ಲತಾ ಮಂಗೇಶ್ಕರ್​ಗೆ ಐಸಿಯುನಲ್ಲೇ ಮುಂದುವರಿದ ಚಿಕಿತ್ಸೆ; ಇನ್ನೂ 10 ದಿನ ವಿಶೇಷ ನಿಗಾದಲ್ಲಿ ಗಾಯಕಿ

| Updated By: ರಾಜೇಶ್ ದುಗ್ಗುಮನೆ

Updated on: Jan 15, 2022 | 4:28 PM

ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಲತಾ ಮಂಗೇಶ್ಕರ್​ ಅವರನ್ನು ಅಡ್ಮಿಟ್​ ಮಾಡಲಾಗಿದೆ. ಲತಾ ಅವರ ಆರೋಗ್ಯದ ಬಗ್ಗೆ ಎಲ್ಲರಿಗೂ ಚಿಂತೆ ಆಗಿತ್ತು. ಈಗ ಅವರ ಆರೋಗ್ಯ ಸುಧಾರಿಸಿಕೊಳ್ಳುತ್ತಿರುವ ಬಗ್ಗೆ ವೈದ್ಯರಿಂದ ಮಾಹಿತಿ ಸಿಕ್ಕಿರುವುದಕ್ಕೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಲತಾ ಮಂಗೇಶ್ಕರ್​ಗೆ ಐಸಿಯುನಲ್ಲೇ ಮುಂದುವರಿದ ಚಿಕಿತ್ಸೆ; ಇನ್ನೂ 10 ದಿನ ವಿಶೇಷ ನಿಗಾದಲ್ಲಿ ಗಾಯಕಿ
ಲತಾ ಮಂಗೇಶ್ಕರ್​
Follow us on

ಕೊವಿಡ್ (Covid 19)ಕಾರಣದಿಂದ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್​​ (Lata Mangeshkar) ಅವರಿಗೆ ಐಸಿಯುನಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ನಿಧಾನವಾಗಿ ಚೇತರಿಕೆ ಕಾಣುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ ಸುಮಾರು 10 ದಿನಗಳ ಕಾಲ ವಿಶೇಷ ನಿಗಾದಲ್ಲಿಯೇ ಅವರಿಗೆ ಚಿಕಿತ್ಸೆ ಮುಂದುವರಿಯಲಿದೆ. ಆ ಬಳಿಕ ಅವರನ್ನು ಸಾಮಾನ್ಯ ವಾರ್ಡ್​ಗೆ ಶಿಫ್ಟ್​ ಮಾಡುವ ಸಾಧ್ಯತೆ ಇದೆ. ಅವರು ಸಂಪೂರ್ಣವಾಗಿ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಲತಾ ಮಂಗೇಶ್ಕರ್​ ಅವರನ್ನು ಅಡ್ಮಿಟ್​ ಮಾಡಲಾಗಿದೆ. ಲತಾ ಅವರ ಆರೋಗ್ಯದ ಬಗ್ಗೆ ಎಲ್ಲರಿಗೂ ಚಿಂತೆ ಆಗಿತ್ತು. ಈಗ ಅವರ ಆರೋಗ್ಯ ಸುಧಾರಿಸಿಕೊಳ್ಳುತ್ತಿರುವ ಬಗ್ಗೆ ವೈದ್ಯರಿಂದ ಮಾಹಿತಿ ಸಿಕ್ಕಿರುವುದಕ್ಕೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ‘ಲತಾ ಮಂಗೇಶ್ಕರ್​ ಆರೋಗ್ಯ ಸಂಪೂರ್ಣ ಸ್ಥಿರವಾಗಿದೆ. ದೇವರು ನಿಜವಾಗಿಯೂ ಕರುಣಾಮಯಿ. ಲತಾ ಮಂಗೇಶ್ಕರ್​ ಅವರಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿರುವ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ’ ಎಂದು ಲತಾ ಮಂಗೇಶ್ಕರ್​ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ನ್ಯೂಸ್​ 18ಗೆ ಹೇಳಿಕೆ ನೀಡಿದ್ದಾರೆ.

‘ಅತ್ಯುತ್ತಮ ವೈದ್ಯರ ತಂಡ ಲತಾ ಮಂಗೇಶ್ಕರ್​ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಅವರ ಫೈಟರ್​ ಮತ್ತು ವಿನ್ನರ್​. ಆ ರೀತಿಯಲ್ಲೇ ನಾವು ಅವರನ್ನು ನೋಡಿಕೊಂಡು ಬಂದಿರುವುದು. ಅವರು ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿರುವ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು’ ಎಂದು ಲತಾ ಮಂಗೇಶ್ಕರ್​ ಕುಟುಂಬದವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.

‘ಇದು ಕೊವಿಡ್​ ಆದಕಾರಣ ಅಕ್ಕನನ್ನು ನೋಡಲು ನಮಗೆ ಅನುಮತಿ ಸಿಕ್ಕಿಲ್ಲ. ವೈದ್ಯರು ಮತ್ತು ನರ್ಸ್​ಗಳು ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಹೆಚ್ಚು ವಯಸ್ಸು ಆಗಿರುವ ಕಾರಣ ಇನ್ನಷ್ಟು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗಬಹುದು ಅಂತ ವೈದ್ಯರು ಹೇಳಿದ್ದಾರೆ’ ಎಂದು ಲತಾ ಅವರ ಸಹೋದರಿ ಉಷಾ ಮಂಗೇಶ್ಕರ್​ ತಿಳಿಸಿದ್ದರು.

ಸಂಗೀತ ಕ್ಷೇತ್ರದಲ್ಲಿ 70 ದಶಕಗಳ ಕಾಲ ಸಕ್ರಿಯರಾಗಿದ್ದವರು ಲತಾ ಮಂಗೇಶ್ಕರ್​. 13ನೇ ವಯಸ್ಸಿನಿಂದಲೇ ಅವರು ಗಾಯನ ಆರಂಭಿಸಿದ್ದರು. ಭಾರತ ರತ್ನ, ಪದ್ಮ ಭೂಷಣ, ಪದ್ಮ ವಿಭೂಷಣ, ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ ಸೇರಿದಂತೆ ನೂರಾರು ಗೌರವಗಳು ಅವರಿಗೆ ಸಂದಿವೆ. 30 ಸಾವಿರಕ್ಕೂ ಅದಿಕ ಹಾಡುಗಳಿಗೆ ಲತಾ ಧ್ವನಿ ಆಗಿದ್ದಾರೆ. ವಿಶ್ವಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದಾರೆ. ಲತಾ ಮಂಗೇಶ್ಕರ್​ ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: Lata Mangeshkar: ಕೊವಿಡ್​ನಿಂದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ ಆಸ್ಪತ್ರೆಗೆ ದಾಖಲು; ಐಸಿಯುನಲ್ಲಿ ಚಿಕಿತ್ಸೆ