ಅನೇಕ ವರ್ಷಗಳ ಬಳಿಕ ನಟ ಸನ್ನಿ ಡಿಯೋಲ್ (Sunny Deol) ಅವರು ಬಹುದೊಡ್ಡ ಗೆಲುವು ಪಡೆದಿದ್ದಾರೆ. ಅವರು ಅಭಿನಯಿಸಿರುವ ‘ಗದರ್ 2’ ಸಿನಿಮಾ (Gadar 2 Movie) ಸೂಪರ್ ಹಿಟ್ ಆಗಿದೆ. ಒಂದು ವಾರ ಕಳೆಯುವುದರೊಳಗೆ ಈ ಸಿನಿಮಾ 260 ಕೋಟಿ ರೂಪಾಯಿಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಗೆಲುವನ್ನು ಸಹಿಸದ ಕೆಲವು ಕಿಡಿಗೇಡಿಗಳು ದುಷ್ಕೃತ್ಯ ಎಸಗಿದ್ದಾರೆ. ‘ಗದರ್ 2’ ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರದ ಎದುರಿನಲ್ಲಿ ಬಾಂಬ್ ಸ್ಫೋಟ ಮಾಡಲಾಗಿದೆ. ಪಾಟ್ನದ ಥಿಯೇಟರ್ ಮುಂದೆ ಈ ಘಟನೆ ನಡೆದಿದೆ. ಸದ್ಯಕ್ಕೆ ಕಿಡಿಗೇಡಿಗಳನ್ನು ಬಂಧಿಸಲಾಗಿದೆ ಎಂದು ವರದಿ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಂಬ್ ಸ್ಫೋಟದಿಂದ (Bomb Blast) ಯಾವುದೇ ಪ್ರಾಣಹಾನಿ ಆಗಿಲ್ಲ ಎಂಬುದು ಸಮಾಧಾನಕರ ಸಂಗತಿ.
ಅನೇಕ ಕಡೆಗಳಲ್ಲಿ ‘ಗದರ್ 2’ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಕೆಲವರು ಬ್ಲಾಕ್ ಟಿಕೆಟ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ. ಪಾಟ್ನದ ಥಿಯೇಟರ್ ಎದುರಿನಲ್ಲೂ ಕೆಲವರು ಬ್ಲಾಕ್ ಟಿಕೆಟ್ ಮಾರಲು ಯತ್ನಿಸಿದ್ದಾರೆ. ಅಲ್ಲದೇ, ಚಿತ್ರಮಂದಿರದ ಸಿಬ್ಬಂದಿಗೂ ಬೆದರಿಕೆ ಹಾಕಲಾಗಿದೆ. ಈ ಸಂದರ್ಭದಲ್ಲೇ ಬಾಂಬ್ ಹಾಕಲಾಗಿದೆ. ಇವು ತೀವ್ರ ಸ್ವರೂಪದ ಬಾಂಬ್ ಆಗಿರದ ಕಾರಣ ಹೆಚ್ಚಿನ ಹಾನಿ ಆಗಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ‘ಸಿನಿಮಾ ಹಿಟ್ ಆದ ಬಳಿಕ ಸನ್ನಿ ಡಿಯೋಲ್ಗೆ ಸೊಕ್ಕು ಬಂತು’; ನಟನ ವರ್ತನೆಗೆ ಆಕ್ರೋಶ
ಈ ಘಟನೆ ಬಗ್ಗೆ ಚಿತ್ರಮಂದಿರದ ಮಾಲೀಕರು ಮಾಹಿತಿ ನೀಡಿದ್ದಾರೆ. ‘ಈ ರೀತಿ ಆಗಿರುವುದು ಇದೇ ಮೊದಲೇನೂ ಅಲ್ಲ. ಕೆಟ್ಟ ಉದ್ದೇಶ ಹೊಂದಿರುವ ವ್ಯಕ್ತಿಗಳು ಬ್ಲಾಕ್ ಟಿಕೆಟ್ ಮಾರಲು ಪ್ರಯತ್ನಿಸುತ್ತಾರೆ. ಆದರೆ ಅದು ಸಾಧ್ಯವಿಲ್ಲ. ಕಿಡಿಗೇಡಿಗಳು ಗಂಭೀರವಾದ ಕೃತ್ಯ ಎಸಗಲು ಪ್ರಯತ್ನಿಸಿದ್ದಾರೆ. ಆದರೆ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಥಿಯೇಟರ್ ಸಿಬ್ಬಂದಿ ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಇದನ್ನೂ ಓದಿ: ಅವಕಾಶ ಕೊಟ್ಟರೆ ಭಾರತಕ್ಕೆ ಹೋಗಿ ಸೆಟಲ್ ಆಗುತ್ತೇವೆ ಎಂದ ಪಾಕ್ ಯುವಕರು; ಇದು ‘ಗದರ್ 2’ ಎಫೆಕ್ಟ್
‘ಗದರ್ 2’ ಸಿನಿಮಾಗೆ ಅನಿಲ್ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಸನ್ನಿ ಡಿಯೋಲ್ ಮತ್ತು ಅಮೀಷಾ ಪಟೇಲ್ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಆಗಸ್ಟ್ 11ರಂದು ಈ ಚಿತ್ರ ಬಿಡುಗಡೆ ಆಯಿತು. ಅಂದಿನಿಂದ ಇಂದಿನ (ಆಗಸ್ಟ್ 18) ತನಕ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಎರಡನೇ ವೀಕೆಂಡ್ನಲ್ಲಿ ಈ ಸಿನಿಮಾ ಮತ್ತೆ ಅಬ್ಬರಿಸಲಿದೆ. ಟೋಟಲ್ ಕಲೆಕ್ಷನ್ ಎಷ್ಟಾಗಬಹುದು ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ. 2001ರಲ್ಲಿ ‘ಗದರ್’ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾದ ಸೀಕ್ವೆಲ್ ಆಗಿ ‘ಗದರ್ 2’ ಮೂಡಿಬಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.