯಿತು.
ಇದನ್ನೂ ಓದಿ: ಅಪಘಾತದ ವದಂತಿ ಬೆನ್ನಲ್ಲೇ ಶಾರುಖ್ ಖಾನ್ ಬಗ್ಗೆ ಇನ್ನೊಂದು ಗಾಸಿಪ್; ಕೂಡಲೇ ಸ್ಪಷ್ಟನೆ ನೀಡಿದ ಕರಣ್ ಜೋಹರ್
‘ನೀವು ಸಲಿಂಗ ಕಾಮಿ ಹೌದಲ್ಲವೇ’ ಎಂದು ನೆಟ್ಟಿಗರೊಬ್ಬರು ಯಾವುದೇ ಮುಲಾಜಿಲ್ಲದೇ ಪ್ರಶ್ನೆ ಎಸೆದಿದ್ದಾರೆ. ಅದಕ್ಕೆ ಕರಣ್ ಜೋಹರ್ ಅವರು ‘ಹೌದು’ ಅಥವಾ ‘ಇಲ್ಲ’ ಎಂದು ಉತ್ತರಿಸಿಲ್ಲ. ಅದರ ಬದಲಾಗಿ ‘ನಿಮಗೆ ಆಸಕ್ತಿ ಇದೆಯೇ’ ಎಂದು ಕರಣ್ ಜೋಹರ್ ಮರುಪ್ರಶ್ನೆ ಹಾಕಿದ್ದಾರೆ. ಅಲ್ಲಿಗೆ, ಬಹುತೇಕ ಅವರು ಒಪ್ಪಿಕೊಂಡಂತೆಯೇ ಆಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೇ ಇನ್ನೂ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.
ಇದನ್ನೂ ಓದಿ: ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಟ್ರೇಲರ್; ಕರಣ್ ಜೋಹರ್ ಅದ್ದೂರಿತನಕ್ಕೆ ಇಲ್ಲಿದೆ ಸಾಕ್ಷಿ
‘ನಿಮ್ಮ ಜೀವನದಲ್ಲಿ ಇರುವ ಕೊರಗು ಏನು’ ಎಂದು ಕೇಳಿದ್ದಕ್ಕೆ, ‘ಶ್ರೀದೇವಿ ಜೊತೆ ಸಿನಿಮಾ ಮಾಡಲು ಸಾಧ್ಯವಾಗದೇ ಇರುವುದು’ ಎಂದು ಕರಣ್ ಜೋಹರ್ ಉತ್ತರ ನೀಡಿದ್ದಾರೆ. ಸದ್ಯ, ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಜುಲೈ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.