ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ಜನರು ಶ್ಲಾಘಿಸುತ್ತಿದ್ದಾರೆ. ಆದರೆ ಇನ್ನೊಂದು ಕಡೆ ಅವರ ಮೇಲೆ ಹಲವು ಅರೋಪಗಳನ್ನೂ ಹೊರಿಸಲಾಗಿದೆ. ಈ ಡ್ರಗ್ಸ್ ಪ್ರಕರಣದ ತನಿಖೆ ಪಾರದರ್ಶಕವಾಗಿಲ್ಲ, ಇದು ರಾಜಕೀಯ ಪ್ರೇರಿತ ದಾಳಿ, ಇದರ ಹಿಂದೆ ಯಾರದ್ದೋ ಪಿತೂರಿ ಇದೆ ಎಂದೆಲ್ಲ ಹೇಳಲಾಗುತ್ತಿದೆ. ಈ ಟೀಕೆಗಳ ನಡುವೆ ಸಮೀರ್ ವಾಂಖೆಡೆ ಅವರ ಫ್ಯಾಮಿಲಿ ವಿಚಾರವನ್ನೂ ಎಳೆದು ತರಲಾಗುತ್ತಿದೆ. ಅದು ಅತಿರೇಕಕ್ಕೆ ಕೂಡ ಹೋಗಿದೆ. ಈಗ ಎನ್ಸಿಪಿ ಮುಖಂಡ ನವಾಬ್ ಮಲಿಕ್ ಅವರು ಸಮೀರ್ ವಾಂಖೆಡೆಯ ಸಹೋದರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಸಮೀರ್ ವಾಂಖೆಡೆಯ ಕಾರ್ಯವೈಖರಿಯನ್ನು ನವಾಬ್ ಮಲಿಕ್ ಮೊದಲಿನಿಂದಲೂ ಟೀಕಿಸುತ್ತಲೇ ಬಂದಿದ್ದಾರೆ. ಆದರೆ ಅವರು ಈಗ ಕೀಳುಮಟ್ಟದಲ್ಲಿ ದಾಳಿಗೆ ಇಳಿದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಮೀರ್ ವಾಂಖೆಡೆ ಸಹೋದರಿ ಯಾಸ್ಮಿನ್ ವಾಂಖೆಡೆ ಅವರು ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದು, ನವಾಬ್ ಮಲಿಕ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ತಮ್ಮ ಖಾಸಗಿ ಫೋಟೋಗಳನ್ನು ಲೀಕ್ ಮಾಡುವುದಾಗಿ ನವಾಬ್ ಮಲಿಕ್ ಬೆದರಿಕೆ ಹಾಕಿದ್ದಾರೆ ಎಂದು ಯಾಸ್ಮಿನ್ ವಾಂಖೆಡೆ ಅವರು ಈ ಪತ್ರದಲ್ಲಿ ತಿಳಿಸಿದ್ದಾರೆ.
‘ನನ್ನ ಮೇಲೆ ನವಾಬ್ ಮಲಿಕ್ ಅವರು ಆಧಾರವಿಲ್ಲದ ಅನೇಕ ಆರೋಪಗಳನ್ನು ಮಾಡಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ನನ್ನ ಸಹೋದರ ಸಮೀರ್ ವಾಂಖೆಡೆಗೆ ತೊಂದರೆ ನೀಡಲು ಈ ರೀತಿ ಮಾಡಲಾಗಿದೆ. ಆನ್ಲೈನ್ನಲ್ಲಿ ನನ್ನ ಮೇಲೆ ಬೇಹುಗಾರಿಕೆ ನಡೆಸಲಾಗಿದೆ. ನನ್ನ ಖಾಸಗಿ ಫೋಟೋಗಳನ್ನು ಮಾಧ್ಯಮಗಳಲ್ಲಿ ಲೀಕ್ ಮಾಡಿಸುವುದಾಗಿ ನವಾಬ್ ಮಲಿಕ್ ಬೆದರಿಕೆ ಹಾಕಿದ್ದಾರೆ. ಇವರ ವಿರುದ್ಧ ದಯವಿಟ್ಟು ಕ್ರಮ ಕೈಗೊಳ್ಳಿ’ ಎಂದು ಮಹಿಳಾ ಆಯೋಗಕ್ಕೆ ಯಾಸ್ಮಿನ್ ಪತ್ರ ಬರೆದಿದ್ದಾರೆ.
ಸಮೀರ್ ವಾಂಖೆಡೆ ಮತ್ತು ಅವರ ಕುಟುಂಬದವರ ಮೇಲೆ ಈ ರೀತಿ ವೈಯಕ್ತಿಕವಾಗಿ ದಾಳಿ ಮಾಡಲಾಗುತ್ತಿದೆ. ಅದನ್ನು ಅವರು ಖಂಡಿಸಿದ್ದಾರೆ.
ಇದನ್ನೂ ಓದಿ:
‘ಖಾಲಿ ಹಾಳೆಗೆ ಸಮೀರ್ ವಾಂಖೆಡೆ ಸಹಿ ಮಾಡಿಸಿಕೊಂಡ್ರು’: ಆರ್ಯನ್ ಬಂಧಿಸಿದ ಅಧಿಕಾರಿ ಮೇಲೆ ಗಂಭೀರ ಆರೋಪ
ಆರ್ಯನ್ ಖಾನ್ ವಿರುದ್ಧದ ತನಿಖೆಗೆ ತೊಂದರೆ ಕೊಡುವವರಿಗೆ ಪಾಠ ಕಲಿಸೋಕೆ ಮುಂದಾದ ಸಮೀರ್ ವಾಂಖೆಡೆ