ನಷ್ಟ ಆಗದಂತೆ ಸಿನಿಮಾ ನಿರ್ಮಾಣ ಮಾಡುವುದು ಹೇಗೆ? ಕರಣ್ ಜೋಹರ್ ಪಾಲಿಸುವ ಸೂತ್ರವಿದು
Movie Production: ಕರಣ್ ಜೋಹರ್ ಸಿನಿಮಾ ನಿರ್ಮಾಣ ಮಾಡುವುದು ಹೇಗೆ? ನಷ್ಟ ರಹಿತವಾಗಿ ಸಿನಿಮಾ ನಿರ್ಮಿಸುವುದಕ್ಕೆ ಕರಣ್ ಕಂಡುಕೊಂಡಿರುವ ಸೂತ್ರವಿದು.
ಬಾಲಿವುಡ್ (Bollywood) ಬ್ಯಾಡ್ ಬಾಯ್ಗಳ ಪಟ್ಟಿಯಲ್ಲಿ ಕರಣ್ ಜೋಹರ್ (Karan Johar) ಹೆಸರೂ ಕೇಳಿ ಬರುತ್ತದೆ. ಪಾರ್ಟಿ ಫ್ಲೀಕ್, ತನ್ನ ಶೋನಲ್ಲಿ ಇತರರ ಲೈಂಗಿಕತೆ ಬಗ್ಗೆ ಅನವಶ್ಯಕ ಕುತೂಹಲ ತೋರುವ ಮಾತುಗಳನ್ನಾಡುವುದು, ವಯಸ್ಸಿಗೆ ಅತಿಎನಿಸುವ ಫ್ಯಾಷನ್ ಮಾಡುವುದು, ನೆಪೊಟಿಸಮ್ಗೆ ಭರಪೂರ ಬೆಂಬಲ ನೀಡುವುದು ಹೀಗೆ ಕರಣ್ ಜೋಹರ್ ಮೇಲೆ ಹಲವು ಆರೋಪಗಳಿವೆ. ಇವೆಲ್ಲವುಗಳ ನಡುವೆ ಕರಣ್ ಜೋಹರ್ ಬಾಲಿವುಡ್ನ ಒಬ್ಬ ಟಾಪ್ ಬ್ಯುಸಿನೆಸ್ಮ್ಯಾನ್. ಶಾರುಖ್ ಖಾನ್ ಸೇರಿದಂತೆ ಹಲವರು ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಬ್ಯುಸಿನೆಸ್ (Business) ವಿಷಯಕ್ಕೆ ಬಂದರೆ ಕರಣ್ ಜೋಹರ್ ಬಹಳ ಕಟ್ಟುನಿಟ್ಟು.
ತಂದೆ ನಿಧನ ಬಳಿಕ ಕರಣ್ ಕೈಗೆ ಬಂದ ಧರ್ಮಾ ಪ್ರೊಡಕ್ಷನ್ ಅನ್ನು ಅವರು ಬೆಳೆಸಿದ ರೀತಿ ಅದ್ಭುತ. ಕರಣ್ ಜೋಹರ್ ಇತ್ತೀಚೆಗೆ ಬ್ಯುಸಿನೆಸ್ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಾವು ಸಿನಿಮಾ ಒಂದನ್ನು ನಿರ್ಮಿಸುವಾಗ ಹಾಕುವ ಲೆಕ್ಕಾಚಾರಗಳೇನು? ಎಂಬ ಬಗ್ಗೆ ವಿವರಿಸಿದ್ದಾರೆ.
ಕರಣ್ ಜೋಹರ್ ಯಾವುದೇ ಸಿನಿಮಾ ನಿರ್ಮಾಣ ಮಾಡಬೇಕಾದರೂ ಆ ಸಿನಿಮಾ ಸೋತರೆ ಏನಾಗಬಹುದು ಎಂಬ ಲೆಕ್ಕಾಚಾರದಲ್ಲಿಯೇ ಆ ಸಿನಿಮಾದ ಮೇಲೆ ಹಣ ಹೂಡುತ್ತಾರಂತೆ. ಅಂದರೆ ಸಿನಿಮಾ ನಿರ್ಮಾಣ ಮಾಡುವಾಗಲೇ ಆ ಸಿನಿಮಾದ ಡಿಜಿಟಲ್ ಹಕ್ಕು, ಸ್ಯಾಟಲೈಟ್ ಹಕ್ಕು, ಆಡಿಯೋ ಹಕ್ಕುಗಳು ಎಷ್ಟಕ್ಕೆ ವ್ಯಾಪಾರ ಆಗಬಹುದು ಎಂಬ ಲೆಕ್ಕಾಚಾರ ಹಾಕಿ ಅದಕ್ಕೆ ತಕ್ಕಂತೆ ಅಷ್ಟೆ ಆ ಸಿನಿಮಾಕ್ಕೆ ಬಂಡವಾಳ ಹೂಡುತ್ತಾರೆ.
ಇದನ್ನು ಉದಾಹರಣೆ ಸಹಿತ ವಿವರಿಸಿದ ಕರಣ್ ಜೋಹರ್, ನಾನು ಮಾಡುವ ಒಂದು ಸಿನಿಮಾಕ್ಕೆ ಅದರ ಸ್ಟಾರ್ ವ್ಯಾಲ್ಯು ಆಧಾರದ ಮೇಲೆ ಡಿಜಿಟಲ್ ಹಕ್ಕು 40 ಕೋಟಿಗೆ, ಸ್ಯಾಟಲೈಟ್ ಹಕ್ಕು 20 ಕೋಟಿಗೆ ಹಾಗೂ ಆಡಿಯೋ ಹಕ್ಕು 15 ಕೋಟಿಗೆ ವ್ಯಾಪಾರ ಆಗಲಿದೆ ಎಂದು ಅನಿಸಿದರೆ ನಾನು ಆ ಸಿನಿಮಾಕ್ಕೆ ಸುಮಾರು 70 ರಿಂದ 80 ಕೋಟಿ ಬಂಡವಾಳ ಹಾಕುತ್ತೇನೆ. ಒಂದೊಮ್ಮೆ ಸಿನಿಮಾ ಅಟ್ಟರ್ ಫ್ಲಾಪ್ ಆದರೂ ಸಹ ನಾನು ಹಾಕಿದ ಬಂಡವಾಳದ ಬಹುಪಾಲು ಭಾಗ ನನಗೆ ವಾಪಸ್ಸಾಗಿರುತ್ತದೆ. ಬಂಡವಾಳ ವಾಪಸ್ ಪಡೆಯುವ ಬಗ್ಗೆ ನಾನು ಸದಾ ಜಾಗೃತೆ ವಹಿಸುತ್ತೇನೆ ಎಂದಿದ್ದಾರೆ ಕರಣ್ ಜೋಹರ್.
ಯಾವುದೇ ಸಿನಿಮಾ ಆಗಲಿ ಅದರ ನಿರ್ಮಾಣ ವೆಚ್ಚ ಹಾಗೂ ಪ್ರಚಾರ ವೆಚ್ಚವನ್ನು ನಾವು ಸೇಫ್ ಮಾಡಿದಷ್ಟು ಸಿನಿಮಾ ಲಾಭ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಸಿನಿಮಾ ಸಾಧಾರಣವಾಗಿ ಓಡಿದರೂ ಒಟ್ಟು ಕಲೆಕ್ಷನ್ನ ಸುಮಅರು 50% ನಿರ್ಮಾಪಕನಿಗೆ ನಿಗುತ್ತದೆಯಾದ್ದರಿಂದ ನಿರ್ಮಾಪಕ ಸೇಫ್ ಆಗಿರುತ್ತಾನೆ ಎಂದಿದ್ದಾರೆ ಕರಣ್ ಜೋಹರ್. ”ಯಾವುದೇ ಸಿನಿಮಾ ಆಗಲಿ ಸೋಲುವುದಿಲ್ಲ, ಸೋಲುವುದು ಬಜೆಟ್ ಮಾತ್ರ” ಎಂಬುದನ್ನು ತಾವು ಬಹುವಾಗಿ ನಂಬಿರುವುದಾಗಿ ಹೇಳಿರುವ ಕರಣ್ ಜೋಹರ್, ಸಿನಿಮಾದ ಕತೆ, ಸ್ಟಾರ್ಗಳ ಆಧಾರದಲ್ಲಿ ಸೂಕ್ತವಾಗಿ ಬಜೆಟ್ ಹಾಕಿದರೆ ಪ್ರತಿ ಸಿನಿಮಾ ಸಹ ಹಿಟ್ ಆಗುತ್ತದೆ ಎನ್ನುತ್ತಾರೆ.
ಇದೇ ಸಂದರ್ಶನದಲ್ಲಿ ಯುವಸ್ಟಾರ್ ನಟರ ಬಗ್ಗೆ ಮಾತನಾಡಿರುವ ಕರಣ್ ಜೊಹರ್, ಕೆಲವು ಅದ್ಭುತವಾದ ನಟರು ಇದ್ದಾರೆ. ಅವರು, ಶಾರುಖ್ ಖಾನ್, ಸಲ್ಮಾನ್, ಆಮಿರ್, ಹೃತಿಕ್, ಅಜಯ್ ದೇವಗನ್, ಅಕ್ಷಯ್ ಅವರಿಗಿಂತಲೂ ಚಾರ್ಮಿಂಗ್ ಇರಬಹುದು, ಇವರೆಲ್ಲರಿಗಿಂತಲೂ ಜನಪ್ರಿಯ ಸಹ ಇರಬಹುದೇನೋ ಆದರೆ ಸ್ಟಾರ್ ವ್ಯಾಲ್ಯೂ ಎಂಬುದು ಸಿನಿಮಾ ನಿರ್ಮಾಣದಲ್ಲಿ ಮುಖ್ಯವಾಗುತ್ತದೆ. ಜನಪ್ರಿಯ ಆದೊಡನೆ ನಿನ್ನ ಸಿನಿಮಾ ನೋಡಲು ಜನ ಬರುತ್ತಾರೆ ಎಂದೇನಿಲ್ಲ, ಯೂಟ್ಯೂಬ್ ವಿಡಿಯೋ ಮಾಡುವವನು ಸಹ ಜನಪ್ರಿಯ ಆಗಿರುತ್ತಾನೆ. ಇದನ್ನು ಯುವನಟರು ಅರ್ಥಮಾಡಿಕೊಳ್ಳಬೇಕು. ಥಿಯೇಟರ್ಗೆ ಜನರನ್ನು ಯಾರು ಕರೆದುಕೊಂಡು ಬರುತ್ತಾರೋ ಅವರನ್ನು ಸ್ಟಾರ್ ಎನ್ನುತ್ತಾರೆ ಅವರಿಗೆ ಪ್ರತ್ಯೇಕವಾದ ಸ್ಟಾರ್ ವಾಲ್ಯೂ ಇದೆ” ಎಂದಿದ್ದಾರೆ ಕರಣ್ ಜೋಹರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ