CBFC: ‘72 ಹೂರೇ’ಚಿತ್ರದ ಟ್ರೇಲರ್ಗೆ ಪ್ರಮಾಣಪತ್ರ ನೀಡಲು ಸೆನ್ಸಾರ್ ಮಂಡಳಿ ನಕಾರ; ವಿವಾದಿತ ಚಿತ್ರದಲ್ಲಿ ಅಂಥದ್ದೇನಿದೆ?
72 Hoorain trailer: ಜುಲೈ 7ರಂದು ‘72 ಹೂರೇ’ ಸಿನಿಮಾ ಬಿಡುಗಡೆ ಆಗಲಿದೆ. ಆದರೆ ಈ ಸಿನಿಮಾದ ಟ್ರೇಲರ್ಗೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಸಿಕ್ಕಿಲ್ಲ. ಇದು ಚರ್ಚೆಗೆ ಕಾರಣ ಆಗಿದೆ.
ವಿವಾದಿತ ವಿಷಯಗಳ ಮೇಲೆ ಸಿನಿಮಾ ಮಾಡುವ ಟ್ರೆಂಡ್ ಈಗ ಭಾರತದಲ್ಲಿ ಜೋರಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ ಮುಂತಾದ ಸಿನಿಮಾಗಳೇ ಅದಕ್ಕೆ ಉದಾಹರಣೆ. ಈಗ ಮತ್ತೊಂದು ಸಿನಿಮಾ ಕೂಡ ಇದೇ ಮಾದರಿಯಲ್ಲಿ ಸಿದ್ಧವಾಗಿದೆ. ಈ ಚಿತ್ರದ ಹೆಸರು ‘72 ಹೂರೇ’. ಭಯೋತ್ಪಾದನೆಗೆ ಮುಸ್ಲಿಂ ಯುವಕರನ್ನು ತಳ್ಳುವುದರ ಹಿಂದಿನ ಹುನ್ನಾರದ ಬಗ್ಗೆ ಈ ಚಿತ್ರ ವಿವರಿಸುತ್ತದೆ ಎನ್ನಲಾಗಿದೆ. ಈ ಸಿನಿಮಾದ ಟ್ರೇಲರ್ಗೆ (72 Hoorain trailer) ಪ್ರಮಾಣಪತ್ರ ನೀಡಲು ಸೆನ್ಸಾರ್ ಮಂಡಳಿ (Censor Board) ನಿರಾಕರಿಸಿದೆ. ಇದರಿಂದ ಚಿತ್ರರಂಗದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಈ ವಿವಾದಿತ ಸಿನಿಮಾದಲ್ಲಿ ಏನಿದೆ ಎಂಬ ಪ್ರಶ್ನೆ ಮೂಡಿದೆ. ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ‘72 ಹೂರೇ’ (72 Hoorain) ಚಿತ್ರತಂಡದವರ ಪ್ರಶ್ನಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.
ಅಚ್ಚರಿ ಏನೆಂದರೆ, ‘72 ಹೂರೇ’ ಚಿತ್ರಕ್ಕೆ ಈ ಮೊದಲೇ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿದೆ. ಆದರೆ ಅದರ ಹೊಸ ಟ್ರೇಲರ್ಗೆ ಪ್ರಮಾಣ ಪತ್ರ ನೀಡಲು ಸೆನ್ಸಾರ್ ಮಂಡಳಿ ಸದಸ್ಯರು ನಿರಾಕರಿಸಿದ್ದಾರೆ. ಇದು ಚರ್ಚೆಗೆ ಕಾರಣವಾಗಿದೆ. ಈ ಸಿನಿಮಾ ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ರಾಷ್ಟ್ರ ಪ್ರಶಸ್ತಿ ಕೂಡ ಈ ಚಿತ್ರಕ್ಕೆ ಸಿಕ್ಕಿದೆ. ಸಿನಿಮಾದಲ್ಲಿ ಇರುವ ದೃಶ್ಯಗಳನ್ನೇ ಇಟ್ಟುಕೊಂಡು ಟ್ರೇಲರ್ ಸಿದ್ಧಪಡಿಸಲಾಗಿದೆ. ಹಾಗಿದ್ದರೂ ಕೂಡ ಟ್ರೇಲರ್ಗೆ ಯಾಕೆ ಪ್ರಮಾಣ ಪತ್ರ ನೀಡಲಾಗುತ್ತಿಲ್ಲ ಎಂಬ ಪ್ರಶ್ನೆ ಚಿತ್ರತಂಡದ್ದು.
ಇದನ್ನೂ ಓದಿ: OTT Censorship: ಒಟಿಟಿ ಸೆನ್ಸಾರ್ಶಿಪ್ ಬಗ್ಗೆ ಮಹತ್ವದ ಆದೇಶ ನೀಡಿದ ಸುಪ್ರೀಂ ಕೋರ್ಟ್
ಮೃತ ದೇಹದ ಕಾಲುಗಳನ್ನು ‘72 ಹೂರೇ’ ಚಿತ್ರದ ಟ್ರೇಲರ್ನಲ್ಲಿ ತೋರಿಸಲಾಗಿದೆ. ಆ ದೃಶ್ಯವನ್ನು ತೆಗೆದುಹಾಕುವಂತೆ ಸೆನ್ಸಾರ್ ಮಂಡಳಿ ಸದಸ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. ‘ಸತ್ತ ನಂತರ ನಿಮಗೆ ಸ್ವರ್ಗದಲ್ಲಿ 72 ಯುವತಿಯರು ಸಿಗುತ್ತಾರೆ’ ಎನ್ನುವ ಮೂಲಕ ಭಯೋತ್ಪಾದಕ ಸಂಘಟನೆಗಳು ಯುವಕರನ್ನು ಮೈಂಡ್ ವಾಶ್ ಮಾಡುತ್ತವೆ ಎಂಬ ಮಾತಿದೆ. ಇದೇ ಕಾನ್ಸೆಪ್ಟ್ನ ಕೇಂದ್ರವಾಗಿ ಇಟ್ಟುಕೊಂಡು ‘72 ಹೂರೇ’ ಎಂದು ಈ ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ.
ಇದನ್ನೂ ಓದಿ: ‘ಸೆನ್ಸಾರ್ ಬೋರ್ಡ್ ಒಪ್ಪಿಗೆ ಕೊಟ್ಟಮೇಲೆ ಮುಗಿಯಿತು’; ‘ಆದಿಪುರುಷ್’ ಮೇಲಿದ್ದ ಬ್ಯಾನ್ ತೆರವು ಮಾಡಿದ ಕೋರ್ಟ್
‘ಈ ಬಗ್ಗೆ ನಾವು ಸೆನ್ಸಾರ್ ಮಂಡಳಿ ಅಧ್ಯಕ್ಷ ಪ್ರಸೂನ್ ಜೋಶಿ ಅವರ ಬಳಿ ಪ್ರಸ್ತಾಪ ಮಾಡುತ್ತೇವೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೂ ಮನವಿ ಮಾಡಿಕೊಳ್ಳುತ್ತೇವೆ. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸೃಜನಶೀಲತೆಯನ್ನು ಸೆನ್ಸಾರ್ ಬೋರ್ಡ್ನವರು ಕಿತ್ತುಕೊಳ್ಳುತ್ತಿದ್ದಾರೆ’ ಎಂದು ‘72 ಹೂರೇ’ ಸಿನಿಮಾದ ಸಹ-ನಿರ್ಮಾಪಕ ಅಶೋಕ್ ಪಂಡಿತ್ ಹೇಳಿದ್ದಾರೆ ಎಂದು ವರದಿ ಆಗಿದೆ.
ಇದನ್ನೂ ಓದಿ: ಸೆನ್ಸಾರ್ ಅಧಿಕಾರಿಯ ಕೊಲೆ ಮಾಡಲು ತಯಾರಾಗಿದ್ದ ವಿಶ್ವವಿಖ್ಯಾತ ನಿರ್ದೇಶಕ: ಆಮೇಲೇನಾಯ್ತು?
‘72 ಹೂರೇ’ ಸಿನಿಮಾಗೆ ಸಂಜಯ್ ಪುರಾಣ್ ಸಿಂಗ್ ಚೌಹಾಣ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಜುಲೈ 7ರಂದು ಬಿಡುಗಡೆ ಆಗಲಿದೆ. ಪವನ್ ಮಲ್ಹೋತ್ರಾ, ಆಮಿರ್ ಬಶೀರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಟ್ರೇಲರ್ಗೆ ಸೆನ್ಸಾರ್ ಪ್ರಮಾಣ ಪತ್ರ ಸಿಗದ ಕಾರಣ ಆನ್ಲೈನ್ ಮೂಲಕ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.