ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಒಂದಕ್ಕಿಂತ ಒಂದು ಉತ್ತಮವಾದ ಅವಕಾಶಗಳು ಸಿಗುತ್ತಿವೆ. ಅವರು ನಟಿಸಿದ ಎಲ್ಲ ಸಿನಿಮಾಗಳು ಗೆಲ್ಲುತ್ತಿವೆ. ಇದರಿಂದ ಅವರ ಖ್ಯಾತಿ ಹೆಚ್ಚಾಗಿದೆ. ಇತ್ತೀಚೆಗೆ ತೆರೆಕಂಡ ‘ಅನಿಮಲ್’ (Animal) ಸಿನಿಮಾದಲ್ಲಿ ರಣಬೀರ್ ಕಪೂರ್ ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಆಗಿದೆ. ಅಚ್ಚರಿ ಏನೆಂದರೆ, ‘ಅನಿಮಲ್’ ಸಿನಿಮಾಗೆ ರಶ್ಮಿಕಾ ಮಂದಣ್ಣ ಅವರು ಮೊದಲ ಆಯ್ಕೆ ಆಗಿರಲಿಲ್ಲ. ಅವರಿಗಿಂತಲೂ ಮುನ್ನ ಪರಿಣೀತಿ ಚೋಪ್ರಾ (Parineeti Chopra) ಆಯ್ಕೆ ಆಗಿದ್ದರು.
ಸಂದೀಪ್ ರೆಡ್ಡಿ ವಂಗಾ ಅವರು ‘ಅನಿಮಲ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಕೆಲವರು ಕಟುವಾಗಿ ಟೀಕಿಸಿದ್ದಾರೆ. ಮಹಿಳೆಯರನ್ನು ಅವಹೇಳನ ಮಾಡುವಂತಹ ದೃಶ್ಯಗಳು ಮತ್ತು ಸಂಭಾಷಣೆಗಳು ಈ ಚಿತ್ರದಲ್ಲಿ ಇವೆ ಎಂಬುದು ಅನೇಕರ ವಾದ. ಅದೇನೇ ಇದ್ದರೂ, ಸಿನಿಮಾದ ಗಳಿಕೆಗೆ ತೊಂದರೆ ಆಗಿಲ್ಲ. ಈ ಸಿನಿಮಾದ ಪಾತ್ರವರ್ಗದ ಆಯ್ಕೆ ಬಗ್ಗೆ ಸಂದೀಪ್ ರೆಡ್ಡಿ ವಂಗಾ ಅವರು ಈಗ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ‘ಅನಿಮಲ್’ ಚಿತ್ರದ ಬೋಲ್ಡ್ ದೃಶ್ಯಗಳಿಗೆ ಕತ್ತರಿ; 27 ನಿಮಿಷ ಕಟ್ ಮಾಡಿದ ಸೆನ್ಸಾರ್ ಮಂಡಳಿ
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂದೀಪ್ ರೆಡ್ಡಿ ವಂಗಾ ಅವರು ಪರಿಣೀತಿ ಚೋಪ್ರಾ ಬಗ್ಗೆ ಮಾತನಾಡಿದ್ದಾರೆ. ‘ಅನಿಮಲ್ ಸಿನಿಮಾದ ಶೂಟಿಂಗ್ ಶುರು ಆಗುವುದಕ್ಕಿಂತ ಒಂದೂವರೆ ವರ್ಷ ಮೊದಲೇ ಪರಿಣೀತಿ ಚೋಪ್ರಾ ಈ ಚಿತ್ರಕ್ಕೆ ಸಹಿ ಮಾಡಿದ್ದರು. ಆದರೆ ತಪ್ಪು ನನ್ನದೇ. ಅದಕ್ಕಾಗಿ ಅವರಿಗೆ ನಾನು ಕ್ಷಮೆ ಕೇಳಿದ್ದೇನೆ. ಅವರಲ್ಲಿ ನನಗೆ ಗೀತಾಂಜಲಿ ಪಾತ್ರ ಕಾಣಿಸಲಿಲ್ಲ. ಕೆಲವರಿಗೆ ಕೆಲವು ಪಾತ್ರಗಳು ಸೂಕ್ತ ಆಗುವುದಿಲ್ಲ’ ಎಂದು ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಡೀಪ್ಫೇಕ್ ವಿಡಿಯೋ ಕೇಸ್: ನಾಲ್ವರು ಶಂಕಿತರ ವಿಚಾರಣೆ
‘ನನಗೆ ಆಡಿಷನ್ನಲ್ಲಿ ನಂಬಿಕೆ ಇಲ್ಲ. ಆ ಕ್ಷಣಕ್ಕೆ ಅನಿಸಿದ್ದನ್ನು ಮಾಡುತ್ತೇನೆ. ಮೊದಲಿಂದಲೂ ನನಗೆ ಪರಿಣೀತ ಚೋಪ್ರಾ ನಟನೆ ಇಷ್ಟ ಆಗಿತ್ತು. ಅವರ ಜೊತೆ ಸಿನಿಮಾ ಮಾಡಲು ನಾನು ಬಯಸಿದ್ದೆ. ‘ಕಬೀರ್ ಸಿಂಗ್’ ಸಿನಿಮಾಗೂ ಅವರೇ ನಾಯಕಿ ಆಗಬೇಕಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಈ ಬಾರಿ ನಾನು ಅವರಿಗೆ ಕ್ಷಮೆ ಕೇಳಿದೆ. ಸಿನಿಮಾಗಿಂತಲೂ ದೊಡ್ಡದು ಯಾವುದೂ ಇಲ್ಲ. ಹಾಗಾಗಿ ನಾನು ‘ಅನಿಮಲ್’ ಚಿತ್ರಕ್ಕೆ ಬೇರೆ ನಟಿಯನ್ನುಆಯ್ಕೆ ಮಾಡಿಕೊಳ್ಳುತ್ತೇನೆ ಎಂದೆ. ಅದರಿಂದ ಅವರಿಗೆ ಬೇಸರ ಆಯಿತು. ಆದರೂ ನನ್ನನ್ನು ಅರ್ಥ ಮಾಡಿಕೊಂಡರು’ ಎಂದಿದ್ದಾರೆ ಸಂದೀಪ್ ರೆಡ್ಡಿ ವಂಗಾ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.