ನಟ ನವಾಜುದ್ದೀನ್ ಸಿದ್ಧಿಕಿ ಹಾಗೂ ಅವರ ಮಾಜಿ ಪತ್ನಿ ಆಲಿಯಾ ನಡುವಿನ ಜಗಳ ಬೀದಿಗೆ ಬಂದಿದೆ. ಬೀದಿಯಲ್ಲಿ ಮಕ್ಕಳೊಂದಿಗೆ ನಿಂತು ವಿಡಿಯೋ ಮಾಡಿರುವ ನವಾಜುದ್ದೀನ್ ಪತ್ನಿ ಆಲಿಯಾ, ನವಾಜುದ್ದೀನ್ ಹಾಗೂ ಅವರ ತಾಯಿ ನನ್ನನ್ನು ಮಕ್ಕಳನ್ನು ಬೀದಿ ಪಾಲು ಮಾಡಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ ಇದೀಗ ನವಾಜುದ್ದೀನ್ ಸಿದ್ಧಿಕಿ ಪತ್ನಿಯ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದು, ಹಣಕ್ಕಾಗಿ ನಾಟಕ ಮಾಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ನವಾಜುದ್ದೀನ್ ಸಿದ್ಧಿಕಿ, ಇದು ಆರೋಪ ಅಲ್ಲ, ನನ್ನ ಭಾವನೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಪ್ರಕರಣದ ಬಗ್ಗೆ ಇಷ್ಟು ದಿನ ಮೌನವಾಗಿದ್ದೆ, ಇದೇ ಕಾರಣಕ್ಕೆ ನನ್ನನ್ನು ಆರೋಪಿ ಎಂದುಕೊಳ್ಳಲಾಗುತ್ತಿದೆ. ನನ್ನನ್ನು ವಿಲನ್ನಂತೆ ಕಾಣಲಾಗುತ್ತಿದೆ. ಸಾಮಾಜಿಕ ಜಾಲತಾಣದ ಕೆಲವರು, ಮಾಧ್ಯಮ ಹಾಗೂ ಕೆಲವು ಮಂದಿ ನನ್ನ ಈ ವ್ಯಕ್ತಿತ್ವ ವಧೆಯನ್ನು ಬಹಳ ಎಂಜಾಯ್ ಮಾಡುತ್ತಿದ್ದಾರೆ ಎಂದಿದ್ದಾರೆ ನವಾಜ್.
ನಾನು ಹಾಗೂ ಅಲಿಯಾ ವಿಚ್ಛೇದನ ಪಡೆದು ಕೆಲವು ವರ್ಷಗಳಾಗಿವೆ. ನಾವಿಬ್ಬರೂ ಒಟ್ಟಿಗಿಲ್ಲ. ಆದರೆ ನಮ್ಮ ಮಕ್ಕಳಿಗಾಗಿ ಕೆಲವು ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ನಮ್ಮ ಮಕ್ಕಳು ಏಕೆ ಕಳೆದ 45 ದಿನಗಳಿಂದಲೂ ಭಾರತದಲ್ಲಿದ್ದಾರೆ ಯಾರಾದರೂ ಕೇಳಿದ್ದೀರ? ಅವರು ಕಳೆದ 45 ದಿನಗಳಿಂದಲೂ ಶಾಲೆಗೆ ಹೋಗಿಲ್ಲ. ಅವರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ. ದುಬೈನ ಅವರ ಶಾಲೆಯವರು, ಮಕ್ಕಳನ್ನು ಶಾಲೆಗೆ ಕಳಿಸಿರೆಂದು ಪ್ರತಿದಿನವೂ ನನಗೆ ಸಂದೇಶಗಳನ್ನು ಕಳಿಸುತ್ತಿದ್ದಾರೆ ಎಂದಿದ್ದಾರೆ ನವಾಜ್.
ಇನ್ನು ಹಣಕಾಸಿನ ವಿಷಯಕ್ಕೆ ಬಂದರೆ ಕಳೆದ ಎರಡು ವರ್ಷಗಳಿಂದ ಆಲಿಯಾಗೆ ಪ್ರತಿತಿಂಗಳೂ ಸುಮಾರು 10 ಲಕ್ಷ ರುಪಾಯಿ ಹಣ ನೀಡುತ್ತಾ ಬಂದಿದ್ದೇನೆ. ಆಕೆ ದುಬೈಗೆ ಹೋಗುವ ಮುನ್ನ ತಿಂಗಳಿಗೆ 5 ರಿಂದ 7 ಲಕ್ಷ ಹಣ ನೀಡುತ್ತಿದ್ದೇನೆ. ಮಕ್ಕಳ ಫೀಸು, ಮೆಡಿಕಲ್ ಬಿಲ್ಗಳು, ಪ್ರಯಾಣ ವೆಚ್ಚ ಇನ್ನೂ ಹಲವು ವೆಚ್ಚಗಳನ್ನು ಪ್ರತ್ಯೇಕವಾಗಿ ಭರಿಸುತ್ತಿದ್ದೇನೆ. ಇದು ಮಾತ್ರವೇ ಅಲ್ಲದೆ, ಆಕೆಯೂ ಸಂಪಾದನೆಗೆ ದಾರಿ ಕಂಡುಕೊಳ್ಳಲಿ ಎಂಬ ಕಾರಣಕ್ಕೆ ಆಕೆಯ ಮೂರು ಸಿನಿಮಾಗಳಿಗೆ ನಾನೇ ಬಂಡವಾಳ ಹೂಡಿದೆ. ಇದರಿಂದ ಕೋಟ್ಯಂತರ ರುಪಾಯಿ ಹಣವನ್ನು ನಾನು ಕಳೆದುಕೊಂಡೆ ಎಂದಿದ್ದಾರೆ ನವಾಜ್.
ಮುಂದುವರೆದು, ಆಕೆ ನನ್ನ ಮಕ್ಕಳ ತಾಯಿಯಾಗಿರುವ ಕಾರಣಕ್ಕೆ ಆಕೆಯ ಅನುಕೂಲಕ್ಕೆ ಹಲವು ಸೌಲಭ್ಯಗಳನ್ನು ಕೊಟ್ಟಿದ್ದೇನೆ. ಐಶಾರಾಮಿ ಕಾರುಗಳನ್ನು ಕೊಟ್ಟಿದ್ದೆ. ಆದರೆ ಆಕೆ ಅದನ್ನೆಲ್ಲ ಮಾರಿ ತನ್ನ ಸ್ವಂತಕ್ಕೆ ಬಳಸಿಕೊಂಡಳು. ನನ್ನ ಮಕ್ಕಳಿಗಾಗಿ ಮುಂಬೈನಲ್ಲಿ ಒಂದು ಐಶಾರಾಮಿ ಸೀ ಫೇಸ್ ಮನೆಯನ್ನು ಖರೀದಿಸಿದ್ದೆ. ಆ ಮನೆಗೆ ಆಕೆಯನ್ನೂ ಭಾಗಿಯನ್ನಾಗಿ ಮಾಡಿದೆ. ಮಕ್ಕಳು ದುಬೈನಲ್ಲಿ ಕಲಿಯುತ್ತಿರುವ ಕಾರಣ ಅಲ್ಲಿ ಒಳ್ಳೆಯ ಬಾಡಿಗೆ ಅಪಾರ್ಟ್ಮೆಂಟ್ ಮಾಡಿಕೊಟ್ಟಿದ್ದೇನೆ. ಆಲಿಯಾ ಅಲ್ಲಿ ಇರಲು ಸಕಲ ವ್ಯವಸ್ಥೆ ಮಾಡಿದ್ದೇನೆ. ಆದರೆ ಆಕೆಗೆ ಹಣದ ಮೋಹ. ನನ್ನಿಂದ ಇನ್ನಷ್ಟು ಹಣ ಪಡೆಯಲು ಈಗ ಮತ್ತೆ ಡ್ರಾಮಾ ಆರಂಭಿಸಿದ್ದಾಳೆ. ನನ್ನ ಮೇಲೆ, ನನ್ನ ತಾಯಿಯ ಮೇಲೆ ಇಲ್ಲ ಸಲ್ಲದ ಕೇಸುಗಳನ್ನು ಹಾಕಿದ್ದಾಳೆ. ಆಲಿಯಾ ಈ ರೀತಿಯ ಡ್ರಾಮಾ ಮಾಡುತ್ತಿರುವುದು ಇದು ಮೊದಲೇನೂ ಅಲ್ಲ ಎಂದಿದ್ದಾರೆ ನವಾಜುದ್ದೀನ್.
ನನ್ನ ಮಕ್ಕಳು ರಜೆಗೆ ಭಾರತಕ್ಕೆ ಬಂದಾಗಲೆಲ್ಲ ಅವರ ಅಜ್ಜಿಯೊಟ್ಟಿಗೆ ಇರುತ್ತಿದ್ದರು. ಹೀಗಿರುವಾಗ ನನ್ನ ತಾಯಿ ಅವರನ್ನು ಮನೆಯಿಂದ ಹೊರಗೆ ಕಳಿಸಲು ಹೇಗೆ ಸಾಧ್ಯ. ಪ್ರಪಂಚದ ಯಾವುದೇ ತಂದೆ ಮಕ್ಕಳನ್ನು ಹೊರಗಟ್ಟಲು ಸಾಧ್ಯವೇ. ನಾನು ಇಷ್ಟು ದುಡಿಯುತ್ತಿರುವುದೇ ನನ್ನ ಇಬ್ಬರು ಮಕ್ಕಳಿಗಾಗಿ. ನನ್ನ ಮಕ್ಕಳಾದ ಸರಾ ಹಾಗೂ ಯಾಮಿಯನ್ನು ನಾನು ಬಹಳ ಪ್ರೀತಿಸುತ್ತೇನೆ. ಅವರ ಭವಿಷ್ಯವನ್ನು ಭದ್ರಪಡಿಸಿಯೇ ತೀರುತ್ತೇನೆ. ಅದಕ್ಕಾಗಿ ನಾನು ಯಾವ ಹಂತಕ್ಕೆ ಹೋಗಲು ಸಹ ತಯಾರಿದ್ದೇನೆ ಎಂದಿದ್ದಾರೆ ನವಾಜುದ್ದೀನ್ ಸಿದ್ದಿಕಿ.