‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಮಧ್ಯ ಪ್ರದೇಶ ಸರ್ಕಾರ

The Kerala Story: ಮಧ್ಯ ಪ್ರದೇಶ ರಾಜ್ಯದಲ್ಲಿ ದಿ ಕೇರಳ ಸ್ಟೋರಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿಡಿಯೋ ಮೂಲಕ ಈ ಘೋಷಣೆ ಮಾಡಿದ್ದು, ಸಿನಿಮಾವನ್ನು ಎಲ್ಲರೂ ನೋಡಬೇಕು ಎಂದಿದ್ದಾರೆ.

'ದಿ ಕೇರಳ ಸ್ಟೋರಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಮಧ್ಯ ಪ್ರದೇಶ ಸರ್ಕಾರ
ದಿ ಕೇರಳ ಸ್ಟೋರಿ
Follow us
|

Updated on: May 06, 2023 | 2:46 PM

ಸುದಿಪ್ತೋ ಸೇನ್ (Sudipto Sen) ನಿರ್ದೇಶನ ಮಾಡಿರುವ ‘ದಿ ಕೇರಳ ಸ್ಟೋರಿ‘ (The Kerala Story) ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಸಿನಿಮಾ ಬಿಡುಗಡೆ ಮುಂಚಿನಿಂದಲೂ ವಿವಾದಕ್ಕೆ ಈಡಾಗಿದ್ದು ಕೇರಳ ಸರ್ಕಾರ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಸಿನಿಮಾವನ್ನು ವಿರೋಧಿಸುತ್ತಲೇ ಬಂದಿವೆ. ಕೇರಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮತಾಂತರದ ಕುರಿತಾದ ಕತೆಯನ್ನು ಸಿನಿಮಾ ಒಳಗೊಂಡಿದ್ದು, ಇದು ರಾಜಕೀಯ ಪ್ರೊಪಾಗ್ಯಾಂಡ ಹೊಂದಿರುವ ಸಿನಿಮಾ ಎಂಬ ಆರೋಪಗಳಿವೆ. ಇವುಗಳ ನಡುವೆಯೇ ಇದೀಗ ಮಧ್ಯ ಪ್ರದೇಶ ಸರ್ಕಾರವು (Madhya Pradesh) ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದೆ.

ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಬೇಕೆಂದು ಮಧ್ಯ ಪ್ರದೇಶದ ಕೆಲವು ಹಿಂದುಪರ ಸಂಘಟನೆಗಳು, ಬಿಜೆಪಿಯು ತಮ್ಮದೇ ಪಕ್ಷದ ಸಿಎಂ ಅವರನ್ನು ಒತ್ತಾಯಿಸಿದ್ದವು. ಇದೀಗ ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ವಿಡಿಯೋ ಒಂದನ್ನು ಪ್ರಕಟಿಸಿದ್ದು, ದಿ ಕೇರಳ ಸ್ಟೋರಿ ಸಿನಿಮಾವನ್ನು ಹೊಗಳಿರುವುದಲ್ಲದೆ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.

‘ದಿ ಕೇರಳ ಸ್ಟೋರಿ’ ಸಿನಿಮಾವು ಲವ್ ಜಿಹಾದ್, ಮತಾಂತರ, ಭಯೋತ್ಪಾದಕತೆಯ ಷಡ್ಯಂತ್ರವನ್ನು ಬಯಲಿಗೆಳೆಯುತ್ತದೆ, ಇವುಗಳ ಕೆಟ್ಟ ಮುಖವನ್ನು ಬಹಿರಂಗಗೊಳಿಸುವ ಸಿನಿಮಾ ಆಗಿದೆ. ಕ್ಷಣಿಕ ಭಾವುಕತೆಯಲ್ಲಿ, ಹೆಣ್ಣು ಮಕ್ಕಳು ಲವ್ ಜಿಹಾದ್ ಜಾಲದಲ್ಲಿ ಸಿಲುಕಿದರೆ ಅವರ ಜೀವನ ಹೇಗೆ ಹಾಳಾಗಿ ಹೋಗುತ್ತದೆ ಎಂಬುದನ್ನು ಈ ಸಿನಿಮಾ ತೋರಿಸುತ್ತದೆ. ಭಯೋತ್ಪಾದನೆಯ ವಿನ್ಯಾಸಗಳು ವಿವಿಧ ಮುಖಗಳು ಹೇಗಿರುತ್ತವೆ ಎಂಬುದನ್ನೂ ಈ ಸಿನಿಮಾ ತೋರಿಸಿಕೊಡುತ್ತದೆ. ಈ ಸಿನಿಮಾ ನಮ್ಮನ್ನು ಜಾಗರೂಕಗೊಳಿಸುತ್ತದೆ.” ಎಂದಿದ್ದಾರೆ ಶಿವರಾಜ್ ಸಿಂಗ್ ಚೌಹಾಣ್.

”ಮಧ್ಯ ಪ್ರದೇಶದಲ್ಲಿ ಈಗಾಗಲೇ ನಮ್ಮ ಸರ್ಕಾರವು ಮತಾಂತರಣದ ವಿರುದ್ಧ ಕಾನೂನು ಮಾಡಿದ್ದೇವೆ. ಆದರೆ ಈ ಸಿನಿಮಾ ಜನರಲ್ಲಿ ಜಾಗೃತಿ ಮೂಡಿಸುತ್ತದೆ ಹಾಗಾಗಿ ಈ ಸಿನಿಮಾವನ್ನು ಎಲ್ಲರೂ ನೋಡಬೇಕಿದೆ. ಪಾಲಕರೂ ಈ ಸಿನಿಮಾ ನೋಡಬೇಕು, ಮಕ್ಕಳೂ ಸಹ ಈ ಸಿನಿಮಾ ನೋಡಬೇಕು. ಹೆಣ್ಣು ಮಕ್ಕಳು ಸಹ ಸಿನಿಮಾ ನೋಡಬೇಕು ಹಾಗಾಗಿ ಈ ಸಿನಿಮಾಕ್ಕೆ ಮಧ್ಯ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ” ಎಂದಿದ್ದಾರೆ.

ನಿನ್ನೆಯಷ್ಟೆ ಪ್ರಧಾನಿ ನರೇಂದ್ರ ಮೋದಿಯವರು ಸಹ ಕರ್ನಾಟಕದ ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ದಿ ಕೇರಳ ಸ್ಟೋರಿ ಸಿನಿಮಾದ ವಿಷಯವಾಗಿ ಮಾತನಾಡಿದ್ದರು. ‘ದಿ ಕೇರಳ ಸ್ಟೋರಿ’ ಸಿನಿಮಾವು ಕೇರಳದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಲೋಕದ ಮುಂದೆ ತೆರೆದಿಟ್ಟಿದೆ. ಆದರೆ ದೇಶದ ಈ ದುರಾದೃಷ್ಟಕರ ಸಂಗತಿ ಎಂದರೆ ಕಾಂಗ್ರೆಸ್ ಪಕ್ಷವು ಈ ಭಯೋತ್ಪಾದಕರ ಮನಸ್ಥಿತಿಯವರ ಬೆಂಬಲಕ್ಕೆ ನಿಂತಿದ್ದಾರೆ, ಆ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ, ಈ ಭಯೋತ್ಪಾದನೆಯ ಪ್ರವೃತ್ತಿಯೊಂದಿಗೆ ನಂಟು ಹೊಂದಿರುವವರೊಂದಿಗೆ ಹಿಂಬಾಗಿಲಿನ ರಾಜಕೀಯ ಮಾತುಕತೆಗಳನ್ನು ಸಹ ಕಾಂಗ್ರೆಸ್ ನಡೆಸುತ್ತಿದೆ’ ಎಂದು ಮೋದಿ ವಾಗ್ದಾಳಿ ನಡೆಸಿದ್ದರು.

ಈ ಹಿಂದೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೂ ಸಹ ಮಧ್ಯ ಪ್ರದೇಶ ಹಾಗೂ ಇತರೆ ಕೆಲವು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿತ್ತು. ಕರ್ನಾಟಕದಲ್ಲಿಯೂ ತೆರಿಗೆ ವಿನಾಯಿತಿ ಘೋಷಿಸಲಾಗಿತ್ತು. ಇದೀಗ ‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೂ ತೆರಿಗೆ ವಿನಾಯಿತಿ ಘೋಷಿಸಲಾಗಿದ್ದು, ಮುಂದೆ ಇನ್ನೂ ಕೆಲವು ರಾಜ್ಯಗಳು ತೆರಿಗೆ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ