Kriti Sanon: ಸುಶಾಂತ್​ ಸ್ಮರಣೆಯಲ್ಲಿ ತಮ್ಮ ನಿರ್ಮಾಣ ಸಂಸ್ಥೆಗೆ ಹೆಸರಿಟ್ಟ ಕೃತಿ ಸನೋನ್​; ಏನಿದು ನಂಟು?

Sushant Singh Rajput: ಕೃತಿ ಸನೋನ್​ ಅವರು ನಟನೆಯಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಈಗ ನಿರ್ಮಾಪಕಿಯಾಗಿ ನೆಲೆ ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ.

Kriti Sanon: ಸುಶಾಂತ್​ ಸ್ಮರಣೆಯಲ್ಲಿ ತಮ್ಮ ನಿರ್ಮಾಣ ಸಂಸ್ಥೆಗೆ ಹೆಸರಿಟ್ಟ ಕೃತಿ ಸನೋನ್​; ಏನಿದು ನಂಟು?
ಸುಶಾಂತ್​ ಸಿಂಗ್​ ರಜಪೂತ್​, ಕೃತಿ ಸನೋನ್​

Updated on: Jul 06, 2023 | 6:59 PM

ನಟಿ ಕೃತಿ ಸನೋನ್​ (Kriti Sanon) ಅವರು ಇತ್ತೀಚೆಗೆ ರಿಲೀಸ್​ ಆದ ‘ಆದಿಪುರುಷ್​’ ಸಿನಿಮಾದಲ್ಲಿ ಸೀತೆಯ ಪಾತ್ರ ಮಾಡಿದ್ದರು. ಆ ಸಿನಿಮಾದಿಂದ ಅವರು ದೊಡ್ಡ ಗೆಲುವು ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಹಾಗಾಗಲಿಲ್ಲ. ಆ ಚಿತ್ರಕ್ಕೆ ಜನಮೆಚ್ಚುಗೆ ಸಿಕ್ಕಿದ್ದಕ್ಕಿಂತ ಟ್ರೋಲ್​ ಆಗಿದ್ದೇ ಹೆಚ್ಚು. ಈಗ ಕೃತಿ ಸನೋನ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಅವರ ಹೊಸ ಪ್ರೊಡಕ್ಷನ್​ ಹೌಸ್​. ಹೌದು, ಕೃತಿ ಸನೋನ್​ ಈಗ ನಿರ್ಮಾಪಕಿ ಆಗಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಗೆ ಅವರು ‘ಬ್ಲ್ಯೂ ಬಟರ್​ಫ್ಲೈ ಫಿಲ್ಮ್ಸ್​’ (Blue Butterfly Films) ಎಂದು ಹೆಸರು ಇಟ್ಟಿದ್ದಾರೆ. ಸುಶಾಂತ್​ ಸಿಂಗ್ ರಜಪೂತ್​ (Sushant Singh Rajput) ಅವರ ಸ್ಮರಣೆಗಾಗಿ ಅವರು ಈ ಹೆಸರು ಆಯ್ಕೆ ಮಾಡಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಸುಶಾಂತ್​ ಸಿಂಗ್ ರಜಪೂತ್​ ಅವರನ್ನು ಕಳೆದುಕೊಂಡಿದ್ದು ಬಾಲಿವುಡ್​ ಪಾಲಿಗೆ ತುಂಬಲಾರದ ನಷ್ಟ. 2020ರ ಜೂನ್​ 14ರಂದು ಅವರು ಅನುಮಾನಾಸ್ಪದ ರೀತಿಯಲ್ಲಿ ನಿಧನರಾದರು. ಅವರ ಜೊತೆಗೆ ಕೃತಿ ಸನೋನ್​ಗೆ ಆತ್ಮೀಯತೆ ಇತ್ತು. ಇಬ್ಬರೂ ‘ರಾಬ್ತಾ‘ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಆ ಸಿನಿಮಾದ ಶೂಟಿಂಗ್​ ವೇಳೆ ಅವರಿಬ್ಬರು ಡೇಟಿಂಗ್​ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ ಆ ಬಗ್ಗೆ ಎಂದಿಗೂ ಅವರು ಬಹಿರಂಗವಾಗಿ ಮಾತನಾಡಿರಲಿಲ್ಲ. ಅಗಲಿದ ಗೆಳೆಯನ ಸ್ಮರಣೆಯಲ್ಲೇ ಕೃತಿ ಸನೋನ್​ ಅವರು ತಮ್ಮ ನಿರ್ಮಾಣ ಸಂಸ್ಥೆಗೆ ಹೆಸರು ಇಟ್ಟಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.

ಸುಶಾಂತ್​ ಸಿಂಗ್ ರಜಪೂತ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ನೀಲಿ ಬಣ್ಣದ ಚಿಟ್ಟೆಯ (ಬ್ಲ್ಯೂ ಬಟರ್​ಫ್ಲೈ) ಎಮೋಜಿಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಆ ಬಗ್ಗೆ ಅಭಿಮಾನಿಗಳಿಗೆ ಸಖತ್​ ಕುತೂಹಲ ಇತ್ತು. ಅದು ತುಂಬ ಮಹತ್ವದ ಎಮೋಜಿ ಎಂದು ಸುಶಾಂತ್ ಸಿಂಗ್​ ರಜಪೂತ್​ ಅವರು ಹೇಳಿದ್ದರು. ಈಗ ಕೃತಿ ಸನೋನ್​ ಅವರು ತಮ್ಮ ನಿರ್ಮಾಣ ಸಂಸ್ಥೆಗೆ ‘ಬ್ಲ್ಯೂ ಬಟರ್​ಫ್ಲೈ ಫಿಲ್ಮ್ಸ್​’ ಎಂದು ಹೆಸರು ಇಟ್ಟಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

Kriti Sanon: ‘ಆದಿಪುರುಷ್​’ ನಟಿ ಕೃತಿ ಸನೋನ್​ ಬೇಡಿಕೆ ಕುಸಿತ; 4ನೇ ಬಾರಿ ತಗ್ಗಿತು ಸಂಭಾವನೆ?

ಬಾಲಿವುಡ್​ನಲ್ಲಿ ಕೃತಿ ಸನೋನ್​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ನಟನೆಯಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ. ‘ಮಿಮಿ’ ಸಿನಿಮಾದಲ್ಲಿನ ಅವರ ನಟನೆಗೆ ಫ್ಯಾನ್ಸ್​ ಫಿದಾ ಆದರು. ಈಗ ನಿರ್ಮಾಪಕಿಯಾಗಿ ಅವರು ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ. ಸುಶಾಂತ್​ ಸಿಂಗ್​ ರಜಪೂತ್​ ಅವರ ಅಭಿಮಾನಿಗಳಿಂದಲೂ ಕೃತಿ ಸನೋನ್​ಗೆ ಶುಭ ಹಾರೈಕೆಗಳು ಬರುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us