
ಖ್ಯಾತ ನಟ ಪಂಕಜ್ ತ್ರಿಪಾಠಿ (Pankaj Tripathi) ಅವರ ಮನೆಯಿಂದ ಒಂದು ದುಃಖದ ಸುದ್ದಿ ಹೊರ ಬಿದ್ದಿದೆ. ಪಂಕಜ್ ತ್ರಿಪಾಠಿ ಅವರ ತಾಯಿ ನಿಧನರಾಗಿದ್ದಾರೆ. ಪಂಕಜ್ ತಮ್ಮ ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನಟ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ದುಃಖದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅವರಿಗೆ ಹಾಗೂ ಅವರ ಕುಟುಂಬಕ್ಕೆ ಎಲ್ಲರೂ ಸಂತಾಪ ಸೂಚಿಸಿದ್ದಾರೆ.
‘ಪಂಕಜ್ ತ್ರಿಪಾಠಿ ಅವರ ಪ್ರೀತಿಯ ತಾಯಿ ಹೇಮವಂತಿ ದೇವಿ ಅವರು ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಬೆಲ್ಸಂದ್‌ನಲ್ಲಿರುವ ತಮ್ಮ ಪೂರ್ವಜರ ಮನೆಯಲ್ಲಿ ನಿಧನರಾದರು ಎಂದು ನಿಮಗೆ ತಿಳಿಸಲು ನಾವು ತುಂಬಾ ದುಃಖಿತರಾಗಿದ್ದೇವೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ತಮ್ಮ ಮನೆಯಲ್ಲಿ ತಮ್ಮ ಹಾಸಿಗೆಯ ಮೇಲೆ ಶಾಂತಿಯುತವಾಗಿ ಕೊನೆಯುಸಿರೆಳೆದರು. ಪಂಕಜ್ ತ್ರಿಪಾಠಿ ಅವರ ಕೊನೆಯ ಕ್ಷಣಗಳಲ್ಲಿ ತಮ್ಮ ತಾಯಿಯೊಂದಿಗೆ ಇದ್ದರು’ ಎಂದು ಬರೆಯಲಾಗಿದೆ.
‘ಶನಿವಾರ ಬೆಲ್ಸಾಂಡ್‌ನಲ್ಲಿ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಿತು. ತ್ರಿಪಾಠಿ ಕುಟುಂಬವು ಇದರಿಂದ ತೀವ್ರ ದುಃಖಿತವಾಗಿದ್ದು, ಹೇಮವಂತಿ ದೇವಿ ಅವರ ಆತ್ಮ ಶಾಂತಿಗಾಗಿ ಎಲ್ಲರೂ ಪ್ರಾರ್ಥಿಸಬೇಕೆಂದು ವಿನಮ್ರವಾಗಿ ವಿನಂತಿಸಿದೆ. ಈ ದುಃಖದ ಸಮಯದಲ್ಲಿ ಮಾಧ್ಯಮಗಳು ಮತ್ತು ಹಿತೈಷಿಗಳು ತಮ್ಮ ಖಾಸಗಿತನ ಗೌರವಿಸಬೇಕು’ ಎಂದು ಕುಟುಂಬವು ವಿನಂತಿಸಿದೆ.
ನಟ ಪಂಕಜ್ ತ್ರಿಪಾಠಿ ಬಿಹಾರದ ಗೋಪಾಲಗಂಜ್ ಮೂಲದವರು. ಅವರು ತಮ್ಮ ವೃತ್ತಿಜೀವನಕ್ಕಾಗಿ ಮುಂಬೈನಲ್ಲಿ ವಾಸಿಸುತ್ತಿದ್ದರೆ, ಅವರ ತಂದೆ ಮತ್ತು ತಾಯಿ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿದ ತ್ರಿಪಾಠಿ, ತಂದೆಗೆ ತಮ್ಮ ಕೆಲಸದಲ್ಲಿ ಆಸಕ್ತಿ ಇಲ್ಲ ಎಂದು ಒಮ್ಮೆ ಬಹಿರಂಗಪಡಿಸಿದ್ದರು. ಪಂಕಜ್ ತ್ರಿಪಾಠಿ ಅವರ ತಂದೆ ರೈತರಾಗಿದ್ದರು ಮತ್ತು ಜೀವನೋಪಾಯಕ್ಕಾಗಿ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಅವರು ಕೂಡ ಎರಡು ವರ್ಷಗಳ ಹಿಂದೆ ತಮ್ಮ 98 ನೇ ವಯಸ್ಸಿನಲ್ಲಿ ನಿಧನರಾದರು.
ಇದನ್ನೂ ಓದಿ: ಲಾಲು ಬಯೋಪಿಕ್ನಲ್ಲಿ ನಟಿಸೋಕೆ ಪಂಕಜ್ ತ್ರಿಪಾಠಿ ಸೂಕ್ತ; ಶುರುವಾಗಿದೆ ಚರ್ಚೆ
ಪಂಕಜ್ ತ್ರಿಪಾಠಿ ಅವರ ಬಾಲ್ಯವನ್ನು ಅದೇ ಹಳ್ಳಿಯಲ್ಲಿ ಕಳೆದರು. ನಂತರ, ಅವರು ಶಿಕ್ಷಣಕ್ಕಾಗಿ ಪಾಟ್ನಾಗೆ ಹೋದರು. ಅಲ್ಲಿ ಅವರು ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿಕೊಂಡರು ಮತ್ತು ಹವ್ಯಾಸವಾಗಿ ನಟನೆಯನ್ನು ಪ್ರಾರಂಭಿಸಿದರು. ಆ ಬಳಿಕ ನಟನಾ ತರಬೇತಿ ಪಡೆದು, ಹೀರೋ ಆದರು. ಆದಾಗ್ಯೂ ಕುಟುಂಬ ಮಾತ್ರ ಊರಿನಲ್ಲೇ ಇತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.