ನಟ ಶಾರುಖ್ ಖಾನ್ (Shah Rukh Khan) ಅವರು ಹಲವು ಕಾರಣಗಳಿಂದ ಸುದ್ದಿ ಆಗುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಅಪಘಾತ ಆಗಿದೆ ಎಂದು ವದಂತಿ ಹಬ್ಬಿತ್ತು. ಶೂಟಿಂಗ್ ವೇಳೆ ಅವರ ಮೂಗಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿತ್ತು. ಆದರೆ ಆದು ನಿಜವಲ್ಲ ಎಂಬ ಅನುಮಾನ ಮೂಡಿದೆ. ಅದರ ಬೆನ್ನಲ್ಲೇ ಮತ್ತೊಂದು ಗಾಸಿಪ್ ಹಬ್ಬಿತ್ತು. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ (Rocky Aur Rani Ki Prem Kahani) ಸಿನಿಮಾದಲ್ಲಿ ಶಾರುಖ್ ಖಾನ್ ಅವರು ಅತಿಥಿ ಪಾತ್ರ ಮಾಡಿರಬಹುದು ಎಂಬ ಗುಮಾನಿ ಅಭಿಮಾನಿಗಳಿಗೆ ಇತ್ತು. ಆ ಬಗ್ಗೆ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಸ್ಪಷ್ಟನೆ ನೀಡಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಿಲ್ಲ ಎಂದು ಅವರು ಹೇಳಿದ್ದಾರೆ.
‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಟ್ರೇಲರ್ ಜುಲೈ 4ರಂದು ಬಿಡುಗಡೆ ಆಗಿ ಸದ್ದು ಮಾಡುತ್ತಿದೆ. ಬಹಳ ಅದ್ದೂರಿಯಾಗಿ ಈ ಟ್ರೇಲರ್ ಮೂಡಿಬಂದಿದೆ. ಜುಲೈ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಇದರಲ್ಲಿ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅವರು ಜೋಡಿಯಾಗಿ ಅಭಿನಯಿಸಿದ್ದಾರೆ. ಅಲ್ಲದೇ, ಪೋಷಕ ಪಾತ್ರಗಳಲ್ಲಿ ಧರ್ಮೇಂದ್ರ, ಶಬ್ನಾ ಆಜ್ಮಿ, ಜಯಾ ಬಚ್ಚನ್, ರೋನಿತ್ ರಾಯ್, ಕರ್ಮವೀರ್ ಚೌದರಿ, ಸಾಸ್ವತ ಚಟರ್ಜಿ ಮುಂತಾದವರು ನಟಿಸಿದ್ದಾರೆ. ಅಲ್ಲದೇ ಬಾಲಿವುಡ್ನ ಕೆಲವು ಸ್ಟಾರ್ ಕಲಾವಿದರು ಅತಿಥಿ ಪಾತ್ರ ಮಾಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕರಣ್ ಜೋಹರ್ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅವರ ಸಿನಿಮಾಗಳಲ್ಲಿ ಬಹುತಾರಾಗಣ ಇರುತ್ತದೆ. ಶಾರುಖ್ ಖಾನ್ ಜೊತೆ ಕರಣ್ ಜೋಹರ್ ಅವರಿಗೆ ಬಹಳ ಆತ್ಮೀಯತೆ ಇದೆ. ಹಾಗಾಗಿ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿರಬಹುದು ಎಂದು ಫ್ಯಾನ್ಸ್ ಊಹಿಸಿದ್ದರು. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಕರಣ್ ಜೋಹರ್ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: Karan Johar: ಬ್ರಿಟನ್ ಪಾರ್ಲಿಮೆಂಟ್ನಲ್ಲಿ ಕರಣ್ ಜೋಹರ್ಗೆ ಸಿಗಲಿದೆ ವಿಶೇಷ ಗೌರವ
‘ಶಾರುಖ್ ಖಾನ್ ಅವರು ಈ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಅವರ ಪ್ರೀತಿ ಮತ್ತು ಆಶೀರ್ವಾದ ನಮ್ಮ ಸಿನಿಮಾದ ಮೇಲಿದೆ. ಅವರು ನನ್ನ ಕುಟುಂಬದ ಸದಸ್ಯನಿದ್ದಂತೆ’ ಎಂದು ಕರಣ್ ಜೋಹರ್ ಹೇಳಿದ್ದಾರೆ. ಇನ್ನು, ಸ್ವತಃ ಕರಣ್ ಜೋಹರ್ ಈ ಸಿನಿಮಾದಲ್ಲಿ ನಟಿಸಿರಬಹುದಾ ಎಂಬ ಪ್ರಶ್ನೆ ಕೂಡ ಎದುರಾಯಿತು. ಅದಕ್ಕೂ ಅವರು ‘ನೋ’ ಎಂದು ಉತ್ತರಿಸಿದ್ದಾರೆ. ಈ ಚಿತ್ರದಲ್ಲಿ ಮೂವರು ಕಲಾವಿದರು ಅತಿಥಿ ಪಾತ್ರ ಮಾಡಿದ್ದಾರೆ. ಅವರು ಯಾರು ಎಂಬ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗತ್ತಿದೆ. ವರುಣ್ ಧವನ್, ಸಾರಾ ಅಲಿ ಖಾನ್, ಅನನ್ಯಾ ಪಾಂಡೆ ಹೆಸರುಗಳು ಹರಿದಾಡುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.