ಖ್ಯಾತ ನಿರ್ದೇಶಕ, ನಿರ್ಮಾಪಕ ಮಹೇಶ್ ಭಟ್ ಮೇಲೆ ಇರುವ ಆರೋಪಗಳು ಒಂದೆರಡಲ್ಲ. ಬಾಲಿವುಡ್ (Bollywood) ಮೂವೀ ಮಾಫಿಯಾದಲ್ಲಿ ಅವರ ಕೈವಾಡ ಇದೆ ಎಂದು ಹಲವರು ದೂರುತ್ತಾರೆ. ನೆಪೋಟಿಸಂ ಪೋಷಿಸುತ್ತಾರೆ ಎಂಬ ಆರೋಪ ಕೂಡ ಮಹೇಶ್ ಭಟ್ ಮೇಲಿದೆ. ಇಮ್ರಾನ್ ಹಷ್ಮಿ (Emraan Hashmi) ಅವರಿಗೆ ಅವಕಾಶ ನೀಡಿದ್ದು ಕೂಡ ಮಹೇಶ್ ಭಟ್. ಅಚ್ಚರಿಯ ವಿಚಾರವೊಂದನ್ನು ಈಗ ಇಮ್ರಾನ್ ಹಷ್ಮಿ ಅವರು ತೆರೆದಿಟ್ಟಿದ್ದಾರೆ. ಮೊದಲ ಸಿನಿಮಾದಿಂದ ಕಿತ್ತು ಹಾಕುವುದಾಗಿ ಇಮ್ರಾನ್ ಹಷ್ಮಿಗೆ ಮಹೇಶ್ ಭಟ್ (Mahesh Bhatt) ಎಚ್ಚರಿಕೆ ನೀಡಿದ್ದರು. ಆ ಘಟನೆಯನ್ನು ಇಮ್ರಾನ್ ಹಷ್ಮಿ ಈಗ ನೆನಪಿಸಿಕೊಂಡಿದ್ದಾರೆ.
ಇಮ್ರಾನ್ ಹಷ್ಮಿ ಮತ್ತು ಮಹೇಶ್ ಭಟ್ ಅವರು ಹತ್ತಿರದ ಸಂಬಂಧಿಗಳು. ಆ ಕಾರಣಕ್ಕಾಗಿ ‘ಫುಟ್ಪಾತ್’ ಸಿನಿಮಾದಲ್ಲಿ ಇಮ್ರಾನ್ ಹಷ್ಮಿ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಸರಿಯಾಗಿ ನಟನೆ ಮಾಡದಿದ್ದರೆ ಖಂಡಿತಯಾಗಿಯೂ ಸಿನಿಮಾದಿಂದ ಕಿತ್ತು ಹಾಕುವುದಾಗಿ ಮಹೇಶ್ ಭಟ್ ವಾರ್ನಿಂಗ್ ನೀಡಿದ್ದರು. ಅದರ ಪರಿಣಾಮದಿಂದಲೇ ತಾವು ಚೆನ್ನಾಗಿ ನಟಿಸಲು ಸಾಧ್ಯವಾಯ್ತು ಎಂದು ಇಮ್ರಾನ್ ಹಷ್ಮಿ ಹೇಳಿದ್ದಾರೆ.
‘ಜನರು ನಿನ್ನನ್ನು ಇಷ್ಟಪಡಲಿಲ್ಲ ಎಂದರೆ, ನೀನು ಒಳ್ಳೆಯ ನಟ ಅಲ್ಲ ಎಂದರೆ ನಿನ್ನ ಮೇಲೆ ನಾವು ಹಣ ಹಾಕಲು ಸಾಧ್ಯವಿಲ್ಲ. ನಾವು ಇಲ್ಲಿ ಧರ್ಮ ಛತ್ರ ನಡೆಸುತ್ತಿಲ್ಲ’ ಎಂದು ಮಹೇಶ್ ಭಟ್ ಅವರು ಇಮ್ರಾನ್ ಹಷ್ಮಿಗೆ ಖಡಕ್ ಆಗಿ ಹೇಳಿದ್ದರು. ‘ನಾವು ಒಂದೇ ಕುಟುಂಬದವರು ಆಗಿರಬಹುದು. ಆದರೆ ಇದಕ್ಕಿಂತ ಜಾಸ್ತಿ ನಾವು ಏನೂ ಮಾಡೋಕೆ ಆಗಲಿಲ್ಲ. ಯಾಕೆಂದರೆ ಇದು ಬಿಸ್ನೆಸ್’ ಎಂದು ಅವರು ಹೇಳಿದ್ದನ್ನು ಇಮ್ರಾನ್ ಹಷ್ಮಿ ಈಗ ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ: ಸ್ಟಾರ್ ನಟಿಯರಿಗೆ ಕಿಸ್ ಮಾಡಿ ತೊಂದರೆಗೆ ಸಿಲುಕಿದ್ದ ಇಮ್ರಾನ್ ಹಷ್ಮಿ! ತಪ್ಪು ಒಪ್ಪಿಕೊಂಡ ನಟ
‘ನೀನು ಮೊದಲ ಶಾಟ್ನಲ್ಲೇ ಚೆನ್ನಾಗಿ ಮಾಡದಿದ್ದರೆ ಅಥವಾ ಮುಂದಿನ ದೃಶ್ಯಗಳಲ್ಲಿ ಸರಿಯಾಗಿ ನಟಿಸದಿದ್ದರೆ ನಿನ್ನನ್ನು ಸಿನಿಮಾದಿಂದ ಕಿತ್ತು ಹಾಕುತ್ತೇವೆ’ ಎಂದು ಮಹೇಶ್ ಭಟ್ ಅವರು ಎಚ್ಚರಿಕೆ ನೀಡಿದ್ದರು. ‘ಫುಟ್ಪಾತ್’ ಸಿನಿಮಾ 2003ರಲ್ಲಿ ತೆರೆಕಂಡಿತು. ಮರುವರ್ಷ ಬಂದ ‘ಮರ್ಡರ್’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಸಿನಿಮಾದಿಂದ ಇಮ್ರಾನ್ ಹಷ್ಮಿ ಅವರು ಮನೆಮಾತಾದರು. ತಮ್ಮದೇ ರೀತಿಯಲ್ಲಿ ಅವರು ಗುರುತಿಸಿಕೊಂಡರು. ಬೋಲ್ಡ್ ಪಾತ್ರಗಳನ್ನು ಮಾಡುವ ಮೂಲಕ ಇಮ್ರಾನ್ ಹಷ್ಮಿ ಅವರು ಭಾರಿ ಪ್ರಸಿದ್ಧಿ ಪಡೆದರು. ಬಾಲಿವುಡ್ನಲ್ಲಿ ಅವರು ಸ್ಟಾರ್ ಆಗಿ ಬೆಳೆದರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡರು. ಹೀರೋ ಮಾತ್ರವಲ್ಲದೇ ವಿಲನ್ ಪಾತ್ರಗಳನ್ನೂ ಇಮ್ರಾನ್ ಹಷ್ಮಿ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.