ಸಿಕಂದರ್ ಸೋತಿದ್ದಕ್ಕೆ ಸಲ್ಮಾನ್ ಖಾನ್ ಮೇಲೆ ಗೂಬೆ ಕೂರಿಸಬೇಡಿ: ನವಾಜುದ್ದೀನ್ ಸಿದ್ದಿಕಿ
ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದ ‘ಸಿಕಂದರ್’ ಸಿನಿಮಾ ಸೋತಿತು. ಈ ಸೋಲಿಗೆ ಯಾರು ಕಾರಣ ಎಂದು ಚರ್ಚೆ ಮಾಡಲಾಗುತ್ತಿದೆ. ನಿರ್ದೇಶಕರೇ ಇದಕ್ಕೆ ಕಾರಣ ಎಂದು ನಟ ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ. ತಮ್ಮ ಈ ವಾದಕ್ಕೆ ಸಮರ್ಥನೆಯನ್ನು ಕೂಡ ಅವರು ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ನಟ ಸಲ್ಮಾನ್ ಖಾನ್ ಅವರಿಗೆ ‘ಸಿಕಂದರ್’ (Sikandar) ಸಿನಿಮಾದಿಂದ ಯಾವುದೇ ಗೆಲುವು ಸಿಗಲಿಲ್ಲ. ಎ.ಆರ್. ಮುರುಗದಾಸ್ ಅವರಂತಹ ಘಟಾನುಘಟಿ ನಿರ್ದೇಶಕನ ಜೊತೆ ಕೈ ಜೋಡಿಸಿದರೂ ಕೂಡ ಸಲ್ಮಾನ್ ಖಾನ್ (Salman Khan) ಸೋಲುವಂತಾಯಿತು. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಸಾಧಾರಣ ಕಲೆಕ್ಷನ್ ಮಾಡಿತು. ಹಾಗಾದರೆ ‘ಸಿಕಂದರ್’ ಸಿನಿಮಾದ ಸೋಲಿಗೆ ಕಾರಣ ಏನು ಎಂಬುದರ ಬಗ್ಗೆ ಚರ್ಚೆ ಆಗುತ್ತಿದೆ. ಬಾಲಿವುಡ್ನ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರು ಈ ಸೋಲಿನ ಹೊಣೆಯನ್ನು ನಿರ್ದೇಶಕರಿಗೆ ಹೊರಿಸಿದ್ದಾರೆ. ಅಲ್ಲದೇ, ಸಲ್ಮಾನ್ ಖಾನ್ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ.
ನವಾಜುದ್ದೀನ್ ಸಿದ್ದಿಕಿ ಮತ್ತು ಸಲ್ಮಾನ್ ಖಾನ್ ನಡುವೆ ಉತ್ತಮ ಬಾಂಧವ್ಯ ಇದೆ. ‘ಬಜರಂಗಿ ಭಾಯಿಜಾನ್’ ಸಿನಿಮಾದಲ್ಲಿ ಅವರಿಬ್ಬರು ಒಟ್ಟಿಗೆ ನಟಿಸಿದ್ದರು. ಈಗ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನವಾಜುದ್ದೀನ್ ಸಿದ್ದಿಕಿ ಅವರು ‘ಸಿಕಂದರ್’ ಸಿನಿಮಾದ ಸೋಲಿನ ಬಗ್ಗೆ ಮಾತನಾಡಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಚರ್ಚೆ ಆಗುತ್ತಿದೆ.
‘ಸಲ್ಮಾನ್ ಖಾನ್ ಒಂದು ಸಿನಿಮಾ ಒಪ್ಪಿಕೊಂಡರೆ ನಿರ್ದೇಶಕರ ಮೇಲೆ ಜವಾಬ್ದಾರಿ ಹೆಚ್ಚಿರುತ್ತದೆ. ಯಾಕೆಂದರೆ ಅವರು ತಮ್ಮ ಅಭಿಮಾನಿಗಳನ್ನು ನಿಮ್ಮ ಮುಂದೆ ಇಟ್ಟಿರುತ್ತಾರೆ. ಕೇವಲ ಸಲ್ಮಾನ್ ಖಾನ್ ಕಡೆಗೆ ಬೆರಳು ತೋರಿಸುವುದಲ್ಲ. ನಿರ್ದೇಶಕರು ಕಷ್ಟಪಟ್ಟು ಕೆಲಸ ಮಾಡಬೇಕು. ಸಿನಿಮಾ ಗೆಲ್ಲಲು ಬೇಕಾದ ಎಲ್ಲ ಅಂಶಗಳನ್ನು ಸೇರಿಸಬೇಕು. ಸೂಪರ್ ಸ್ಟಾರ್ ನಟರು ಒಂದು ಸಾಧಾರಣ ಸಿನಿಮಾವನ್ನು ಕೂಡ ದೊಡ್ಡದಾಗಿಸುತ್ತಾರೆ. ನಿರ್ದೇಶಕ ಸರಿಯಾಗಿ ಸ್ಕ್ರಿಪ್ಟ್ ಮಾಡದೇ ಇದ್ದರೆ ನಂತರ ಸೂಪರ್ ಸ್ಟಾರ್ ಮೇಲೆ ಆರೋಪ ಹೊರಿಸೋಕೆ ಆಗಲ್ಲ’ ಎಂದು ನವಾಜುದ್ದೀನ್ ಸಿದ್ದಿಕಿ ಅವರು ಸಲ್ಮಾನ್ ಖಾನ್ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಅಂದಾಜು 200 ಕೋಟಿ ರೂಪಾಯಿ ಬಜೆಟ್ನಲ್ಲಿ ‘ಸಿಕಂದರ್’ ಸಿನಿಮಾ ಸಿದ್ಧವಾಗಿತ್ತು. ಮಾರ್ಚ್ 30ರಂದು ಈ ಸಿನಿಮಾ ಬಿಡುಗಡೆ ಆಯಿತು. ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಗಳಿಸಿದ್ದು 103 ಕೋಟಿ ರೂಪಾಯಿ ಮಾತ್ರ. ನಟಿ ರಶ್ಮಿಕಾ ಮಂದಣ್ಣ ಅವರು ‘ಸಿಕಂದರ್’ ಚಿತ್ರದಲ್ಲಿ ಸಲ್ಮಾನ್ ಖಾನ್ಗೆ ಜೋಡಿಯಾಗಿ ನಟಿಸಿದ್ದಾರೆ. ಅವರು ಲಕ್ಕಿ ಹೀರೋಯಿನ್ ಎಂಬ ಮಾತು ಚಾಲ್ತಿಯಲ್ಲಿದ್ದರೂ ಕೂಡ ಈ ಸಿನಿಮಾ ಗೆಲ್ಲಲಿಲ್ಲ.
ಇದನ್ನೂ ಓದಿ: ವಯಸ್ಸಾಯ್ತು ಎಂದು ಟೀಕಿಸಿದವರಿಗೆ ಖಡಕ್ ಉತ್ತರ ಕೊಟ್ಟ ಸಲ್ಮಾನ್ ಖಾನ್
‘ಸಲ್ಮಾನ್ ಖಾನ್ ಅವರು ಕಷ್ಟದಲ್ಲಿ ಇರುವ ತಮ್ಮ ಗೆಳೆಯರಿಗೆ ಕರೆದು ಅವಕಾಶ ನೀಡುತ್ತಾರೆ. ಇದರಿಂದ ಅವರು ಲಾಭ-ನಷ್ಟದ ಬಗ್ಗೆ ಯೋಚನೆ ಮಾಡುವುದಿಲ್ಲ. ಅದು ಅವರ ಗುಣ. ಈಗ ಅವರ ಸಿನಿಮಾಗಳು ಸೋಲುತ್ತಿರಬಹುದು. ಆದ್ರೆ ಅವರ ಕಾಲ ಮುಗಿದಿಲ್ಲ. ಮತ್ತೆ ಅವರ ಸಿನಿಮಾ ಸೂಪರ್ ಡೂಪರ್ ಹಿಟ್ ಖಂಡಿತಾ ಆಗುತ್ತದೆ’ ಎಂದು ಸಲ್ಲು ಗೆಳೆಯ ಶೆಹಜಾದ್ ಖಾನ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.