Payal Ghosh: ‘ದೊಡ್ಡ ಸಿನಿಮಾ ಚಾನ್ಸ್ ಸಿಗಬೇಕು ಅಂದ್ರೆ ಅವರ ಜೊತೆ ಮಲಗಬೇಕು’: ನಟಿ ಪಾಯಲ್ ಘೋಷ್ ಶಾಕಿಂಗ್ ಹೇಳಿಕೆ
Casting Couch: ಕನ್ನಡದ ‘ವರ್ಷಧಾರೆ’ ಸಿನಿಮಾದಲ್ಲಿ ನಟಿಸಿದ್ದ ಪಾಯಲ್ ಘೋಷ್ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಕಾಸ್ಟಿಂಗ್ ಕೌಚ್ ಬಗ್ಗೆ ಅವರು ಮತ್ತೆ ಚರ್ಚೆ ಹುಟ್ಟುಹಾಕಿದ್ದಾರೆ.
ಸಿನಿಮಾದ ಪರದೆ ಮೇಲೆ ಬಣ್ಣ ಬಣ್ಣದ ದೃಶ್ಯಗಳು ಕಾಣುತ್ತವೆ. ಆದರೆ ತೆರೆಹಿಂದೆ ಕೆಲವು ಕರಾಳ ವಿಷಯಗಳು ಇರುತ್ತವೆ. ಈ ಹಿಂದೆ ಅನೇಕ ನಟಿಯರು ತಮಗೆ ಆದ ಕಹಿ ಅನುಭವಗಳ ಬಗ್ಗೆ ಮೀಟೂ (Me Too) ಅಭಿಯಾನದಲ್ಲಿ ಹೇಳಿಕೊಂಡಿದ್ದರು. ಹಾಗಂತ ಅಂಥ ಪ್ರಕರಣಗಳು ಇಂದಿಗೂ ನಿಂತಿಲ್ಲ. ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ (Casting Couch) ಭೂತದ ನೆರಳು ಆಗಾಗ ಸುಳಿಯುತ್ತದೆ. ಈಗ ನಟಿ ಪಾಯಲ್ ಘೋಷ್ ಅವರು ಒಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ‘ದೊಡ್ಡ ಸಿನಿಮಾದಲ್ಲಿ ಅವಕಾಶ ಸಿಗಬೇಕು ಎಂದರೆ ಅವರ ಜೊತೆ ಮಲಗಬೇಕು’ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಕೂಡಲೇ ಅದನ್ನು ಡಿಲೀಟ್ ಮಾಡಿದ್ದಾರೆ. ಪಾಯಲ್ ಘೋಷ್ (Payal Ghosh) ಅವರ ಈ ವರ್ತನೆಯಿಂದ ಚರ್ಚೆ ಶುರುವಾಗಿದೆ.
2008ರಿಂದಲೂ ಚಿತ್ರರಂಗದಲ್ಲಿ ಇರುವ ಪಾಯಲ್ ಘೋಷ್ ಅವರು ಈತನಕ ಮಾಡಿರುವುದು ಬೆರಣೆಳಿಕೆಯಷ್ಟು ಸಿನಿಮಾ ಮಾತ್ರ. 2010ರಲ್ಲಿ ಬಂದ ಕನ್ನಡದ ‘ವರ್ಷಧಾರೆ’ ಸಿನಿಮಾದಲ್ಲೂ ಅವರು ನಟಿಸಿದ್ದರು. ಈಗ ‘ಫೈರ್ ಆಫ್ ಲವ್: ರೆಡ್’ ಸಿನಿಮಾದಲ್ಲಿ ಪಾಯಲ್ ಘೋಷ್ ಅಭಿನಯಿಸಿದ್ದಾರೆ. ಇದು ಅವರ 11ನೇ ಸಿನಿಮಾ. ಚಿತ್ರರಂಗದಲ್ಲಿ ಕಾಂಪ್ರಮೈಸ್ ಆದರೆ ಮಾತ್ರ ಹೆಚ್ಚು ಸಿನಿಮಾಗಳನ್ನು ಮಾಡಲು ಸಾಧ್ಯ ಎಂಬುದು ಪಾಯಲ್ ಘೋಷ್ ಅಭಿಪ್ರಾಯ. ಅದನ್ನೇ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಕಹಿ ಸತ್ಯ ಅನಾವರಣ; ಮತ್ತೆ ಮೀಟೂ ಬಿರುಗಾಳಿ ಎಬ್ಬಿಸಿದ ನಟಿ ಆಶಿತಾ
‘ನಾನು ಮಲಗಿದ್ದಿದ್ದರೆ ಇಂದು 30 ಸಿನಿಮಾ ಮಾಡಿರುತ್ತಿದ್ದೆ. ದೊಡ್ಡ ಸಿನಿಮಾಗಳ ಆಫರ್ ಸಿಗಬೇಕು ಎಂದರೆ ಅವರ ಜೊತೆ ಮಲಗಬೇಕು. ಮಲಗದ ಹೊರತು ಅದು ಸಾಧ್ಯವಿಲ್ಲ’ ಎಂದು ಪಾಯಲ್ ಘೋಷ್ ಬರೆದುಕೊಂಡಿದ್ದರು. ಇದು ನೆಟ್ಟಿಗರ ಗಮನ ಸೆಳೆಯಿತು. ಯಾರ ಬಗ್ಗೆ ಪಾಯಲ್ ಘೋಷ್ ಈ ರೀತಿ ಹೇಳಿರಬಹುದು ಎಂಬ ಚರ್ಚೆ ಶುರುವಾಯಿತು. ಜನರಿಂದ ಹಲವು ಪ್ರಶ್ನೆಗಳು ಬರಲು ಆರಂಭವಾದವು. ಕೂಡಲೇ ಅವರು ಪೋಸ್ಟ್ ಡಿಲೀಟ್ ಮಾಡಿದರು. ಆ ಮೂಲಕ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯ ಹೆಸರನ್ನು ಪಾಯಲ್ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: Payal Ghosh: ಸ್ಯಾಂಡಲ್ವುಡ್ನಲ್ಲಿ ಮಿಂಚಿದ್ದ ನಟಿ ಪಾಯಲ್ ಘೋಷ್ ಮೇಲೆ ಹಲ್ಲೆ ಮತ್ತು ಆಸಿಡ್ ದಾಳಿಗೆ ಯತ್ನ
ಪಾಯಲ್ ಘೋಷ್ ಅವರು ಈ ರೀತಿ ಆರೋಪ ಮಾಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಅವರು ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಆರೋಪ ಹೊರಿಸಿದ್ದರು. ತಮಗೆ ಮುಂಬೈನಲ್ಲಿ ಅನುರಾಗ್ ಕಶ್ಯಪ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಆ ಆರೋಪಗಳನ್ನು ಅನುರಾಗ್ ಕಶ್ಯಪ್ ತಳ್ಳಿ ಹಾಕಿದ್ದರು. ಲೈಂಗಿಕ ಕಿರುಕುಳ ನಡೆದಿತ್ತು ಎನ್ನಲಾದ ದಿನದಂದು ತಾವು ಮುಂಬೈನಲ್ಲಿ ಇರಲೇ ಇಲ್ಲ ಎಂಬ ದಾಖಲೆಯನ್ನು ಪೊಲೀಸರಿಗೆ ಒದಗಿಸುವ ಮೂಲಕ ಅನುರಾಗ್ ಕಶ್ಯಪ್ ಅವರು ಆರೋಪಮುಕ್ತರಾಗಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.