ಸದಾ ವಿವಾದಗಳಿಂದಲೇ ಸದ್ದು ಮಾಡುತ್ತಾರೆ ನಟಿ ಕಂಗನಾ ರಣಾವತ್. ಕೆಲವೊಮ್ಮೆ ಬೇಕಂತಲೇ ಅವರು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಇನ್ನೂ ಕೆಲವೊಮ್ಮೆ ವಿವಾದಗಳು ಅವರನ್ನು ಹುಡುಕಿಕೊಂಡು ಬರುತ್ತವೆ. ಒಟ್ಟಿನಲ್ಲಿ ಅವರಿಗೂ ಕಾಂಟ್ರವರ್ಸಿಗೂ ಎಲ್ಲಿಲ್ಲದ ನಂಟು. ಕಂಡವರ ತಪ್ಪನ್ನು ಎತ್ತಿ ಹೇಳುವಲ್ಲಿ ಕಂಗನಾ (Kangana Ranaut) ಸದಾ ಮುಂದಿರುತ್ತಾರೆ. ತಮಗೆ ಸಂಬಂಧ ಇಲ್ಲದಿರುವ ವಿಷಯದಲ್ಲೂ ತಲೆ ಹಾಕಿ ಕಿರಿಕ್ (Kangana Ranaut Controversy) ಮಾಡಿಕೊಳ್ಳುತ್ತಾರೆ. ಆದರೆ ಈಗ ಅವರೇ ಒಂದು ತಪ್ಪು ಮಾಡಿ ಪೇಚಿಗೆ ಸಿಲುಕಿದ್ದಾರೆ. ಕೊವಿಡ್ (Coronavirus) ಹರಡುತ್ತಿರುವ ಈ ಸಂದರ್ಭದಲ್ಲಿ ಕಂಗನಾ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ.
ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ ರೂಪಾಂತರಿಯ ಕಾಟ ಅತಿಯಾಗುತ್ತಿದೆ. ಇಂಥ ವೈರಸ್ ಹರಡದಂತೆ ತಡೆಯಲು ಅನೇಕ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಚಾಲ್ತಿಯಲ್ಲಿದೆ. ಇಂಥ ಸಂದರ್ಭದಲ್ಲಿ ಎಷ್ಟು ಹುಷಾರಾಗಿದ್ದರೂ ಸಾಲದು. ಆದರೆ ಕಂಗನಾ ಮಾತ್ರ ಇದರ ಪರಿವೇ ಇಲ್ಲದಂತೆ ವರ್ತಿಸಿದ್ದಾರೆ.
ಇತ್ತೀಚೆಗೆ ಕಂಗನಾ ಅವರು ಒಂದು ರೆಸ್ಟೋರೆಂಟ್ಗೆ ತೆರಳಿದ್ದಾರೆ. ಅಲ್ಲಿ ಹಲವು ಕೇಕ್ ಪೀಸ್ಗಳನ್ನು ಇರಿಸಲಾಗಿತ್ತು. ಆ ಪೈಕಿ ಒಂದು ಕೇಕ್ ಪೀಸ್ ಎತ್ತಿಕೊಂಡ ಅವರು ಬಾಯಿಯ ಹತ್ತಿರಕ್ಕೆ ತಂದು ತಿನ್ನುವಂತೆ ನಟಿಸಿದ್ದಾರೆ. ನಂತರ ಅದೇ ಕೇಕ್ ಅನ್ನು ವಾಪಸ್ ಇಟ್ಟಿದ್ದಾರೆ. ಅವರು ಇಷ್ಟೆಲ್ಲ ಮಾಡಿರುವುದು ಪಾಪರಾಜಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವಿಡಿಯೋ ಕಂಡು ಜನರು ಕೆಂಡಾಮಂಡಲ ಆಗಿದ್ದಾರೆ. ಕೇಕ್ ಅನ್ನು ಬಾಯಿಯ ಹತ್ತಿರಕ್ಕೆ ತಂದು, ತಿನ್ನುವಂತೆ ನಟಿಸಿದ ಬಳಿಕ ವಾಪಸ್ ಇಟ್ಟಿರುವುದರಿಂದ ವೈರಸ್ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಂಗನಾ ಈ ರೀತಿ ಮಾಡಿದ್ದು ತಪ್ಪು ಎಂದು ನೆಟ್ಟಿಗರು ಖಾರವಾಗಿ ಕಮೆಂಟ್ ಮಾಡುತ್ತಿದ್ದಾರೆ. ‘ಮೊದಲನೆಯದಾಗಿ ಅವರು ಆ ಕೇಕ್ ಅನ್ನು ಮುಟ್ಟಿದರು. ನಂತರ ಬಾಯಿಯ ಬಳಿ ತೆಗೆದುಕೊಂಡು ಹೋಗಿ ಉಸಿರು ತಾಗಿಸಿದರು. ನಂತರ ಅದನನ್ನು ವಾಪಸ್ ಇಟ್ಟರು. ಇದು ಸರಿಯಾದ ವರ್ತನೆ ಅಲ್ಲ. ಕೊವಿಡ್ ಹರಡುತ್ತಿರುವ ಈ ಸಂದರ್ಭದಲ್ಲಿ ಹೀಗೆ ಮಾಡಿದ್ದು ಸರಿಯಲ್ಲ. ಖಂಡಿತವಾಗಿ ಅವರು ವೈರಸ್ ಹರಡುತ್ತಿದ್ದಾರೆ’ ಎಂದು ಅನೇಕರು ಕಟು ಟೀಕೆ ಮಾಡಿದ್ದಾರೆ. ಸದ್ಯ ಈ ಕುರಿತು ಕಂಗನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬುದನ್ನು ತಿಳಿಯಲು ನೆಟ್ಟಿಗರು ಕಾದಿದ್ದಾರೆ.
ಇದನ್ನೂ ಓದಿ:
‘2022ರಲ್ಲಿ ಕಡಿಮೆ ಎಫ್ಐರ್ ಬೀಳಲಿ, ಹೆಚ್ಚು ಪ್ರೇಮ ಪತ್ರಗಳು ಬರಲಿ’; ದೇವರಲ್ಲಿ ಕಂಗನಾ ವಿಶೇಷ ಪ್ರಾರ್ಥನೆ
ಪೊಲೀಸ್ ಠಾಣೆಯಲ್ಲಿ ಕಂಗನಾ ಬಿಂಕ ನೋಡಿ ಅಚ್ಚರಿ ಪಟ್ಟ ಪೊಲೀಸರು; ಹೈಲೈಟ್ ಆಯ್ತು ಮುತ್ತಿನ ನೆಕ್ಲೆಸ್