2025ರ ಸಾಲಿನ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಭಾರತದಿಂದ ‘ಲಾಪತಾ ಲೇಡೀಸ್’ ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿದೆ. ಈ ಸಿನಿಮಾಗೆ ನಿರ್ದೇಶಕಿ ಕಿರಣ್ ರಾವ್ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಆಮಿರ್ ಖಾನ್ ನಿರ್ಮಾಣ ಮಾಡಿದ್ದು, ಪ್ರೇಕ್ಷಕರಿಂ ಮೆಚ್ಚುಗೆ ಗಳಿಸಿದೆ. ಈ ವರ್ಷ ಮಾರ್ಚ್ 1ರಂದು ತೆರೆಕಂಡ ಈ ಚಿತ್ರದಲ್ಲಿ ಸ್ಪರ್ಶ್ ಶ್ರೀವಾಸ್ತವ್, ನಿತಾಂಶಿ ಗೋಯಲ್, ಪ್ರತಿಭಾ ರಂಟಾ, ರವಿ ಕಿಶನ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಆಸ್ಕರ್ ಸ್ಪರ್ಧೆಗೆ ಆಯ್ಕೆ ಆಗಿರುವುದಕ್ಕೆ ‘ಲಾಪತಾ ಲೇಡೀಸ್’ ನಿರ್ದೇಶಕಿ ಕಿರಣ್ ರಾವ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಕಿರಣ್ ರಾವ್ ನಿರ್ದೇಶಿಸಿದ ಎರಡನೇ ಸಿನಿಮಾ ‘ಲಾಪತಾ ಲೇಡೀಸ್’. ಅದಕ್ಕೂ ಮುನ್ನ ಅವರು ‘ಗೋಬಿ ಘಾಟ್’ ಸಿನಿಮಾವನ್ನು ನಿರ್ದೇಶಿಸಿದ್ದರು. ‘ಲಾಪತಾ ಲೇಡೀಸ್’ ಸಿನಿಮಾಗೆ ಪ್ರೇಕ್ಷಕರು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಭೇಷ್ ಎಂದಿದ್ದಾರೆ. ಈಗ ಆಸ್ಕರ್ಗೂ ಆಯ್ಕೆ ಆಗಿರುವುದರಿಂದ ಚಿತ್ರತಂಡಕ್ಕೆ ಸಖತ್ ಖುಷಿ ಆಗಿದೆ. ಈ ಹಿನ್ನೆಲೆಯಲ್ಲಿ ಅನೇಕರಿಗೆ ಕಿರಣ್ ರಾವ್ ಧನ್ಯವಾದ ಸಲ್ಲಿಸಿದ್ದಾರೆ.
‘ನಮ್ಮ ಸಿನಿಮಾ ಆಸ್ಕರ್ ಸ್ಪರ್ಧೆಗೆ ಆಯ್ಕೆ ಆಗಿರುವುದು ಇಡೀ ತಂಡದ ಪರಿಶ್ರಮ ಮತ್ತು ಪ್ಯಾಷನ್ಗೆ ಸಾಕ್ಷಿಯಾಗಿದೆ. ಸಿನಿಮಾ ಎಂಬುದು ಯಾವಾಗಲೂ ಹೃದಯಗಳನ್ನು ಬೆಸೆಯುವ, ಅರ್ಥಪೂರ್ಣ ಸಂವಹನ ನೆಡೆಸುವ ಹಾಗೂ ಗಡಿಗಳನ್ನು ಮೀರುವ ಮಾಧ್ಯಮವಾಗಿದೆ. ಭಾರತೀಯರಿಗೆ ಇಷ್ಟ ಆದ ರೀತಿಯೇ ಜಗತ್ತಿನಾದ್ಯಂತ ಇರುವ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಲಿದೆ ಅಂತ ನಾನು ನಂಬಿದ್ದೇನೆ’ ಎಂದಿದ್ದಾರೆ ಕಿರಣ್ ರಾವ್.
India’s Official Entry for the 2024-25 Oscars for Best Foreign Language Film Category at the 97th Academy Awards (Oscars 2025) is #LaapataaLadies (Hindi) pic.twitter.com/MmB4LctXEp
— Ramesh Bala (@rameshlaus) September 23, 2024
‘ಲಾಪತಾ ಲೇಡೀಸ್ ಸಿನಿಮಾ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಮತ್ತು ಆಯ್ಕೆ ಸಮಿತಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ವರ್ಷದ ಹಲವು ಅತ್ಯುತ್ತಮ ಸಿನಿಮಾಗಳ ನಡುವೆ ನಮ್ಮ ಸಿನಿಮಾ ಆಯ್ಕೆ ಆಗಿದ್ದು ಅತ್ಯಂತ ಹೆಮ್ಮೆಯ ವಿಷಯ. ಉಳಿದ ಸಿನಿಮಾಗಳು ಕೂಡ ಅಷ್ಟೇ ಸಮರ್ಥವಾಗಿವೆ’ ಎಂದು ಕಿರಣ್ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Laapataa Ladies Review: ಈ ಕಾಲಕ್ಕೆ ಬೇಕಾದ ಮಹತ್ವಪೂರ್ಣ ಸಿನಿಮಾ ‘ಲಾಪತಾ ಲೇಡೀಸ್’
‘ನಮಗೆ ಬೆಂಬಲ ನೀಡಿದ ಆಮಿರ್ ಖಾನ್ ಪ್ರೊಡಕ್ಷನ್ಸ್ ಮತ್ತು ಜಿಯೋ ಸ್ಟುಡಿಯೋಸ್ ಸಂಸ್ಥೆಗಳಿಗೆ ಧನ್ಯವಾದಗಳು. ಪ್ರತಿಭಾವಂತ ತಂತ್ರಜ್ಞರ ಜೊತೆ ಕೆಲಸ ಮಾಡಿದ್ದು ನಮ್ಮ ಪಾಲಿನ ಹಿರಿಮೆ. ಈ ಸಿನಿಮಾ ನಿರ್ಮಾಣವಾಗಲು ಕಾರಣರಾದ ಎಲ್ಲ ಕಲಾವಿದರು ಮತ್ತು ತಂತ್ರಜ್ಞರ ತಂಡಕ್ಕೆ ಕೂಡ ನಾನು ಧನ್ಯವಾದ ತಿಳಿಸುತ್ತೇನೆ. ಇದು ಮರೆಯಲಾಗದ ಜರ್ನಿ ಆಗಿತ್ತು’ ಎಂದು ಕಿರಣ್ ರಾವ್ ಹೇಳಿದ್ದಾರೆ. ಅಲ್ಲದೇ, ಸಿನಿಮಾಗೆ ಪ್ರೀತಿ ಮತ್ತು ಬೆಂಬಲ ತೋರಿದ ಪ್ರೇಕ್ಷಕರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ. ‘ನೆಟ್ಫ್ಲಿಕ್ಸ್’ ಒಟಿಟಿಯಲ್ಲಿ ಈ ಸಿನಿಮಾ ಲಭ್ಯವಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.