ಮಿಥುನ್ ಚಕ್ರವರ್ತಿ ಮೊದಲ ಪತ್ನಿ ನಿಧನ; ನಾಲ್ಕು ತಿಂಗಳು ಮಾತ್ರ ನಡೆದಿತ್ತು ಸಂಸಾರ
ನಟ ಮಿಥುನ್ ಚಕ್ರವರ್ತಿಯವರ ಮೊದಲ ಪತ್ನಿ ಹೆಲೆನಾ ಲ್ಯೂಕ್ ಅವರು 68ನೇ ವಯಸ್ಸಿನಲ್ಲಿ ಅಮೆರಿಕದಲ್ಲಿ ನಿಧನರಾಗಿದ್ದಾರೆ. ಅವರು 1979ರಲ್ಲಿ ಮಿಥುನ್ ಅವರನ್ನು ವಿವಾಹವಾಗಿ ನಾಲ್ಕು ತಿಂಗಳಲ್ಲೇ ವಿಚ್ಛೇದನ ಪಡೆದಿದ್ದರು. ಹೆಲೆನಾ ಅವರು ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದರು ಮತ್ತು ಅಮೆರಿಕದಲ್ಲಿ ವಾಸಿಸುತ್ತಿದ್ದರು. ಅವರ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ನಟ ಮಿಥುನ್ ಚಕ್ರವರ್ತಿ ಅವರ ಮೊದಲ ಪತ್ನಿ, ನಟಿ ಹೆಲೆನಾ ಲ್ಯೂಕ್ ಅವರು ಭಾನುವಾರ ಅಮೆರಿಕದಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಹೆಲೆನಾ 1985ರಲ್ಲಿ ಅಮಿತಾಬ್ ಬಚ್ಚನ್ ನಟನೆಯ ‘ಮರ್ದ್’ ಚಿತ್ರದಲ್ಲಿ ನಟಿಸಿದ್ದರು. ನಟಿ ಕಲ್ಪನಾ ಅಯ್ಯರ್ ಅವರು ಹೆಲೆನಾ ಸಾವಿನ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಹೆಲೆನಾ ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಹೆಲೆನಾ ಹಾಗೂ ಮಿಥುನ್ ಚಕ್ರವರ್ತಿ ಅವರು 1979ರಲ್ಲಿ ಮದುವೆ ಆದರು. ಇವರು ನಾಲ್ಕು ತಿಂಗಳು ಮಾತ್ರ ಸಂಸಾರ ನಡೆಸಿದ್ದರು. ಆಗಲೇ ಇವರು ವಿಚ್ಛೇದನ ಪಡೆದರು. ಅದೇ ವರ್ಷ ಯೋಗಿತಾ ಬಾಲಿ ಅವರನ್ನು ಮದುವೆ ಆದರು. ಇವರು ಈಗಲೂ ಒಟ್ಟಾಗಿ ಇದ್ದಾರೆ. ಈ ದಂಪತಿಗೆ ನಾಲ್ವರು ಮಕ್ಕಳು. ಹೆಲೆನಾ ಅವರು ಸದ್ಯ ಅಮೆರಿಕದಲ್ಲಿಯೇ ಸೆಟಲ್ ಆಗಿದ್ದರು.
ಹೆಲೆನಾ ಅವರು ಇನ್ಸ್ಟಾಗ್ರಾಮ್ನಲ್ಲಿ ಮಾಡಿರುವ ಕೊನೆಯ ಪೋಸ್ಟ್ ಕೂಡ ಚರ್ಚೆಗೆ ಕಾರಣವಾಗಿದೆ. ‘ಇದು ತುಂಬಾ ವಿಚಿತ್ರ ಅನಿಸುತ್ತಿದೆ. ಅನೇಕ ಭಾವನೆಗಳು ನನ್ನ ಮನಸ್ಸಿನಲ್ಲಿ ಬಂದಿವೆ. ಇದಕ್ಕೆ ಕಾರಣವೇನು ಎಂದು ನನಗೆ ತಿಳಿದಿಲ್ಲ. ದುಃಖವಾಗುತ್ತಿದೆ’ ಎಂದು ಅವರು ಕೊನೆಯ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಅವರಿಗೆ ಸಾವಿನ ಬಗ್ಗೆ ಮೊದಲೇ ತಿಳಿದಿತ್ತೇ ಅಥವಾ ಇದೊಂದು ಆತ್ಮಹತ್ಯೆಯೇ ಎನ್ನುವ ಪ್ರಶ್ನೆ ಮೂಡಿದೆ.
ಹೆಲೆನಾ ಅವರು ಅಮಿತಾಭ್ ಬಚ್ಚನ್ ಅವರ ‘ಮರ್ದ್’ ಚಿತ್ರವಲ್ಲದೆ, ‘ಏಕ್ ನಯಾ ರಿಷ್ತಾ’, ‘ಮೇರೆ ಸಾಥ್ ಚಲ್’ ಮತ್ತು ‘ದೋ ಗುಲಾಬ್’ ಚಿತ್ರಗಳಲ್ಲಿ ನಟಿಸಿದ್ದರು. ಹೆಲೆನಾ ಕಳೆದ ಕೆಲವು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದರು. ಅವರು ಡೆಲ್ಟಾ ಏರ್‌ಲೈನ್ಸ್‌ನಲ್ಲಿಯೂ ಕೆಲಸ ಮಾಡಿದ್ದಾರೆ.
ಈ ಮೊದಲು ಹೆಲೆನಾ ಅವರು ಮಿಥುನ್ ಬಗ್ಗೆ ಮಾತನಾಡಿದ್ದರು. ‘ನನ್ನ ನಾಲ್ಕು ತಿಂಗಳ ಮದುವೆ ಈಗ ಕನಸಿನಂತೆ ಕಾಣುತ್ತಿದೆ. ಹೀಗಾಗದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸುತ್ತದೆ. ಅವರೇ ನನಗೆ ಎಂದು ಬ್ರೈನ್ ವಾಶ್ ಮಾಡಿದ್ದರು. ದುರದೃಷ್ಟವಶಾತ್, ಅವರು ಯಶಸ್ವಿಯಾದರು. ಮಿಥುನ್ ಚಕ್ರವರ್ತಿ ಅವರ ಜೊತೆಗಿನ ಮದುವೆ ನನಗೆ ಕೆಟ್ಟ ಕನಸಿನಂತಿದೆ. ನಾನು ಬೇಗನೆ ಅದರಿಂದ ಹೊರಬಂದೆ. ನಾನು ಈ ಮದುವೆಯಿಂದ ಹೊರಬರಲು ನಿರ್ಧರಿಸಿದೆ ಮತ್ತು ವಿಚ್ಛೇದನವನ್ನು ಕೇಳಿದೆ. ಅವನು ಈ ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಯಾದರೂ, ನಾನು ಅವನ ಬಳಿಗೆ ಹಿಂತಿರುಗುವುದಿಲ್ಲ. ನಾನು ಅವನಿಂದ ಜೀವನಾಂಶವನ್ನೂ ಕೇಳಲಿಲ್ಲ’ ಎಂದಿದ್ದರು ಅವರು.
ಇದನ್ನೂ ಓದಿ: ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಮಿಥುನ್ ಅವರು ಹೆಲೆನಾ ಅವರನ್ನು ಸದಾ ಅನುಮಾನದಿಂದಲೇ ನೋಡುತ್ತಿದ್ದರಂತೆ. ಹಳೆಯ ಬಾಯ್ಫ್ರೆಂಡ್ನ ಭೇಟಿ ಮಾಡಿದ್ದೀಯಾ ಎಂದು ಅವರು ಆರೋಪಿಸುತ್ತಿದ್ದರಂತೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:13 pm, Mon, 4 November 24