Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಬಾಕ್ಸ್​ ಆಫೀಸ್​ನಲ್ಲಿ 100 ಕೋಟಿ ಗಳಿಸಿದ ಹಾಲಿವುಡ್ ಸಿನಿಮಾ

Indian Box Office: ಹಾಲಿವುಡ್ ಸಿನಿಮಾ ಫಾಸ್ಟ್ ಆಂಡ್ ಫ್ಯೂರಿಯಸ್ 10 ಕೇವಲ 16 ದಿನದಲ್ಲಿ ಭಾರತದಲ್ಲಿ 100 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ. ಇದಕ್ಕೂ ಮುನ್ನ ಎಂಟು ಸಿನಿಮಾಗಳು ಭಾರತದಲ್ಲಿ ಇಷ್ಟು ದೊಡ್ಡ ಮೊತ್ತ ಕಲೆಕ್ಷನ್ ಮಾಡಿವೆ.

ಭಾರತದ ಬಾಕ್ಸ್​ ಆಫೀಸ್​ನಲ್ಲಿ 100 ಕೋಟಿ ಗಳಿಸಿದ ಹಾಲಿವುಡ್ ಸಿನಿಮಾ
ಫಾಸ್ಟ್ ಆಂಡ್ ಫ್ಯೂರಿಯಸ್ ಎಕ್ಸ್
Follow us
ಮಂಜುನಾಥ ಸಿ.
|

Updated on: Jun 02, 2023 | 9:38 PM

ವಿಶ್ವದ ಅತಿದೊಡ್ಡ ಸಿನಿಮಾ ಮಾರುಕಟ್ಟೆಯಲ್ಲಿ (Movie Market) ಪ್ರಮುಖವಾಗಿರುವ ಭಾರತದ ಮೇಲೆ ವಿಶ್ವ ಚಿತ್ರರಂಗದ (World Movie) ಕಣ್ಣುಬಿದ್ದು ಬಹಳ ಸಮಯವಾಗಿದೆ. ಹಾಲಿವುಡ್ (Hollywood) ಸಿನಿಮಾಗಳು ಸಹ ಭಾರತದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ತಯಾರಾಗುತ್ತಿವೆ. ಅದಕ್ಕೆ ತಕ್ಕಂತೆ ವಿದೇಶಿ ಸಿನಿಮಾಗಳು ವಿಶೇಷವಾಗಿ ಹಾಲಿವುಡ್ ಸಿನಿಮಾಗಳು ಭಾರತದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿವೆ. ಈಗಾಗಲೇ ಕೆಲವು ಹಾಲಿವುಡ್ ಸಿನಿಮಾಗಳು ಭಾರತದಲ್ಲಿ ಬಾಕ್ಸ್ ಆಫೀಸ್ (Box Office) ಚಿಂದಿ ಉಡಾಯಿಸಿವೆ. ಇದೀಗ ಹೊಸ ಹಾಲಿವುಡ್ ಸಿನಿಮಾ ಭಾರತದಲ್ಲಿ ಕೆಲವೇ ದಿನಗಳಲ್ಲಿ ನೂರು ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ.

ವಿನ್ ಡೀಸೆಲ್ ಹಾಗೂ ಇತರರು ನಟಿಸಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ಫಾಸ್ಟ್ ಎಕ್ಸ್ ಅಥವಾ ಫಾಸ್ಟ್ ಆಂಡ್ ಫ್ಯೂರಿಯಸ್ 10ನೇ ಸಿನಿಮಾ ಬಿಡುಗಡೆ ಆಗಿತ್ತು. ಭಾರತದಲ್ಲಿ ಈ ಸಿನಿಮಾ ಮೇ 19ರಲ್ಲಿ ತೆರೆ ಕಂಡಿತ್ತು. ಸಿನಿಮಾ ತೆರೆಕಂಡ ಎರಡು ವಾರಗಳಲ್ಲಿ 100 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ. ಕೋವಿಡ್ ಬಳಿಕ ಭಾರತದಲ್ಲಿ ನೂರು ಕೋಟಿಗೂ ಹೆಚ್ಚು ಹಣ ಗಳಿಸಿದ ಐದನೇ ಸಿನಿಮಾ ಹಾಗೂ ಒಟ್ಟಾರೆಯಾಗಿ ಭಾರತದಲ್ಲಿ ನೂರು ಕೋಟಿ ಹಣ ಗಳಿಸಿದ ಒಂಬತ್ತನೇ ಹಾಲಿವುಡ್ ಸಿನಿಮಾ ಎಂಬ ಖ್ಯಾತಿಗೆ ಫಾಸ್ಟ್ ಎಕ್ಸ್ ಪಾತ್ರವಾಗಿದೆ.

ಫಾಸ್ಟ್ ಆಂಡ್ ಫ್ಯೂರಿಯಸ್ ಸಿನಿಮಾ ಸರಣಿಗೆ ವಿಶ್ವದಾದ್ಯಂತ ದೊಡ್ಡ ಅಭಿಮಾನಿ ವರ್ಗವಿದೆ. ಅಂತೆಯೇ ಭಾರತದಲ್ಲಿ ಸಹ ದೊಡ್ಡ ಸಂಖ್ಯೆಯ ಅಭಿಮಾನಿಗಳು ಈ ಸಿನಿಮಾ ಸರಣಿಗೆ ಇದ್ದಾರೆ. ಹಾಗಾಗಿ ಈ ಸಿನಿಮಾದ ಬಿಡುಗಡೆಗೆ ಮುನ್ನವೇ ದೊಡ್ಡ ಸಂಖ್ಯೆಯ ಮುಂಗಡ ಬುಕಿಂಗ್ ಆಗಿದ್ದವು. ವಿಶೇಷವಾಗಿ ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್, ಚೆನ್ನೈಗಳಂತಹಾ ಮೆಟ್ರೊ ಸಿಟಿಗಳ ಮಲ್ಟಿಪ್ಲೆಕ್ಸ್​ಗಳಲ್ಲಿ ಈ ಸಿನಿಮಾಕ್ಕೆ ಪ್ರೇಕ್ಷಕರ ಭರಪೂರ ಬೆಂಬಲ ವ್ಯಕ್ತವಾಗಿತ್ತು. ಇದೇ ವರ್ಷ ಜಾನ್ ವಿಕ್ 4 ಹಾಗೂ ಗಾರ್ಡಿಯನ್​ ಆಫ್ ದಿ ಗ್ಯಾಲೆಕ್ಸಿ ಸಿನಿಮಾಗಳು ಭಾರತದಲ್ಲಿ ಬಿಡುಗಡೆ ಆಗಿದ್ದವು ಆದರೆ ಆ ಸಿನಿಮಾಗಳಿಗಿಂತಲೂ ದೊಡ್ಡ ಮೊತ್ತವನ್ನು ಫಾಸ್ಟ್ ಎಕ್ಸ್ ಸಿನಿಮಾ ಗಳಿಸಿದೆ.

ಇದನ್ನೂ ಓದಿ:ನೀತಾ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆಗೆ ಬಾಲಿವುಡ್, ಹಾಲಿವುಡ್ ತಾರಾದಂಡು, ವಿಶೇಷತೆಗಳೇನು?

ಭಾರತದಲ್ಲಿ ಬಿಡುಗಡೆ ಆದ ಮೊದಲ ವಾರಾಂತ್ಯದಲ್ಲಿಯೇ 79 ಕೋಟಿ ಹಣವನ್ನು ಫಾಸ್ಟ್ ಎಕ್ಸ್ ಬಾಚಿಕೊಂಡಿತ್ತು. ಅದಾದ ಬಳಿಕ ಗಳಿಕೆಯಲ್ಲಿ ಭಾರಿ ಇಳಿಕೆ ಕಂಡು ಬಂತಾದರೂ ಒಟ್ಟಾರೆ 16 ದಿನಕ್ಕೆ 100 ಕೋಟಿ ಗಡಿಯನ್ನು ದಾಟಿದೆ. ವಿಶ್ವದಾದ್ಯಂತ ಈ ಸಿನಿಮಾ 4300 ಕೋಟಿಗೂ ಹೆಚ್ಚು ಹಣ ಬಾಚಿಕೊಂಡಿದೆ. ಹಾಗಿದ್ದರೂ ಸಹ ಈ ಸಿನಿಮಾ ನಿರೀಕ್ಷೆಯ ಮಟ್ಟಿಗೆ ಪ್ರದರ್ಶನ ನೀಡಿಲ್ಲವೆಂದೇ ಹೇಳಲಾಗುತ್ತಿದೆ. ಈ ಸಿನಿಮಾಕ್ಕೆ 2800 ಕೋಟಿ ರು ಬಜೆಟ್ ಹೂಡಲಾಗಿತ್ತು ಅದೂ ಪ್ರಚಾರದ ಖರ್ಚನ್ನು ಹೊರತುಪಡಿಸಿ. ಅಲ್ಲಿಗೆ ಸಿನಿಮಾದ ಒಟ್ಟು ಬಂಡವಾಳದ ಕೆಲವು ಪ್ರತಿಷತವಷ್ಟೆ ಈ ವರೆಗೆ ತಿರುಗಿ ಬಂದಿದೆ. ಇಷ್ಟು ದೊಡ್ಡ ಫ್ರಾಂಚೈಸ್​ಗೆ ಇದು ಕಡಿಮೆ ಮೊತ್ತ ಎನ್ನಲಾಗುತ್ತಿದ್ದು, ಸಿನಿಮಾದ ಡಿಜಿಟಲ್, ಸ್ಯಾಟಲೈಟ್ ಇನ್ನಿತರೆ ಹಕ್ಕುಗಳ ಮಾರಾಟದಿಂದ ಬರುವ ಹಣ ಈ ಸಿನಿಮಾವನ್ನು ಲಾಭದಾಯಕ ಸಿನಿಮಾ ಅನ್ನಾಗಿ ಮಾಡಬಹುದು ಎನ್ನಲಾಗುತ್ತಿದೆ.

ಫಾಸ್ಟ್ ಆಂಡ್ ಫ್ಯೂರಿಯಸ್ 10ನೇ ಸಿನಿಮಾದಲ್ಲಿ ವಿನ್ ಡೀಸೆಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಈ ಹಿಂದಿನ ಫಾಸ್ಟ್ ಆಂಡ್ ಫ್ಯೂರಿಯಸ್ ಸಿನಿಮಾದಲ್ಲಿದ್ದ ಹಲವರು ಈ ಸಿನಿಮಾದಲ್ಲಿಯೂ ಮುಂದುವರೆದಿದ್ದಾರೆ. ಸಿನಿಮಾದ ವಿಲನ್ ಆಗಿ ಈ ಬಾರಿ ಆಕ್ವಾಮನ್ ನಟ ಜಾಸನ್ ಮೋಮಾ ಬಂದಿದ್ದಾರೆ. ಡಬ್ಲುಡಬ್ಲುಇ ಚಾಂಪಿಯನ್ ಜಾನ್ ಸೀನಾ ಸಹ ಸಿನಿಮಾದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ