ನಟಿ ದೀಪಿಕಾ ಪಡುಕೋಣೆ (Deepika Padukone) ಅವರದ್ದು ನೇರ ನಡೆನುಡಿಯ ವ್ಯಕ್ತಿತ್ವ. 2020ರಲ್ಲಿ ಅವರು ಜೆಎನ್ಯು (ಜವಾಹರಲಾಲ್ ನೆಹರು ಯೂನಿವರ್ಸಿಟಿ) ಕ್ಯಾಂಪಸ್ಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅದರ ಪರಿಣಾಮವಾಗಿ ಅವರ ‘ಛಪಾಕ್’ (Chhapaak) ಸಿನಿಮಾವನ್ನು ಬಹಿಷ್ಕಾರ ಮಾಡುವಂತೆ ಕೆಲವರು ಕರೆ ನೀಡಿದ್ದರು. ಈ ಘಟನೆಯಿಂದ ಸಿನಿಮಾದ ಮೇಲೆ ಪೆಟ್ಟು ಬಿದ್ದಿತ್ತು ಎಂಬುದನ್ನು ನಿರ್ದೇಶಕಿ ಮೇಘನಾ ಗುಲ್ಜಾರ್ (Meghna Gulzar) ಅವರು ಈಗ ಒಪ್ಪಿಕೊಂಡಿದ್ದಾರೆ. ಆ ಮೂಲಕ ಸಿನಿಮಾದ ಸೋಲಿಗೆ ಕಾರಣ ಏನು ಎಂಬುದನ್ನು ಅವರೀಗ ತಿಳಿಸಿದ್ದಾರೆ. ಇದಕ್ಕೆ ದೀಪಿಕಾ ಪಡುಕೋಣೆ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ಮೂಡಿದೆ.
ಆ್ಯಸಿಡ್ ದಾಳಿಗೆ ಒಳಗಾದ ಯುವತಿಯರ ಜೀವನದ ನೈಜ ಘಟನೆಗಳನ್ನು ಆಧರಿಸಿ ‘ಛಪಾಕ್’ ಸಿನಿಮಾ ಮೂಡಿಬಂದಿತ್ತು. ಆ ಸಿನಿಮಾದಲ್ಲಿ ವಿಕ್ರಾಂತ್ ಮಾಸ್ಸಿ, ದೀಪಿಕಾ ಪಡುಕೋಣೆ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಆ ಸಿನಿಮಾ ರಿಲೀಸ್ ಆಗುವುದಕ್ಕೂ ಕೆಲವೇ ದಿನಗಳ ಮುನ್ನ ದೀಪಿಕಾ ಪಡುಕೋಣೆ ಅವರು ಜೆಎನ್ಯು ಕ್ಯಾಂಪಸ್ಗೆ ಭೇಟಿ ನೀಡಿದ್ದರು. ಅದು ಅನೇಕರ ಕೆಂಗಣ್ಣಿಗೆ ಗುರಿ ಆಗಿತ್ತು. ಹಾಗಾಗಿ ಸಿನಿಮಾವನ್ನು ಬಹಿಷ್ಕರಿಸಲು ಒಂದು ವರ್ಗದ ಜನರು ಮುಂದಾಗಿದ್ದರು.
ಇದನ್ನೂ ಓದಿ: ‘ಮನಸ್ಸಿಗೆ ಅನಿಸಿದ್ದನ್ನು ಹೇಳಲು ನಾನು ಎರಡು ಬಾರಿ ಆಲೋಚಿಸುವುದಿಲ್ಲ’; ದೀಪಿಕಾ ಪಡುಕೋಣೆ
‘ಇಂಡಿಯನ್ ಎಕ್ಸ್ಪ್ರೆಸ್ ಅಡ್ಡಾ’ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ನಿರ್ದೇಶಕಿ ಮೇಘನಾ ಗುಲ್ಜಾರ್ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ‘ಹೌದು ಆ ಘಟನೆಯಿಂದ ಸಿನಿಮಾಗೆ ಹೊಡೆತ ಬಿತ್ತು. ಆ್ಯಸಿಡ್ ದಾಳಿ ಬಗ್ಗೆ ಮಾತನಾಡಬೇಕಿದ್ದ ಸಿನಿಮಾದ ಚರ್ಚೆ ಬೇರೆಲ್ಲಿಗೋ ಹೋಯಿತು. ಹಾಗಾಗಿ ಖಂಡಿತವಾಗಿಯೂ ಅದರಿಂದ ಸಿನಿಮಾದ ಮೇಲೆ ಪರಿಣಾಮ ಬೀರಿತು. ಅದನ್ನು ಒಪ್ಪಿಕೊಳ್ಳದೇ ಇರುವ ಮಾತೇ ಇಲ್ಲ’ ಎಂದು ಮೇಘನಾ ಗುಲ್ಜಾರ್ ಹೇಳಿದ್ದಾರೆ. 2020ರ ಜನವರಿ 10ರಂದು ತೆರೆಕಂಡ ‘ಛಪಾಕ್’ ಸಿನಿಮಾ ಉತ್ತಮ ವಿಮರ್ಶೆ ಪಡೆದರೂ ಕೂಡ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದು 34 ಕೋಟಿ ರೂಪಾಯಿ ಮಾತ್ರ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಹಳೇ ಸಂಬಂಧದ ಬಗ್ಗೆ ಕಾಲೇಜು ಫೆಸ್ಟ್ನಲ್ಲಿ ಹಾಸ್ಯ; ಇದು ನಾಚಿಕೆಗೇಡು ಎಂದ ನೆಟ್ಟಿಗರು
ಮೇಘನಾ ಗುಲ್ಜಾರ್ ಅವರು ‘ತಲ್ವಾರ್’, ‘ರಾಜಿ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿ ಖ್ಯಾತಿ ಗಳಿಸಿದ್ದಾರೆ. ಅವರು ಈಗ ‘ಸ್ಯಾಮ್ ಬಹದ್ದೂರ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇದು ಕೂಡ ನೈಜ ಘಟನೆ ಆಧರಿಸಿ ಮೂಡಿಬಂದಿದೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಡಿಸೆಂಬರ್ 1ರಂದು ‘ಸ್ಯಾಮ್ ಬಹದ್ದೂರ್’ ಸಿನಿಮಾ ಬಿಡುಗಡೆ ಆಗಲಿದೆ. ಅದೇ ದಿನ ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಚಿತ್ರ ಕೂಡ ಬಿಡುಗಡೆ ಆಗುತ್ತಿದ್ದು, ಪೈಪೋಟಿ ಜೋರಾಗಿ ಇರಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.