‘ಫಾಸ್ಟ್ ಆಂಡ್ ಫ್ಯೂರಿಯಸ್’ ನಟನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ
Vin Diesel: ‘ಫಾಸ್ಟ್ ಆಂಡ್ ಫ್ಯೂರಿಯಸ್’, ‘ತ್ರಿಬಲ್ ಎಕ್ಸ್’ ಸಿನಿಮಾ ಸರಣಿಗಳ ನಾಯಕ, ವಿಶ್ವದ ಜನಪ್ರಿಯ ನಟರಲ್ಲಿ ಒಬ್ಬರಾಗಿರುವ ವಿನ್ ಡೀಸೆಲ್ ವಿರುದ್ಧ ಅವರ ಮಾಜಿ ಸಹಾಯಕಿ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ.
‘ಫಾಸ್ಟ್ ಆಂಡ್ ಫ್ಯೂರಿಯಸ್’ (Fast and furious) ಸಿನಿಮಾ ಸರಣಿ ಮೂಲಕ ವಿಶ್ವದೆಲ್ಲೆಡೆ ಜನಪ್ರಿಯರಾಗಿರುವ ನಟ ವಿನ್ ಡೀಸೆಲ್ (Vin Diesel) ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ವಿನ್ ಡೀಸೆಲ್ ರ ಮಾಜಿ ಸಹಾಯಕಿ ಅಸ್ಟ್ರಾ ಜಾನ್ಸನ್ ಆರೋಪ ಮಾಡಿದ್ದು, ನ್ಯಾಯ ಒದಗಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. 2010ರಲ್ಲಿ ನಟ ವಿನ್ ಡೀಸೆಲ್ ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಸಹಾಯಕಿ ಹೇಳಿದ್ದು, ವಿನ್ ಡೀಸೆಲ್ರ ಜೊತೆಗೆ ಅವರ ಸಹೋದರಿ ಹಾಗೂ ಅವರ ನಿರ್ಮಾಣ ಸಂಸ್ಥೆಯ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಕರಣವನ್ನು ವಿವರಿಸಿರುವ ಜಾನ್ಸನ್, 2010ರಲ್ಲಿ ಅಟ್ಲಾಂಟಾದ ಐಶಾರಾಮಿ ಹೋಟೆಲ್ ಒಂದರಲ್ಲಿ ವಿನ್ ಡೀಸೆಲ್ ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅಂದು ತಡರಾತ್ರಿ ವಿನ್ ಡೀಸೆಲ್, ನನ್ನನ್ನು ಬಲವಂತದಿಂದ ಮಂಚಕ್ಕೆ ತಳ್ಳಿ ಬಲಾತ್ಕಾರಕ್ಕೆ ಯತ್ನಿಸಿದರು. ನನ್ನ ಮೇಲಂಗಿಯನ್ನು ಕಿತ್ತು ಎದೆಯ ಭಾಗವನ್ನು ಬಲವಂತದಿಂದ ಮುಟ್ಟಿದರು. ನನ್ನ ಒಳ ಉಡುಪುಗಳನ್ನು ತೆಗೆಯುವ ಪ್ರಯತ್ನವನ್ನು ಮಾಡಿದರು. ಆಗ ನಾನು ಕಿರುಚುತ್ತಾ ಬಾತ್ರೂಂಗೆ ಓಡಿ ಹೋದೆ. ಅಲ್ಲಿಗೂ ಬಂದು ಬಲವಂತ ಮಾಡಿದರು. ತಮ್ಮ ಮರ್ಮಾಂಗವನ್ನು ಮುಟ್ಟುವಂತೆ ಬಲವಂತಪಡಿಸಿದರು ಎಂದಿದ್ದಾರೆ.
ಈ ಘಟನೆ ನಡೆದ ಕೆಲವೇ ಗಂಟೆಗಳ ಬಳಿಕ ನನ್ನನ್ನು ಉದ್ಯೋಗದಿಂದ ತೆಗೆದು ಹಾಕಲಾಯ್ತು. ವಿನ್ ಡೀಸೆಲ್ರ ನಿರ್ಮಾಣ ಸಂಸ್ಥೆ ಒನ್ ರೇಸ್ನ ಅಧ್ಯಕ್ಷೆ ಸಮಂತಾ ವಿನ್ಸೆಂಟ್ ನನ್ನನ್ನು ಉದ್ಯೋಗದಿಂದ ತೆಗೆದರು. ನನ್ನನ್ನು ಅನುಪಯುಕ್ತ ಎಂದು ಕಾರಣ ನೀಡಿ ಕೆಲಸದಿಂದ ತೆಗೆಯಲಾಯ್ತು, ಆದರೆ ನನಗೆ ಗೊತ್ತಿತ್ತು, ನನ್ನನ್ನು ‘ಬಳಸಿಕೊಂಡ’ ಬಳಿಕ ನನ್ನನ್ನು ಹೊರಗೆ ಹಾಕಲಾಕುತ್ತಿದೆ ಎಂದು. ಅಂದು ನನ್ನನ್ನು ಬಹಳ ಕೀಳಾಗಿ ಕಾಣಲಾಯ್ತು. ನನ್ನ ಬಗ್ಗೆಯೇ ನನಗೆ ಅಸಹ್ಯ ಬರುವಂತೆ ಮಾಡಲಾಯ್ತು. ವಿನ್ ಡೀಸೆಲ್ ನನ್ನನ್ನು ತನ್ನ ಲೈಂಗಿಕ ವಾಂಚೆ ತೀರಿಸಿಕೊಳ್ಳಲು ಬಳಸಿಕೊಂಡು ಬಳಿಕ ಬಿಸಾಡಿದ’’ ಎಂದಿದ್ದಾರೆ.
ಇದನ್ನೂ ಓದಿ:ಮತ್ತೆ ಹಾಲಿವುಡ್ ಬಾಗಿಲು ತಟ್ಟಲಿದ್ದಾರೆ ಆಲಿಯಾ ಭಟ್
ಕ್ಲೇರ್ ಕಟಲ್ ಹೆಸರಿನ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಮಾಜಿ ಸಹಾಯಕಿ ಅಸ್ಟ್ರಾ ಜಾನ್ಸನ್, ವಿನ್ ಡೀಸೆಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸುವ ಜೊತೆಗೆ ಅವರ ನಿರ್ಮಾಣ ಸಂಸ್ಥೆಯ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಪ್ರತಿಕೂಲ ಕೆಲಸದ ವಾತಾವರಣ, ನಿರ್ಲಕ್ಷ್ಯದ ಮೇಲ್ವಿಚಾರಣೆ ಮತ್ತು ನಿಯಮ ಬಾಹಿರವಾಗಿ ಕೆಲದಿಂದ ವಜಾ ಆರೋಪಗಳನ್ನು ಸಹ ಮಾಡಿದ್ದಾರೆ.
ವಿನ್ ಡೀಸೆಲ್, ವಿಶ್ವದ ಜನಪ್ರಿಯ ನಟರಲ್ಲಿ ಒಬ್ಬರು. ‘ಫಾಸ್ಟ್ ಆಂಡ್ ಫ್ಯೂರಿಯಸ್’ ಸಿನಿಮಾ ಸರಣಿಗಳ ನಾಯಕ. ಜೊತೆಗೆ ‘ತ್ರಿಬಲ್ ಎಕ್ಸ್’ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ದೀಪಿಕಾ ಪಡುಕೋಣೆಯ ಮೊದಲ ಹಾಲಿವುಡ್ ಸಿನಿಮಾಕ್ಕೆ ವಿನ್ ಡೀಸೆಲ್ ನಾಯಕರಾಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ