‘ಸೆನ್ಸಾರ್ ಬೋರ್ಡ್ ಒಪ್ಪಿಗೆ ಕೊಟ್ಟಮೇಲೆ ಮುಗಿಯಿತು’; ‘ಆದಿಪುರುಷ್’ ಮೇಲಿದ್ದ ಬ್ಯಾನ್ ತೆರವು ಮಾಡಿದ ಕೋರ್ಟ್
ದೇಶದ ಸೆನ್ಸಾರ್ ಮಂಡಳಿಯು ಅಂಗೀಕರಿಸಿದ ಯಾವುದೇ ಸಿನಿಮಾದ ಪ್ರದರ್ಶನವನ್ನು ಸ್ಥಗಿತಗೊಳಿಸದಂತೆ ಅಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ.
‘ಆದಿಪುರುಷ್’ ಸಿನಿಮಾ (Adipurush Movie) ಕೇವಲ ಭಾರತದಲ್ಲಿ ಮಾತ್ರ ವಿವಾದಗಳನ್ನು ಹುಟ್ಟುಹಾಕಿಲ್ಲ. ನೆರೆಯ ನೇಪಾಳದಲ್ಲೂ ವಿವಾದ ಸೃಷ್ಟಿಸಿದೆ. ಈ ಚಿತ್ರದ ಮೇಲೆ ಬ್ಯಾನ್ ಹಾಕುವ ಕೆಲಸವನ್ನು ಕಠ್ಮಂಡು ನಗರದ ಮೇಯರ್ ಮಾಡಿದ್ದರು. ಆದರೆ, ಕೋರ್ಟ್ ಈ ನಿಷೇಧವನ್ನು ತೆಗೆದು ಹಾಕಿದೆ. ‘ಸೆನ್ಸಾರ್ ಬೋರ್ಡ್ ಒಪ್ಪಿಗೆ ನೀಡಿದ ಬಳಿಕ ಆ ಚಿತ್ರಗಳನ್ನು ಬ್ಯಾನ್ ಮಾಡಬಾರದು’ ಎಂದು ಕೊರ್ಟ್ ಆದೇಶ ನೀಡಿದೆ. ಇದರಿಂದ ‘ಆದಿಪುರುಷ್’ ಚಿತ್ರಕ್ಕೆ ದೊಡ್ಡ ರಿಲೀಫ್ ಸಿಕ್ಕಂತೆ ಆಗಿದೆ. ಭಾರತದಲ್ಲೂ ಈ ಚಿತ್ರವನ್ನು ಬ್ಯಾನ್ ಮಾಡುವ ಆಗ್ರಹ ಜೋರಾಗಿದೆ.
ಬ್ಯಾನ್ ಏಕೆ?
‘ಆದಿಪುರುಷ್’ ಸಿನಿಮಾದಲ್ಲಿ ಬರುವ ಅನೇಕ ಡೈಲಾಗ್ಗಳ ಬಗ್ಗೆ ಸಾಕಷ್ಟು ಮಂದಿ ತಕರಾರು ತೆಗೆದಿದ್ದಾರೆ. ‘ಸೀತೆ ಭಾರತದ ಮಗಳು’ ಎಂಬ ಸಂಭಾಷಣೆ ಚಿತ್ರದಲ್ಲಿ ಇದೆ. ಈ ಡೈಲಾಗ್ ತೆಗೆಯುವಂತೆ ನೇಪಾಳದವರು ಒತ್ತಾಯ ಮಾಡಿದ್ದರು. ಆದರೆ, ಇದಕ್ಕೆ ಕತ್ತರಿ ಹಾಕಲು ತಂಡ ಒಪ್ಪಿಲ್ಲ. ಸದ್ಯ ಈ ಸಂಭಾಷಣೆ ಪ್ರಸಾರ ಕಾಣುತ್ತಿದೆ. ಇದು ನೇಪಾಳದವರ ಕೋಪಕ್ಕೆ ಕಾರಣ ಆಗಿದೆ.
‘ಸೀತೆ ನಮ್ಮವಳು’ ಎಂಬುದು ನೇಪಾಳದವರ ವಾದ. ಹೀಗಾಗಿ, ಕಠ್ಮಂಡು ಮೇಯರ್ ಬಾಲೇಂದ್ರ ಶಾ ಅವರು ಚಿತ್ರದ ಪ್ರಸಾರ ಮೇಲೆ ನಿಷೇಧ ಹೇರಿದ್ದರು. ‘ಆದಿಪುರುಷ್’ ಚಿತ್ರದ ಸಿಟ್ಟನ್ನು ಭಾರತದ ಎಲ್ಲಾ ಸಿನಿಮಾಗಳ ಮೇಲೆ ತೋರಿಸಿದ್ದರು. ಹಿಂದಿಯ ಎಲ್ಲಾ ಚಿತ್ರಗಳನ್ನು ಅಲ್ಲಿ ಬ್ಯಾನ್ ಮಾಡು ಆದೇಶ ನೀಡಿದ್ದರು.
ಬ್ಯಾನ್ ತೆಗೆದ ಕೋರ್ಟ್
ನೇಪಾಳದ ಹೈಕೋರ್ಟ್ ಗುರುವಾರ (ಜೂನ್ 22) ಈ ಬಗ್ಗೆ ಆದೇಶ ನೀಡಿದೆ. ಪ್ರಭಾಸ್ ಅಭಿನಯದ ‘ಆದಿಪುರುಷ್’ ಸೇರಿದಂತೆ ಹಿಂದಿ ಚಲನಚಿತ್ರಗಳ ಮೇಲಿನ ನಿಷೇಧ ರದ್ದು ಮಾಡಿ ಆದೇಶ ನೀಡಿದೆ. ದೇಶದ ಸೆನ್ಸಾರ್ ಮಂಡಳಿಯು ಅಂಗೀಕರಿಸಿದ ಯಾವುದೇ ಸಿನಿಮಾದ ಪ್ರದರ್ಶನವನ್ನು ಸ್ಥಗಿತಗೊಳಿಸದಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಇದನ್ನೂ ಓದಿ: 150 ರೂಪಾಯಿ ಟಿಕೆಟ್ ದರ ನಿಗದಿ ಮಾಡಿದರೂ ಜನ ಬರಲಿಲ್ಲ; ಉಲ್ಟಾ ಆಯ್ತು ‘ಆದಿಪುರುಷ್’ ಪ್ಲಾನ್
ಸಿಟ್ಟಾದ ಬಾಲೇಂದ್ರ ಶಾ
ಕೋರ್ಟ್ ಆದೇಶಕ್ಕೆ ಬಾಲೇಂದ್ರ ಶಾ ಸಿಟ್ಟಾಗಿದ್ದಾರೆ. ‘ಯಾವುದೇ ಶಿಕ್ಷೆಯನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ಆದರೆ ನೇಪಾಳದ ಸಾರ್ವಭೌಮತ್ವ ದೃಷ್ಟಿಯಿಂದ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಬಾಲೇಂದ್ರ ಶಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ