The Sabarmati Report: ‘ದಿ ಸಾಬರಮತಿ ರಿಪೋರ್ಟ್’: ಗೋಧ್ರಾ ಹತ್ಯಾಕಾಂಡ ಕುರಿತು ಸಿದ್ಧವಾಗಿದೆ ಸಿನಿಮಾ
ನೈಜ ಘಟನೆಯನ್ನು ಆಧರಿಸಿ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ವಿಕ್ರಾಂತ್ ಮಾಸ್ಸಿ ಅವರು ಪತ್ರಕರ್ತನ ಪಾತ್ರ ಮಾಡಿದ್ದಾರೆ. ಗೋಧ್ರಾ ಹತ್ಯಾಕಾಂಡದ ಕಥೆಯನ್ನು ಈ ಸಿನಿಮಾ ತೆರೆದಿಡಲಿದೆ. ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ರಂಜನ್ ಚಂಡೇಲ್ ನಿರ್ದೇಶನದ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಮೇ 3ರಂದು ರಿಲೀಸ್ ಆಗಲಿದೆ.

ಇತಿಹಾಸದ ಕಹಿ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ಟ್ರೆಂಡ್ ಜೋರಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ಬಳಿಕ ಅಂತಹ ಕಥೆಗಳ ಕಡೆಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. 22 ವರ್ಷಗಳ ಹಿಂದಿನ ಗೋಧ್ರಾ ರೈಲು ಹತ್ಯಾಕಾಂಡ ಆಧರಿಸಿ ಈಗ ಹೊಸ ಸಿನಿಮಾ ಸಿದ್ಧವಾಗಿದೆ. ‘ದಿ ಸಾಬರಮತಿ ರಿಪೋರ್ಟ್’ (The Sabarmati Report) ಎಂದು ಈ ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಬಾಲಿವುಡ್ನ ಖ್ಯಾತ ನಟ ವಿಕ್ರಾಂತ್ ಮಾಸ್ಸಿ (Vikrant Massey) ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅಲ್ಲದೇ, ರಾಶಿ ಖನ್ನಾ ಹಾಗೂ ರಿಧಿ ಡೋಗ್ರಾ ಕೂಡ ನಟಿಸಿದ್ದಾರೆ. ‘ದಿ ಸಾಬರಮತಿ ರಿಪೋರ್ಟ್’ ಚಿತ್ರದ ಟೀಸರ್ (The Sabarmati Report Teaser) ಬಿಡುಗಡೆ ಆಗಿದ್ದು ಹೊಸ ಸಂಚಲನ ಸೃಷ್ಟಿಸಿದೆ.
2002ರ ಫೆಬ್ರವರಿ 27ರಂದು ನಡೆದ ಗೋಧ್ರಾ ರೈಲು ದುರಂತದಲ್ಲಿ 59 ಜನರ ಸಜೀವ ದಹನ ಆಗಿತ್ತು. ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಈ ಸಿನಿಮಾ ಮಾಡಲಾಗಿದೆ ಎಂದು ಚಿತ್ರದ ಟೀಸರ್ನಲ್ಲಿ ತಿಳಿಸಲಾಗಿದೆ. ಗೋದ್ರಾ ಹತ್ಯಾಕಾಂಡದ ಕುರಿತು ಸುದ್ದಿ ವಾಚನ ಮಾಡುವ ಪತ್ರಕರ್ತನ ಪಾತ್ರದಲ್ಲಿ ವಿಕ್ರಾಂತ್ ಮಾಸ್ಸಿ ಅವರು ಕಾಣಿಸಿಕೊಂಡಿದ್ದಾರೆ. ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾದ ಟೀಸರ್ ವೈರಲ್ ಆಗಿದೆ.
‘ಬಾಲಾಜಿ ಮೋಷನ್ ಪಿಕ್ಚರ್ಸ್’ ಹಾಗೂ ‘ಎ ವಿಕಿರ್ ಫಿಲ್ಮ್ಸ್ ಪ್ರೊಡಕ್ಷನ್’ ಜಂಟಿಯಾಗಿ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾವನ್ನು ನಿರ್ಮಿಸಿವೆ. ರಂಜನ್ ಚಂಡೇಲ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಟೀಸರ್ನ ಜೊತೆ ಸಿನಿಮಾದ ರಿಲೀಸ್ ದಿನಾಂಕವನ್ನು ಘೋಷಿಸಲಾಗಿದೆ. ಮೇ 3ರಂದು ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಬಿಡುಗಡೆ ಆಗಲಿದೆ. ಸೂಕ್ಷ್ಮ ವಿಚಾರದ ಕುರಿತು ಈ ಸಿನಿಮಾ ನಿರ್ಮಾಣ ಆಗಿರುವುದರಿಂದ ರಿಲೀಸ್ ಸಮಯದಲ್ಲಿ ವಿವಾದ ಶುರುವಾಗುವ ಸಾಧ್ಯತೆ ಇದೆ.
‘ದಿ ಸಾಬರಮತಿ ರಿಪೋರ್ಟ್’ ಚಿತ್ರದ ಟೀಸರ್:
ನಟ ವಿಕ್ರಾಂತ್ ಮಾಸ್ಸಿ ಅವರಿಗೆ ಈಗ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಕಳೆದ ವರ್ಷ ಬಿಡುಗಡೆಯಾದ ‘12th ಫೇಲ್’ ಸಿನಿಮಾದ ಯಶಸ್ಸಿನಿಂದ ಅವರು ಸ್ಟಾರ್ ಆಗಿದ್ದಾರೆ. ಹಾಗಾಗಿ ಅವರ ಮುಂಬರುವ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈಗ ಅವರು ‘ದಿ ಸಾಬರಮತಿ ರಿಪೋರ್ಟ್’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾ ನೋಡಲು ವಿಕ್ರಾಂತ್ ಮಾಸ್ಸಿ ಅಭಿಮಾನಿಗಳು ಕಾದಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಗೋಧ್ರಾ ರೀತಿ ಘಟನೆ ಹೇಳಿಕೆ: ಬಿಕೆ ಹರಿಪ್ರಸಾದ್ ವಿಚಾರಣೆ ನಡೆಸಿದ ಸಿಸಿಬಿ
ಗೋಧ್ರಾ ಹತ್ಯಾಕಾಂಡದ ಬಗ್ಗೆ ಬೇರೆ ಬೇರೆ ಅಭಿಪ್ರಾಯ ಇದೆ. ಈ ಸಿನಿಮಾದ ಮೂಲಕ ಸತ್ಯ ಹೊರಬರಲಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈ ಸಿನಿಮಾ ಖಂಡಿತವಾಗಿಯೂ ಹಿಟ್ ಆಗಲಿದೆ ಎಂದು ನೆಟ್ಟಿಗರು ಭವಿಷ್ಯ ನುಡಿಯುತ್ತಿದ್ದಾರೆ. ‘12th ಫೇಲ್’ ಬಳಿಕ ವಿಕ್ರಾಂತ್ ಮಾಸ್ಸಿ ಅವರು ಮತ್ತೊಮ್ಮೆ ನೈಜ ಘಟನೆ ಆಧಾರಿತ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




