ರಶ್ಮಿಕಾ ಮಂದಣ್ಣಗೆ ಬಾಯ್​ಫ್ರೆಂಡ್ ಆದ ಕನ್ನಡಿಗ ಶೆಟ್ಟಿ

Rashmika Mandanna: ಟಾಲಿವುಡ್​, ಬಾಲಿವುಡ್​ಗಳಲ್ಲಿ ಮಿಂಚುತ್ತಿರುವ ಬೆಡಗಿ ರಶ್ಮಿಕಾ ಮಂದಣ್ಣರ ಹೊಸ ಬಾಯ್​ಫ್ರೆಂಡ್ ಕನ್ನಡಿಗ ಶೆಟ್ಟಿ!

ರಶ್ಮಿಕಾ ಮಂದಣ್ಣಗೆ ಬಾಯ್​ಫ್ರೆಂಡ್ ಆದ ಕನ್ನಡಿಗ ಶೆಟ್ಟಿ
ರಶ್ಮಿಕಾ ಮಂದಣ್ಣ
Follow us
ಮಂಜುನಾಥ ಸಿ.
|

Updated on: Dec 22, 2023 | 9:33 PM

ರಶ್ಮಿಕಾ ಮಂದಣ್ಣ (Rashmika Mandanna) ಟಾಲಿವುಡ್, ಬಾಲಿವುಡ್​ಗಳಲ್ಲಿ ಸಖತ್ ಮಿಂಚುತ್ತಿದ್ದಾರೆ. ‘ಕಿರಿಕ್ ಪಾರ್ಟಿ’ಯಿಂದ ಶುರುವಾದ ರಶ್ಮಿಕಾರ ಜರ್ನಿ, ಟಾಲಿವುಡ್ ದಾಟಿ ಈಗ ಬಾಲಿವುಡ್ ಅನ್ನು ತಲುಪಿದೆ. ಇತ್ತೀಚೆಗಷ್ಟೆ ಬಿಡುಗಡೆ ಆದ ‘ಅನಿಮಲ್’ ಸಿನಿಮಾದಲ್ಲಿ ನಟಿಸಿದ್ದ ರಶ್ಮಿಕಾ ದೊಡ್ಡ ಹಿಟ್ ಅನ್ನೇ ಪಡೆದುಕೊಂಡಿದ್ದಾರೆ. ಇನ್ನೇನು ಬಾಲಿವುಡ್​ನಲ್ಲೇ ಸೆಟಲ್ ಆಗಿಬಿಡುತ್ತಾರೆ ಅಂದುಕೊಂಡಿದ್ದ ಹೊತ್ತಿಗೆ ಇತ್ತೀಚೆಗಷ್ಟೆ ತೆಲುಗಿನ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಸಿನಿಮಾದಲ್ಲಿ ರಶ್ಮಿಕಾಗೆ ಬಾಯ್​ಫ್ರೆಂಡ್ ಆಗಿರುವುದು ಕರ್ನಾಟಕದ ಶೆಟ್ಟಿ!

ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿಯ ಪ್ರೇಮಕತೆ ಶುರುವಾದಲ್ಲೇ ಮುಗುಚಿ ಬಿದ್ದಿದ್ದು, ಗೊತ್ತಿರುವುದೇ ಆದರೆ ಈ ಶೆಟ್ಟಿ ನಂಟು ರಶ್ಮಿಕಾರನ್ನು ಬಿಡುವಂತೆ ಕಾಣುತ್ತಿಲ್ಲ. ರಶ್ಮಿಕಾ ಇದೀಗ ‘ಗರ್ಲ್​ಫ್ರೆಂಡ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕೆ ನಾಯಕ ಕನ್ನಡಿಗ ದೀಕ್ಷಿತ್ ಶೆಟ್ಟಿ. ಕನ್ನಡದ ‘ದಿಯಾ’ ಸಿನಿಮಾ ಮೂಲಕ ಜನಪ್ರಿಯಗೊಂಡ ಈ ನಟ ತಮ್ಮ ಪ್ರತಿಭೆ ಮೂಲಕ ಇತ್ತೀಚೆಗೆ ಬಹುಭಾಷಾ ನಟರಾಗಿ ಬೆಳೆಯುತ್ತಿದ್ದಾರೆ. ಜೊತೆಗೆ ಒಂದರ ಹಿಂದೊಂದು ಉತ್ತಮ ಕತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ತಮ್ಮದೇ ಛಾಪು ಮೂಡಿಸುವ ಪ್ರಯತ್ನದಲ್ಲಿದ್ದಾರೆ.

ಇದೀಗ ರಶ್ಮಿಕಾ ಮಂದಣ್ಣರ ‘ಗರ್ಲ್​​ಫ್ರೆಂಡ್’ ಸಿನಿಮಾದಲ್ಲಿ ರಶ್ಮಿಕಾರ ಬಾಯ್​ಫ್ರೆಂಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ದೀಕ್ಷಿತ್. ‘ಬಾಯ್​ಫ್ರೆಂಡ್’ ಅನ್ನು ಪರಿಚಯಿಸುವ ಟೀಸರ್ ಒಂದನ್ನು ಚಿತ್ರತಂಡ ಇಂದು (ಡಿಸೆಂಬರ್ 22) ಬಿಡುಗಡೆ ಮಾಡಿದೆ. ‘‘ನನ್ನ ಬಾಯ್​ಫ್ರೆಂಡ್ ಹೆಸರು ವಿಕ್ರಮ್. ಎಂಎಸ್​ಸಿ ಕಂಪ್ಯೂಟರ್ ಸೈನ್ಸ್, ವಿಕ್ಕಿ ನಮ್ಮ ಕಾಲೇಜು ತಂಡದ ವಿರಾಟ್ ಕೊಹ್ಲಿ, ವಿಕ್ಕಿ ಸ್ಮೈಲ್ ಮಾಡಿದರೆ ಸಾಕು, ನಮ್ಮ ಕಾಲೇಜು ಹುಡುಗಿಯರೆಲ್ಲ ಅಲ್ಲೇ ಫ್ಲಾಟ್ ಆಗಿ ಬಿಡ್ತಾರೆ’’ ಎಂಬ ರಶ್ಮಿಕಾರ ಹಿನ್ನೆಲೆ ದ್ವನಿಯೊಟ್ಟಿಗೆ ದೀಕ್ಷಿತ್ ಶೆಟ್ಟಿ ಕಾಣಿಸಿಕೊಳ್ಳುತ್ತಾರೆ. ಬಾರ್​ನಲ್ಲಿ ದೀಕ್ಷಿತ್ ಶೆಟ್ಟಿ ಯಾರೊಟ್ಟಿಗೋ ಜಗಳ ಮಾಡುತ್ತಿರುವ ಟೀಸರ್​ನ ಕೊನೆಯಲ್ಲಿದೆ. ಸ್ಟೈಲಿಷ್ ಆದರೆ ಕೋಪದ ವ್ಯಕ್ತಿತ್ವದ ಪಾತ್ರದಲ್ಲಿ ದೀಕ್ಷಿತ್ ನಟಿಸಿದಂತಿದೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಡೀಪ್​ಫೇಕ್​ ವಿಡಿಯೋ ಕೇಸ್​: ನಾಲ್ವರು ಶಂಕಿತರ ವಿಚಾರಣೆ

ಈ ಸಿನಿಮಾವನ್ನು ತೆಲುಗಿನ ಜನಪ್ರಿಯ ನಿರ್ಮಾಪಕ ಅಲ್ಲು ಅರವಿಂದ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ನಿರ್ದೇಶನ ಮಾಡುತ್ತಿರುವುದು ರಾಹುಲ್ ರವೀಂದ್ರನ್. ಮಲಯಾಳಂನ ಜನಪ್ರಿಯ ಸಂಗೀತ ನಿರ್ದೇಶಕ ಹಷೀಮ್ ಅಬ್ದುಲ್ ವಹಾಬ್ ಸಂಗೀತ ನೀಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಮುಂದಿನ ವರ್ಷ ಮಾರ್ಚ್ ವೇಳೆಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.

ದೀಕ್ಷಿತ್ ಶೆಟ್ಟಿ ಇತ್ತೀಚೆಗಷ್ಟೆ ತೆಲುಗಿನ ‘ದಸರ’ ಸಿನಿಮಾದಲ್ಲಿ ನಾನಿ ಹಾಗೂ ಕೀರ್ತಿ ಸುರೇಶ್ ಜೊತೆ ನಟಿಸಿದ್ದರು. ಕನ್ನಡದಲ್ಲಿ ‘ಬ್ಲಿಂಕ್’, ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’, ‘ಕೆಟಿಎಂ’, ‘ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರಸ್ತು’ ಹಾಗೂ ‘ಸ್ಟ್ರಾಬೆರಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳು, ಮಲಯಾಳಂ ಸಿನಿಮಾಗಳನ್ನೂ ಸಹ ದೀಕ್ಷಿತ್ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ