ಬಾಲಿವುಡ್ನಲ್ಲಿ ನಟ ಸಂಜಯ್ ದತ್ ಸೂಪರ್ ಸ್ಟಾರ್. ಅವರ ಕಾಲ್ಶೀಟ್ ಸಖತ್ ಡಿಮ್ಯಾಂಡ್ ಇದೆ. ‘ಕೆಜಿಎಫ್: ಚಾಪ್ಟರ್ 2’ ಮೂಲಕ ಅವರು ಕನ್ನಡ ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ‘ಅಧೀರ’ ಎಂಬ ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ನಲ್ಲಿ ಅವರು ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ ಅವರ ಹಾದಿ ಅಷ್ಟು ಸುಲಭವಾಗಿ ಇರಲಿಲ್ಲ. ಅವರ ತಂದೆ ಸುನಿಲ್ ದತ್ ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿದ್ದರು. ಹಾಗಿದ್ದರೂ ಕೂಡ ಅವರು ತಮ್ಮ ಮಗನಿಗೆ ಮೊದಲ ಸಿನಿಮಾದ ಸೆಟ್ನಲ್ಲಿ ಐಷಾರಾಮಿ ಸೌಲಭ್ಯಗಳನ್ನು ನೀಡಿರಲಿಲ್ಲ. ಆ ವಿಚಾರದ ಬಗ್ಗೆ ಇತ್ತೀಚೆಗೆ ಸಂಜಯ್ ದತ್ ಬಾಯಿ ಬಿಟ್ಟಿದ್ದಾರೆ. ತಮ್ಮ ಮೊದಲ ಸಿನಿಮಾದ ಶೂಟಿಂಗ್ ವೇಳೆ ನಡೆದ ಒಂದು ಘಟನೆಯನ್ನು ಸಂಜಯ್ ದತ್ ನೆನಪಿಸಿಕೊಂಡಿದ್ದಾರೆ.
ಸಂಜಯ್ ದತ್ ನಟಿಸಿದ ಮೊದಲ ಸಿನಿಮಾ ‘ರಾಕಿ’. ಆ ಚಿತ್ರವನ್ನು ಅವರ ತಂದೆ ಸುನಿಲ್ ದತ್ ನಿರ್ದೇಶಿಸಿದ್ದರು. ಆದರೂ ತಮ್ಮ ಮಗನಿಗೆ ಅವರು ವಿಐಪಿ ಟ್ರೀಟ್ಮೆಂಟ್ ನೀಡಿರಲಿಲ್ಲ. ಒಬ್ಬ ಹೊಸ ಹೀರೋ ಕಷ್ಟಪಡುವ ರೀತಿಯಲ್ಲೇ ಸಂಜಯ್ ದತ್ ಕೂಡ ಶ್ರಮಿಸಬೇಕಿತ್ತು. ಎಷ್ಟರಮಟ್ಟಿಗೆಂದರೆ, ಹಸಿವಾದಾಗ ಊಟ ಮಾಡಲು ಕೂಡ ಅವರಿಗೆ ಅವಕಾಶ ಇರಲಿಲ್ಲ!
‘ನಮ್ಮ ಅಪ್ಪನೇ ನಿರ್ದೇಶನ ಮಾಡುತ್ತಿದ್ದರಿಂದ ‘ರಾಕಿ’ ಸಿನಿಮಾದಲ್ಲಿ ಕೆಲಸ ಮಾಡುವುದು ನನಗೆ ತುಂಬ ಕಷ್ಟವಾಗಿತ್ತು. ಆಗ ಮಧ್ಯಾಹ್ನ ಊಟದ ಬ್ರೇಕ್ ಇರುತ್ತಿರಲಿಲ್ಲ. ಕಡಿಮೆ ಸಮಯ ತೆಗೆದುಕೊಂಡು ಏನಾದರೂ ತಿಂದು ಬರಬಹುದಷ್ಟೇ ಎಂದು ಸಹಾಯಕ ನಿರ್ದೇಶಕರೊಬ್ಬರು ನನಗೆ ಹೇಳಿದರು. ಹಾಗಾಗಿ ನಾನು ತಿನ್ನಲು ಕುಳಿತೆ. ಅದೇ ಸಮುದಲ್ಲಿ ಅಪ್ಪ ಶೂಟಿಂಗ್ಗೆ ರೆಡಿ ಆಗಿದ್ದರು. ನಾನು ಸ್ಥಳದಲ್ಲಿ ಇಲ್ಲದಿರುವುದನ್ನು ಗಮನಿಸಿದ ಅವರು ಕೂಡಲೇ ನನ್ನನ್ನು ಕರೆಸಿದರು. ಊಟಕ್ಕೆ ಬ್ರೇಕ್ ತೆಗೆದುಕೊಂಡಿದ್ದಕ್ಕಾಗಿ ಹಿಗ್ಗಾಮುಗ್ಗಾ ಬೈಯ್ದರು’ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಸಂಜಯ್ ದತ್.
‘ನಿನಗೆ ಊಟಕ್ಕೆ ಹೋಗು ಅಂತ ಹೇಳಿದ್ದು ಯಾರು? ನಾನು ಬ್ರೇಕ್ ಅಂತ ಹೇಳಿದ್ನಾ? ನಿರ್ದೇಶಕರ ಮಗ ಅಂತ ಈ ರೀತಿ ಮಾಡ್ತಾ ಇದೀಯಾ’ ಎಂದು ಸುನಿಲ್ ಕೂಗಾಡಿದ್ದರಂತೆ. ‘ಶೂಟಿಂಗ್ ಸೆಟ್ನಲ್ಲಿ ಅಪ್ಪನನ್ನು ನಾನು ಸರ್ ಅಂತ ಕರೆಯುತ್ತಿದ್ದೆ’ ಎಂದು ಕೂಡ ಸಂಜಯ್ ದತ್ ಹೇಳಿದ್ದಾರೆ. ಇಷ್ಟೆಲ್ಲ ಕಷ್ಟಪಟ್ಟು ಅವರು ಮಾಡಿದ ಮೊದಲ ಸಿನಿಮಾ ಸೂಪರ್ ಹಿಟ್ ಆಯಿತು. ಆದರೆ ಆ ಚಿತ್ರವನ್ನು ನೋಡಲು ಸಂಜಯ್ ದತ್ ತಾಯಿ ನರ್ಗೀಸ್ ದತ್ ಇರಲಿಲ್ಲ. ಸಿನಿಮಾ ಬಿಡುಗಡೆ ಆಗುವುದಕ್ಕೂ ಕೆಲವೇ ದಿನಗಳ ಮುನ್ನ ಅವರು ಕ್ಯಾನ್ಸರ್ನಿಂದ ನಿಧನರಾದರು. ಆ ಚಿತ್ರದ ಪ್ರೀಮಿಯರ್ ಪ್ರದರ್ಶನದ ದಿನ ಚಿತ್ರಮಂದಿರದಲ್ಲಿ ನರ್ಗೀಸ್ ದತ್ಗಾಗಿ ಒಂದು ಸೀಟ್ ಖಾಲಿ ಬಿಡಲಾಗಿತ್ತು.
ಇದನ್ನೂ ಓದಿ:
ಬಾಯ್ಫ್ರೆಂಡ್ ಕಳೆದುಕೊಂಡಿದ್ದ ಸಂಜಯ್ ದತ್ ಪುತ್ರಿಗೆ ಅಭಿಮಾನಿಯ ಪ್ರಪೋಸ್; ಒಪ್ಪಿಕೊಂಡ್ರಾ ತ್ರಿಶಾಲಾ?
ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್: ಪ್ರಶಾಂತ್ ನೀಲ್ ಬೇಡಿಕೆಗೆ ನೋ ಎಂದ ಸಂಜಯ್ ದತ್