Kriti Sanon: ‘ಆದಿಪುರುಷ್’ ನಟಿ ಕೃತಿ ಸನೋನ್ ಬೇಡಿಕೆ ಕುಸಿತ; 4ನೇ ಬಾರಿ ತಗ್ಗಿತು ಸಂಭಾವನೆ?
Kriti Sanon Remuneration: ಒಂದು ಕಾಲದಲ್ಲಿ 7ರಿಂದ 8 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಕೃತಿ ಸನೋನ್ ಅವರು ಈಗ 3 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ‘ಆದಿಪುರುಷ್’ ಸೋಲಿನಿಂದ ಅವರಿಗೆ ಹಿನ್ನಡೆ ಆಗಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಆದಿಪುರುಷ್’ (Adipurush) ಸಿನಿಮಾದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ದೊಡ್ಡ ಗೆಲುವು ಸಿಗಬೇಕಿತ್ತು. ಆದರೆ ಸಿನಿಮಾ ಚೆನ್ನಾಗಿ ಮೂಡಿಬಂದಿಲ್ಲ ಎಂಬ ಕಾರಣಕ್ಕೆ ಆ ತಂಡದ ಎಲ್ಲರಿಗೂ ಹಿನ್ನಡೆ ಆಗಿದೆ. ರಾಮಾಯಣದ ಕಥೆ ಆಧರಿಸಿ ಮೂಡಿಬಂದ ಈ ಸಿನಿಮಾದಲ್ಲಿ ಕೃತಿ ಸನೋನ್ (Kriti Sanon) ಅವರು ಸೀತೆಯ ಪಾತ್ರ ಮಾಡಿದ್ದಾರೆ. ಈ ಪಾತ್ರಕ್ಕೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ. ಅಲ್ಲದೇ, ಈ ಸಿನಿಮಾ ಬಿಡುಗಡೆ ಆದ ಬಳಿಕ ಕೃತಿ ಸನೋನ್ ಅವರಿಗೆ ಇದ್ದ ಬೇಡಿಕೆ ಕಡಿಮೆ ಆಗಿದೆ ಎನ್ನಲಾಗುತ್ತಿದೆ. ಹಾಗಾಗಿ ಅವರ ಸಂಭಾವನೆ (Kriti Sanon Remuneration) ಕೂಡ ತಗ್ಗುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಬಾಲಿವುಡ್ ಮತ್ತು ಟಾಲಿವುಡ್ ಅಂಗಳದಲ್ಲಿ ಗಾಸಿಪ್ ಕೇಳಿಬರುತ್ತಿದೆ.
ಕೃತಿ ಸನೋನ್ ಅವರು ಪ್ರತಿಭಾವಂತ ನಟಿ ಎಂಬುದರಲ್ಲಿ ಅನುಮಾನ ಇಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರ ಯಾವ ಸಿನಿಮಾ ಕೂಡ ಚಿತ್ರಮಂದಿರದಲ್ಲಿ ಗೆದ್ದಿಲ್ಲ. ಆ ಕಾರಣದಿಂದ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಮೂರು ಬಾರಿ ತಮ್ಮ ಸಂಭಾವನೆಯನ್ನು ತಗ್ಗಿಸಿಕೊಂಡಿದ್ದಾರೆ. ಈಗ ನಾಲ್ಕನೇ ಬಾರಿಗೆ ಅವರ ಸಂಭಾವನೆಗೆ ಕತ್ತರಿ ಬೀಳುತ್ತಿದೆ ಎಂದು ವರದಿ ಆಗಿದೆ.
ಇದನ್ನೂ ಓದಿ: Kriti Sanon: ಟ್ರೋಲ್ಗಳ ನಡುವೆಯೂ ಶಾಲೆ ಮಕ್ಕಳಿಗೆ ಉಚಿತವಾಗಿ ‘ಆದಿಪುರುಷ್’ ಚಿತ್ರ ತೋರಿಸಲು ಮುಂದಾದ ಕೃತಿ ಸನೋನ್
‘ಹೌಸ್ಫುಲ್’ ಸಿನಿಮಾ ಹಿಟ್ ಆದಾಗ ಕೃತಿ ಸನೋನ್ ಅವರು 7ರಿಂದ 8 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ‘ಪಾಣಿಪತ್’ ಮತ್ತು ‘ಬಚ್ಚನ್ ಪಾಂಡೆ’ ಸಿನಿಮಾಗಳು ಸೋತಾಗ ಅವರ ಸಂಭಾವನೆ 5 ಕೋಟಿ ರೂಪಾಯಿಗೆ ಕುಸಿಯಿತು. ‘ಭೇಡಿಯಾ’ ಚಿತ್ರಕ್ಕೆ ಅವರು 4 ಕೋಟಿ ರೂಪಾಯಿ ಪಡೆದುಕೊಂಡಿದ್ದರು. ‘ಆದಿಪುರುಷ್’ ಸಿನಿಮಾಗೆ ಅವರು ಪಡೆದಿದ್ದು 3 ಕೋಟಿ ರೂಪಾಯಿ ಮಾತ್ರ. ಈಗ ಆ ಮೊತ್ತ ಇನ್ನೂ ಕಡಿಮೆ ಆಗಲಿದೆ ಎಂದು ಕೆಲವು ಮಾಧ್ಯಮಗಳು ಸುದ್ದಿ ಪ್ರಕಟ ಮಾಡಿವೆ.
ನಟ-ನಟಿಯರ ಸಂಭಾವನೆ ಬಗ್ಗೆ ಯಾವಾಗಲೂ ಅಂತೆ-ಕಂತೆಗಳ ಸುದ್ದಿಯೇ ಹರಿದಾಡುತ್ತದೆ. ಎಷ್ಟು ಸಂಭಾವನೆ ಪಡೆದುಕೊಂಡೆವು ಎಂಬ ಮಾಹಿತಿಯನ್ನು ಯಾರೂ ಕೂಡ ಅಧಿಕೃತವಾಗಿ ಹೇಳುವುದಿಲ್ಲ. ಅದೆಲ್ಲವೂ ಅವರ ವೈಯಕ್ತಿಕ ವಿಚಾರ. ಹಾಗಿದ್ದರೂ ಕೂಡ ಗಾಸಿಪ್ ಕಾಲಂಗಳಲ್ಲಿ ತರಹೇವಾರಿ ಸುದ್ದಿಗಳು ಕಾಣಸಿಗುತ್ತವೆ. ಒಟಿಟಿಯಲ್ಲಿ ಕೃತಿ ಸನೋನ್ ಅವರಿಗೆ ಭಾರಿ ಬೇಡಿಕೆ ಇದೆ. ಅವರು ನಟಿಸಿದ ‘ಮಿಮಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಆ ಸಿನಿಮಾದ ‘ಪರಮ ಸುಂದರಿ’ ಹಾಡು ಸಖತ್ ವೈರಲ್ ಆಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.