‘ದಿ ಕೇರಳ ಸ್ಟೋರಿ’ ಬ್ಯಾನ್​ಗೆ ಒತ್ತಾಯಿಸುವ ಮೂಲಕ, ಕಾಂಗ್ರೆಸ್ ಭಯೋತ್ಪಾದಕರೊಟ್ಟಿಗೆ ನಿಂತಿದೆ: ಪ್ರಧಾನಿ ಮೋದಿ

|

Updated on: May 05, 2023 | 3:39 PM

The Kerala Story: ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ದಿ ಕೇರಳ ಸ್ಟೋರಿ ಬ್ಯಾನ್​ಗೆ ಒತ್ತಾಯಿಸುವ ಮೂಲಕ, ಕಾಂಗ್ರೆಸ್ ಭಯೋತ್ಪಾದಕರೊಟ್ಟಿಗೆ ನಿಂತಿದೆ: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ಇಂದು (ಮೇ 05) ಬಿಡುಗಡೆ ಆಗಿರುವ ವಿವಾದಾತ್ಮಕ ‘ದಿ ಕೇರಳ ಸ್ಟೋರಿ‘ (The Kerala Story) ಸಿನಿಮಾ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತನಾಡಿದ್ದಾರೆ. ಇಂದು ಬಳ್ಳಾರಿಯಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ”ದಿ ಕೇರಳ ಸ್ಟೋರಿ’ ಸಿನಿಮಾವು ಸುಂದರ ರಾಜ್ಯ ಕೇರಳದಲ್ಲಿ ನಡೆದಿರುವ ಕರಾಳ ಘಟನೆಗಳ ಮೇಲೆ ಆಧರಿಸಿದ್ದೆ. ಆದರೆ ಕಾಂಗ್ರೆಸ್​ನವರು ಆ ಸಿನಿಮಾವನ್ನು ಬ್ಯಾನ್ ಮಾಡಲು ಒತ್ತಾಯಿಸುವ ಮೂಲಕ ಭಯೋತ್ಪಾದಕರ ಜೊತೆಗೆ ನಿಂತಿದ್ದಾರೆ” ಎಂದಿದ್ದಾರೆ.

‘ದಿ ಕೇರಳ ಸ್ಟೋರಿ’ ಸಿನಿಮಾವು ಕೇರಳದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಲೋಕದ ಮುಂದೆ ತೆರೆದಿಟ್ಟಿದೆ. ಆದರೆ ದೇಶದ ಈ ದುರಾದೃಷ್ಟಕರ ಸಂಗತಿ ಎಂದರೆ ಕಾಂಗ್ರೆಸ್ ಪಕ್ಷವು ಈ ಭಯೋತ್ಪಾದಕರ ಮನಸ್ಥಿತಿಯವರ ಬೆಂಬಲಕ್ಕೆ ನಿಂತಿದ್ದಾರೆ, ಆ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ, ಈ ಭಯೋತ್ಪಾದನೆಯ ಪ್ರವೃತ್ತಿಯೊಂದಿಗೆ ನಂಟು ಹೊಂದಿರುವವರೊಂದಿಗೆ ಹಿಂಬಾಗಿಲಿನ ರಾಜಕೀಯ ಮಾತುಕತೆಗಳನ್ನು ಸಹ ಕಾಂಗ್ರೆಸ್ ನಡೆಸುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ ಪ್ರಧಾನಿ ಮೋದಿ.

ಸುದಿಪ್ತೊ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಸಿನಿಮಾವು ಕೇರಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮತಾಂತರ, ಲವ್ ಜಿಹಾದ್​ನ ಕತೆಯನ್ನು ಒಳಗೊಂಡಿದೆ. ಈ ಸಿನಿಮಾವು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಬಿತ್ತುವ ಹಾಗೂ ಕೇರಳ ರಾಜ್ಯದ ಘನತೆಗೆ ಕುತ್ತು ತರುವ ಪೂರ್ವೋದ್ದೇಶದಿಂದ ನಿರ್ಮಿಸಲಾಗಿದೆ ಎಂದು ಕೇರಳದ ಆಡಳಿತ ಸರ್ಕಾರ, ವಿಪಕ್ಷವಾದ ಕಾಂಗ್ರೆಸ್, ಕೇರಳ ಕಾಂಗ್ರೆಸ್ ಹಾಗೂ ಇನ್ನಿತರೆ ಕೆಲವು ಪಕ್ಷಗಳು ವಿರೋಧಿಸಿವೆ. ಸಿನಿಮಾವು ಕೇರಳದಲ್ಲಿ ಬಿಡುಗಡೆ ಆಗದಂತೆ ತಡೆಯಲು ಮನವಿಯನ್ನು ಸಹ ಮಾಡಿದ್ದವು.

ಈ ಹಿಂದೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೂ ಬೆಂಬಲಿಸಿ ಪ್ರಧಾನಿ ಮೋದಿ ಮಾತನಾಡಿದ್ದರು. ಆ ಸಿನಿಮಾ ಕಾಶ್ಮೀರದಲ್ಲಿ 1990 ರಲ್ಲಿ ನಡೆದಿದೆ ಎನ್ನಲಾಗುವ ಹಿಂದುಗಳ ಹತ್ಯಾಕಾಂಡದ ಕುರಿತಾದ ಕತೆಯನ್ನು ಒಳಗೊಂಡಿತ್ತು. ಆ ಸಿನಿಮಾ ಸಹ ಬಿಡುಗಡೆಗೆ ಮುನ್ನ ಭಾರಿ ವಿವಾದ ಸೃಷ್ಟಿಸಿತ್ತು, ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಸೃಷ್ಟಿಸುವ ಕಾರಣ ನಿರ್ಮಿಸಲಾದ ಪ್ರೊಪೊಗ್ಯಾಂಡಾ ಸಿನಿಮಾ ಇದಾಗಿದೆ ಎಂದು ಕಾಂಗ್ರೆಸ್ ಸೇರಿದಂತೆ ಇತರೆ ಕೆಲವು ಪಕ್ಷಗಳು ಟೀಕಿಸಿದ್ದವು. ಇದೀಗ ‘ದಿ ಕೇರಳ ಸ್ಟೋರಿ’ ಸಿನಿಮಾದ ವಿರುದ್ಧವೂ ಅಂಥಹುದೇ ಆರೋಪಗಳು ಕೇಳಿಬರುತ್ತಿರುವಾಗಲೇ ಪ್ರಧಾನಿ ಮೋದಿಯವರು ಸಿನಿಮಾದ ಪರವಾಗಿ ಮಾತನಾಡಿದ್ದಾರೆ.

ಸಿಬಿಎಫ್​ಸಿಯಿಂದ ಎ ಪ್ರಮಾಣ ‘ದಿ ಕೇರಳ ಸ್ಟೋರಿ’ ಸಿನಿಮಾವು ಮೇ 5 ರಂದು ಬಿಡುಗಡೆ ಆಗಿದೆ. ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಿಲಾನಿ, ಸಿದ್ದ ಇದ್ನಾನಿ ಇನ್ನಿತರರು ನಟಿಸಿದ್ದಾರೆ. ಸುದಿಪ್ತೊ ಸೇನ್ ನಿರ್ದೇಶಿಸಿರುವ ಈ ಸಿನಿಮಾವನ್ನು ವಿಪುಲ್ ಅಮೃತಲ್ ಶಾ ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Fri, 5 May 23