ಯಶ್ ಬಾಲಿವುಡ್ ಸಿನಿಮಾಕ್ಕೆ ಮಹಾರಾಷ್ಟ್ರ ಸಿಎಂ ಮೆಚ್ಚುಗೆ

Yash: ನಟ ಯಶ್ ನಟಿಸುತ್ತಿರುವ ಬಾಲಿವುಡ್ ಸಿನಿಮಾಕ್ಕೆ ಮಹಾರಾಷ್ಟ್ರ ಸಿಎಂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವರ್ಲ್ಡ್​ ಆಡಿಯೋ ವಿಶ್ಯುವಲ್ಸ್ ಎಂಟರ್​​ಟೇನ್​ಮೆಂಟ್ ಸಮ್ಮೇಳನ 2025 ರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದು, ಪೌರಾಣಿಕ ಕತೆಗಳನ್ನು ನಾವು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೇಳಬೇಕಿದೆ. ನಮ್ಮ ಮುಂದಿನ ಪೀಳಿಗೆಗೆ ಕತೆಗಳನ್ನು ಧಾಟಿಸುವ ಪ್ರಭಾವಪೂರ್ಣ ಪದ್ಧತಿ ಇದು ಎಂದಿದ್ದಾರೆ.

ಯಶ್ ಬಾಲಿವುಡ್ ಸಿನಿಮಾಕ್ಕೆ ಮಹಾರಾಷ್ಟ್ರ ಸಿಎಂ ಮೆಚ್ಚುಗೆ
Cm Devendra Fadnavis

Updated on: May 04, 2025 | 9:43 PM

‘ಕೆಜಿಎಫ್’ ಮೂಲಕ ಪ್ಯಾನ್ ಇಂಡಿಯಾ (Pan India) ಸ್ಟಾರ್ ಆಗಿರುವ ಯಶ್​ಗೆ (Yash) ಈಗ ಭಾರತದಾದ್ಯಂತ ಅಭಿಮಾನಿಗಳಿದ್ದಾರೆ. ಸಿನಿಮಾ ಪ್ರೇಕ್ಷಕರು ಮಾತ್ರವೇ ಅಲ್ಲ ನಟ-ನಟಿಯರು ಸಹ ಅವರ ಅಭಿಮಾನಿಗಳೇ. ಅವರು ಮಾಡುತ್ತಿರುವ ಕಾರ್ಯಕ್ಕೆ ಹಲವರ ಶ್ಲಾಘನೆ ದೊರೆತಿದೆ. ಇದೀಗ ಯಶ್ ನಟಿಸುತ್ತಿರುವ ಬಾಲಿವುಡ್ ಸಿನಿಮಾ ಬಗ್ಗೆ ಮಹಾರಾಷ್ಟ್ರ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರ್ಲ್ಡ್​ ಆಡಿಯೋ ವಿಶ್ಯುವಲ್ಸ್ ಎಂಟರ್​​ಟೇನ್​ಮೆಂಟ್ ಸಮ್ಮೇಳನ 2025 ರಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ಯಶ್ ಹಾಗೂ ರಣ್​ಬೀರ್ ಕಪೂರ್ ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂವಾದ ಕಾರ್ಯಕ್ರಮದಲ್ಲಿ, ರಾಮಾಯಣ ಸಿನಿಮಾದ ಸಹ ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆಗೆ ಮಾತನಾಡಿದ ಸಿಎಂ ದೇವೇಂದ್ರ ಫಡ್ಣವೀಸ್, ‘ನಾವು (ಭಾರತ) ವಿಶ್ವದ ಬಲು ಪುರಾತನ ಕತೆಗಾರರು. ನಮ್ಮ ಸಂಗೀತ, ನಾಟಕ, ಕಲೆ ಬಹಳ ಪುರಾತನ ಇತಿಹಾಸವನ್ನು ಹೊಂದಿದೆ. ಈಗ ಆ ಕತೆಗಳನ್ನು ಹೇಳಲು ಸರಿಯಾದ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಬೇಕಿದೆ. ಅದನ್ನೇ ಈಗ ಮಾಡಲಾಗುತ್ತಿದೆ’ ಎಂದಿದ್ದಾರೆ.

ಮುಂದುವರೆದು ಮಾತನಾಡಿ, ‘ನಾನು ಪ್ರಧಾನಿ ನರೇಂದ್ರ ಮೋದಿ ಅವರೊಟ್ಟಿಗೆ ‘ರಾಮಾಯಣ’ ಸಿನಿಮಾದ ಸೆಟ್​ಗೆ ಭೇಟಿ ನೀಡಿದ್ದೆ. ಅವರು ಅದ್ಭುತವಾದ ಕೆಲಸ ಮಾಡುತ್ತಿದ್ದಾರೆ. ‘ರಾಮಾಯಣ’ವನ್ನು ಅದ್ಭುತವಾಗಿ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಹೊಸ ತಲೆಮಾರಿಗೆ ಪೌರಾಣಿಕ ಕತೆಗಳನ್ನು ಇದೇ ಮಾದರಿಯಲ್ಲಿ ನಾವು ಹೇಳಬೇಕಿದೆ. ನೀವು ಮಾಡುತ್ತಿರುವ ಕೆಲಸ ವಿಶ್ವ ಮಟ್ಟದಲ್ಲಿದೆ’ ಎಂದಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಚಿತ್ರೀಕರಣ ಪ್ರಾರಂಭಿಸಿದ ನಟ ಯಶ್

ರಣ್​ಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾವನ್ನು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಭಾರಿ ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಸಿನಿಮಾಕ್ಕೆ ಹಾಲಿವುಡ್​ನ ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಸಿನಿಮಾಕ್ಕಾಗಿ ಹಲವಾರು ಹಾಲಿವಡ್ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಹಾನ್ಸ್ ಜಿಮ್ಮರ್ ‘ರಾಮಾಯಣ’ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಯಶ್ ಇತ್ತೀಚೆಗಷ್ಟೆ ತಮ್ಮ ಭಾಗದ ಚಿತ್ರೀಕರಣ ಆರಂಭಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ