ಜಯಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸಿದ ಕೋರ್ಟ್; ಬಂಧಿಸಲು ಸೂಚನೆ  

ಜಯಪ್ರದಾ ವಿರುದ್ಧ ಹಲವು ಬಾರಿ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು. ಆದರೆ, ಪೊಲೀಸರಿಗೆ ಅವರನ್ನು ಕೋರ್ಟ್ ಎದುರು ಹಾಜರುಪಡಿಸಲು ಸಾಧ್ಯವಾಗಿಲ್ಲ. ಹಿರಿಯ ಅಧಿಕಾರಿಗಳ ಪ್ರಕಾರ ಜಯಪ್ರದಾ ಅವರ ಎಲ್ಲಾ ಮೊಬೈಲ್​ಗಳು ಸ್ವಿಚ್​ಆಫ್ ಆಗಿವೆಯಂತೆ. ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.

ಜಯಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸಿದ ಕೋರ್ಟ್; ಬಂಧಿಸಲು ಸೂಚನೆ  
ಜಯಪ್ರದಾ
Follow us
ರಾಜೇಶ್ ದುಗ್ಗುಮನೆ
|

Updated on: Feb 28, 2024 | 2:33 PM

ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ (Jaya Prada) ಸದ್ಯ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಯಪ್ರದಾ ಅವರು ತಲೆಮರೆಸಿಕೊಂಡಿದ್ದಾರೆ ಎಂದು ನ್ಯಾಯಾಲಯ ಘೋಷಿಸಿದೆ. ಜೊತೆಗೆ ಅವರನ್ನು ಅರೆಸ್ಟ್ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದೆ. 2019ರ ಲೋಕಸಭೆ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ರಾಮಪುರದಲ್ಲಿ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸಮನ್ಸ್ ನೀಡಿದ ಹೊರತಾಗಿಯೂ ಜಯಪ್ರದಾ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ, ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಜಯಪ್ರದಾ ಅವರಿಗೆ ನ್ಯಾಯಾಲಯದಿಂದ ಹಲವು ಬಾರಿ ಸಮನ್ಸ್ ಜಾರಿಯಾಗಿತ್ತು. ಆದರೆ, ಇದಕ್ಕೆ ಅವರು ಉತ್ತರಿಸಿಲ್ಲ. ಹೀಗಾಗಿ ಜಯಪ್ರದಾ ವಿರುದ್ಧ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದೆ. ಮಾರ್ಚ್ 6ರಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ರಾಮಪುರ ಪೊಲೀಸರಿಗೆ ಕೋರ್ಟ್ ನಿರ್ದೇಶಿಸಿದೆ.

ಮಂಗಳವಾರದ (ಫೆಬ್ರವರಿ 27) ವಿಚಾರಣೆಯಲ್ಲಿ ನ್ಯಾಯಾಲಯವು ನೇರವಾಗಿ ಜಯಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸಿತು. ಒಂದು ತಂಡವನ್ನು ರಚಿಸಿ ಜಯಪ್ರದಾ ಅವರನ್ನು ಮಾರ್ಚ್ 6ರಂದು ವಿಚಾರಣೆಗೆ ಹಾಜರುಪಡಿಸುವಂತೆ ನ್ಯಾಯಾಲಯವು ಸೂಚಿಸಿದೆ. ಈಗ ತಂಡವೊಂದು ಜಯಪ್ರದಾ ಅವರನ್ನು ಹುಡುಕಲು ಹೊರಟಿದೆ.

ಜಯಪ್ರದಾ ಅವರ ವಿರುದ್ಧ ಹಲವು ಬಾರಿ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು. ಆದರೆ, ಅವರನ್ನು ಕೋರ್ಟ್ ಎದುರು ಹಾಜರುಪಡಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಹಿರಿಯ ಅಧಿಕಾರಿಗಳ ಪ್ರಕಾರ ಜಯಪ್ರದಾ ಅವರ ಎಲ್ಲಾ ಮೊಬೈಲ್​ಗಳು ಸ್ವಿಚ್​ಆಫ್ ಆಗಿವೆಯಂತೆ. ಹೀಗಾಗಿ, ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.

ನಟಿ ಜಯಪ್ರದಾಗೆ ಈಗ 61 ವರ್ಷ ವಯಸ್ಸು. ಅವರು 1974ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಹಲವು ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇದರ ಜೊತೆಗೆ ಕನ್ನಡದ ‘ಸನಾದಿ ಅಪ್ಪಣ್ಣ’, ‘ಹುಲಿಯ ಹಾಲಿನ ಮೇವು’, ‘ಕವಿರತ್ನ ಕಾಳಿದಾಸ’, ‘ಏಕಲವ್ಯ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ಕನ್ನಡದ ಜೊತೆಗೆ ಹಿಂದಿ ಚಿತ್ರರಂಗದಲ್ಲೂ ಅವರು ಫೇಮಸ್ ಆಗಿದ್ದಾರೆ.

ಇದನ್ನೂ ಓದಿ: ಜಯಪ್ರದಾಗೆ ಹೆಚ್ಚಿದ ಸಂಕಷ್ಟ: ಜೈಲು ಶಿಕ್ಷೆ ರದ್ದು ಮಾಡಲು ಕೋರ್ಟ್ ನಕಾರ

ಇತ್ತೀಚಿನ ವರ್ಷಗಳಲ್ಲಿ ಜಯಪ್ರದಾ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅವರು ರಾಜಕೀಯದ ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. 1994ರಲ್ಲಿ ಟಿಡಿಪಿ ಪಕ್ಷವನ್ನು ಸೇರಿದರು. 2004ರಲ್ಲಿ ಈ ಪಕ್ಷ ತೊರೆದು ಸಮಾಜವಾದಿ ಪಾರ್ಟಿ ಸೇರಿದರು. ನಂತರ ಇದನ್ನು 2010ರಲ್ಲಿ ತೊರೆದರು. 2014ರಲ್ಲಿ ರಾಷ್ಟ್ರೀಯ ಲೋಕದಳ ಸೇರಿದರು. ಇದನ್ನು ಬಿಟ್ಟು 2019ರಲ್ಲಿ ಅವರು ಬಿಜೆಪಿ ಸೇರಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ