ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಮುಂಬೈ ಪೊಲೀಸ್ ಅಪರಾಧ ವಿಭಾಗವು ಉದ್ಯಮಿ ರಾಜ್ ಕುಂದ್ರಾ ಅವರನ್ನು ಬಂಧಿಸಿತ್ತು. ಈ ಬಂಧನವನ್ನು ಪ್ರಶ್ನಿಸಿ ರಾಜ್ ಕುಂದ್ರಾ ಅವರು ಬಾಂಬೇ ಹೈಕೋರ್ಟ್ ಮೊರೆ ಹೋಗಿದ್ದಾರೆ. ತಮಗೆ ಜಾಮೀನು ನೀಡುವಂತೆ ಕೋರಿದ್ದಾರೆ. ಆದರೆ, ಈ ಅರ್ಜಿಯನ್ನು ವಜಾ ಮಾಡುವಂತೆ ಮುಂಬೈ ಪೊಲೀಸರ ಪರ ವಕೀಲರು ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಅಲ್ಲದೆ, ಸಾಕ್ಷ್ಯ ನಾಶದ ಗಂಭೀರ ಆರೋಪವನ್ನು ಕೂಡ ಮಾಡಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ರಾಜ್ ಕುಂದ್ರಾ ಮತ್ತು ಇತರರ ನಡುವೆ ನಡೆದ ವಾಟ್ಸಾಪ್ ಚಾಟ್ ಡಿಲೀಟ್ ಮಾಡಲಾಗಿದೆ ಎನ್ನಲಾಗಿದೆ. ರಾಜ್ ಕುಂದ್ರಾ ಅವರ ಐಟಿ ಎಕ್ಸ್ಪರ್ಟ್ ರಯಾನ್ ಥೋರ್ಪೆ ಸಾಕ್ಷ್ಯ ನಾಶ ಮಾಡಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ವಾಟ್ಸಾಪ್ ಚಾಟ್ ಡಿಲೀಟ್ ಮಾಡಿದ್ದರಲ್ಲಿ ಇವರ ಪಾತ್ರ ದೊಡ್ಡದಿದೆ ಎನ್ನಲಾಗಿದೆ. ಈ ಕುರಿತು ಮುಂಬೈ ಪೊಲೀಸರು ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
‘ರಾಜ್ ಕುಂದ್ರಾ ಹಾಗೂ ರಯಾನ್ ವಾಟ್ಸಾಪ್ ಚಾಟ್ ಡಿಲೀಟ್ ಮಾಡಿದ್ದಾರೆ. ಎಷ್ಟು ಡೇಟಾ ಡಿಲೀಟ್ ಮಾಡಲಾಗಿದೆ ಎಂಬುದು ಗೊತ್ತಿಲ್ಲ. ಡಿಲೀಟ್ ಆದ ಡೇಟಾಗಳನ್ನು ನಾವು ಮರಳಿ ಪಡೆಯೋಕೆ ಪ್ರಯತ್ನಿಸುತ್ತಿದ್ದೇವೆ. ಆರೋಪಿಯು ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡುತ್ತಿದ್ದಾನೆ ಎಂದಾದರೆ ತನಿಖಾ ಸಂಸ್ಥೆಯು ಇದನ್ನು ಸುಮ್ಮನೆ ನೋಡುತ್ತಿರಬೇಕೇ? ಇದು ಸಾಧ್ಯವಿಲ್ಲ’ ಎಂದು ಸರ್ಕಾರದ ಪರ ವಕೀಲೆ ಅರುಣಾ ಪೈ ಕೋರ್ಟ್ಗೆ ಹೇಳಿದ್ದಾರೆ.
ರಾಜ್ ಕುಂದ್ರಾ ಪರ ವಕೀಲರು ಸಾಕ್ಷ್ಯ ನಾಶದ ಹೇಳಿಕೆಯನ್ನು ನಿರಾಕರಿಸಿದ್ದಾರೆ. ‘ರಾಜ್ ಕುಂದ್ರಾಗೆ ಸಂಬಂಧಿಸಿದ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ಶೋಧದ ಸಮಯದಲ್ಲೇ ವಶಪಡಿಸಿಕೊಂಡಿದ್ದಾರೆ. ಹೀಗಿರುವಾಗ ಸಾಕ್ಷ್ಯ ನಾಶ ಮಾಡೋಕೆ ಹೇಗೆ ಸಾಧ್ಯ’ ಎಂದು ಪ್ರಶ್ನೆ ಮಾಡಿದ್ದಾರೆ.
‘ಲ್ಯಾಪ್ಟಾಪ್ನಿಂದ ಅಶ್ಲೀಲ ಸಿನಿಮಾಗಳು, ಹಣಕಾಸಿನ ಯೋಜನೆ ಮೊದಲಾದ ಕೆಲ ಪ್ರಮುಖ ಮಾಹಿತಿಯನ್ನು ಮುಂಬೈ ಕ್ರೈಮ್ ಬ್ರ್ಯಾಂಚ್ ವಶಕ್ಕೆ ಪಡೆದಿದೆ. ಇದರ ಜತೆಗೆ ರಾಜ್ ಕುಂದ್ರಾ ಹಾಗೂ ಅವರ ಭಾವ ಪ್ರದೀಪ್ ಭಕ್ಷಿ ಜತೆ ನಡೆದ ಇಮೇಲ್ ಸಂಭಾಷಣೆ ಕೂಡ ಪೊಲೀಸರಿಗೆ ಸಿಕ್ಕಿದೆ. ಕೆಲವು ಮಾಹಿತಿಗಳು ಡಿಲೀಟ್ ಆಗಿವೆ’ ಎಂದು ಅರುಣಾ ಪೈ ಕೋರ್ಟ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಪೊಲೀಸರು ನನ್ನಿಂದ ಬಲವಂತವಾಗಿ ರಾಜ್ ಕುಂದ್ರಾ ಹೆಸರು ಹೇಳಿಸಲು ಪ್ರಯತ್ನಿಸಿದ್ರು; ನಟಿ ಗೆಹನಾ ಸ್ಫೋಟಕ ಆರೋಪ
Published On - 7:22 pm, Mon, 2 August 21