ಮಾಧುರಿ ದೀಕ್ಷಿತ್​ಗೆ ಗಾಳ ಹಾಕಿದ ಬಿಜೆಪಿ: ಲೋಕಸಭೆ ಚುನಾವಣೆ ಟಿಕೆಟ್?

|

Updated on: Nov 16, 2023 | 4:25 PM

Madhuri Dixit: ನಟಿ ಮಾಧುರಿ ದೀಕ್ಷಿತ್​ಗೆ ಬಿಜೆಪಿ ಪಕ್ಷವು ಲೋಕಸಭೆ ಚುನಾವಣೆ ಟಿಕೆಟ್ ನೀಡಲಿದೆ ಎನ್ನಲಾಗುತ್ತಿದೆ. 2019ರ ಲೋಕಸಭೆ ಚುನಾವಣೆ ವೇಳೆಯಲ್ಲಿಯೂ ಇದೇ ಸುದ್ದಿ ಹರಿದಾಡಿತ್ತು. ಆದರೆ ಈ ಬಾರಿ ಖಾತ್ರಿಯಾಗಿ ಟಿಕೆಟ್ ಸಿಗಲಿದೆ ಎನ್ನಲಾಗುತ್ತಿದ್ದು, ಕ್ಷೇತ್ರ ಯಾವುದು?

ಮಾಧುರಿ ದೀಕ್ಷಿತ್​ಗೆ ಗಾಳ ಹಾಕಿದ ಬಿಜೆಪಿ: ಲೋಕಸಭೆ ಚುನಾವಣೆ ಟಿಕೆಟ್?
ಮಾಧುರಿ ದೀಕ್ಷಿತ್
Follow us on

ಸಿನಿಮಾ ತಾರೆಯರು (Movie Celebrities) ರಾಜಕೀಯ (Politics) ಪ್ರವೇಶಿಸುವುದು ಹೊಸತೇನೂ ಅಲ್ಲ. ಹಲವು ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಜನಪ್ರಿಯ ಸಿನಿಮಾ ತಾರೆಯರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಅವರ ಜನಪ್ರಿಯತೆಯನ್ನು ಮತಗಳಾಗಿ ಪರಿವರ್ತಿಸಿ ಚುನಾವಣೆ ಗೆಲ್ಲುವ ಯತ್ನ ಮಾಡುತ್ತಲೇ ಬಂದಿವೆ. ಇದೀಗ ಲೋಕಸಭೆ ಚುನಾವಣೆ ಸನಿಹಕ್ಕೆ ಬರುತ್ತಿದ್ದು, ಹಲವು ರಾಜ್ಯಗಳಲ್ಲಿ ಟಿಕೆಟ್ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಹಲವು ಸಿನಿಮಾ ಕ್ರೀಡಾ ಸೆಲೆಬ್ರಿಟಿಗಳು, ಸಾಮಾಜಿಕ ಜಾಲತಾಣದ ಸೆಲೆಬ್ರಿಟಿಗಳು ಬಿಜೆಪಿ ಪರ ಕಣಕ್ಕಿಳಿದು ವಿಜಯ ಸಾಧಿಸಿದ್ದರು. ಈ ಬಾರಿಯೂ ಕೆಲವು ತಾರೆಯರನ್ನು ಚುನಾವಣೆ ಕಣಕ್ಕೆ ಎಳೆದು ತರಲು ಬಿಜೆಪಿ ಸಜ್ಜಾದಂತಿದೆ.

ಬಾಲಿವುಡ್​ನ ಜನಪ್ರಿಯ ತಾರೆ ಮಾಧುರಿ ದೀಕ್ಷಿತ್​ಗೆ ಬಿಜೆಪಿ ಈ ಬಾರಿಯ ಲೋಕಸಭೆ ಚುನಾವಣೆ ಟಿಕೆಟ್ ನೀಡಲಿದೆ ಎನ್ನಲಾಗುತ್ತಿದೆ. ಮಾಧುರಿ ದೀಕ್ಷಿತ್ ಪುಣೆಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ಮುಗಿದಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.

ಅಂದಹಾಗೆ, ಮಾಧುರಿ ದೀಕ್ಷಿತ್​ಗೆ ಬಿಜೆಪಿ ಟಿಕೆಟ್ ನೀಡುವ ಯತ್ನ ಮಾಡುತ್ತಿರುವುದು ಇದು ಮೊದಲೇನೂ ಅಲ್ಲ. 2019ರ ಲೋಕಸಭೆ ಚುನಾವಣೆ ಸಮಯದಲ್ಲಿಯೂ ಈ ಸುದ್ದಿ ಹರಿದಾಡಿತ್ತು. ಲೋಕಸಭೆ ಚುನಾವಣೆಗೆ ಮುನ್ನ ಮಾಧುರಿ ದೀಕ್ಷಿತ್ ಹಾಗೂ ಅವರ ಪತಿ, ವೈದ್ಯ ನೇನೆ ಅವರುಗಳು ಆಗಿನ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಸಹ ಮಾಡಿದ್ದರು. ಆದರೆ ಆ ಸಮಯದಲ್ಲಿ ಮಾಧುರಿಗೆ ಟಿಕೆಟ್ ಸಿಕ್ಕಿರಲಿಲ್ಲ.

ಇದನ್ನೂ ಓದಿ:ಶೂಟಿಂಗ್ ಸೆಟ್​ನಲ್ಲಿ ಮಾಧುರಿ ದೀಕ್ಷಿತ್​ಗೆ ಬ್ಲೌಸ್​ ಬಿಚ್ಚುವಂತೆ ಒತ್ತಾಯಿಸಿದ್ದ ನಿರ್ದೇಶಕ

ಈ ಬಾರಿ ಮತ್ತೆ ಮಾಧುರಿಗೆ ಚುನಾವಣಾ ಟಿಕೆಟ್ ಅನ್ನು ಬಿಜೆಪಿ ನೀಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಟಿ ಹೇಮಾ ಮಾಲಿನಿ, ನಟ ಸನ್ನಿ ಡಿಯೋಲ್, ಸ್ಮೃತಿ ಇರಾನಿ, ನಟ ರವಿ ಕಿಶನ್, ಕಿರಣ್ ಖೇರ್, ಕನ್ನಡತಿ ಸುಮಲತಾ, ಪರೇಶ್ ರಾವಲ್ ಇನ್ನೂ ಕೆಲವು ಜನಪ್ರಿಯ ನಟ-ನಟಿಯರು ಬಿಜೆಪಿ ಸೇರಿ ಸಂಸದರಾಗಿದ್ದಾರೆ. ಕೆಲವರು ಮಂತ್ರಿಗಳು ಸಹ ಆಗಿದ್ದಾರೆ. ಮಾಧುರಿ ದೀಕ್ಷಿತ್​ಗೆ ದೊಡ್ಡ ಮಟ್ಟಿಗಿನ ಜನಪ್ರಿಯತೆ ಇದ್ದು, ಸೂಕ್ತ ಕ್ಷೇತ್ರ ಆರಿಸಿ ಅವರ ಗೆಲುವು ಪಕ್ಕಾ ಎನ್ನಲಾಗುತ್ತಿದೆ.

ಮದುವೆಯಾದ ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದ ನಟಿ ಮಾಧುರಿ ದೀಕ್ಷಿತ್ 2007ರ ‘ಆಜಾ ನಚಲೇ’ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದರಾದರೂ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸದೇ ಎರಡು ವರ್ಷ, ಒಮ್ಮೊಮ್ಮೆ ಮೂರು ವರ್ಷಕ್ಕೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2022ರಲ್ಲಿ ‘ಮಜಾ ಮಾ’ ಸಿನಿಮಾದಲ್ಲಿ ಮಾಧುರಿ ನಟಿಸಿದ್ದರು. ಅದಾದ ಬಳಿಕ ಮಾಧುರಿ ನಟನೆಯ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ