ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಹಾಗೂ ಆಪ್ ನಾಯಕ ರಾಘವ್ ಚಡ್ಡಾ (Raghav Chadha) ಅವರು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರೂ ಮದುವೆ ಆಗುತ್ತಿದ್ದಾರೆ. ಮೂಲಗಳ ಪ್ರಕಾರ ಸೆಪ್ಟೆಂಬರ್ 23ರಂದು ಈ ಜೋಡಿ ಹಸೆಮಣೆ ಏರಲಿದೆ. ಸೆಲೆಬ್ರಿಟಿ ಮದುವೆ ಎನ್ನುವ ಕಾರಣಕ್ಕೆ ಸಾಕಷ್ಟು ಅದ್ದೂರಿಯಾಗಿ ನಡೆಯಲಿದೆ. ರಾಜಕೀಯ ನಾಯಕರು ಹಾಗೂ ಚಿತ್ರರಂಗದ ಗಣ್ಯರು ಈ ವಿವಾಹಕ್ಕೆ ಹಾಜರಿ ಹಾಕಲಿದ್ದಾರೆ. ಮದುವೆ ನಡೆಯೋದು ಎಲ್ಲಿ? ಇದಕ್ಕೆ ಖರ್ಚಾಗುತ್ತಿರುವ ಹಣ ಎಷ್ಟು ಎನ್ನುವ ಬಗ್ಗೆ ಈ ಸ್ಟೋರಿಯಲ್ಲಿದೆ ಉತ್ತರ.
ಇತ್ತೀಚೆಗೆ ಸೆಲೆಬ್ರಿಟಿಗಳು ರಾಜಸ್ಥಾನದಲ್ಲಿ ಮದುವೆ ಆಗುತ್ತಿದ್ದಾರೆ. ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್, ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ರಾಜಸ್ಥಾನವನ್ನೇ ಆಯ್ಕೆ ಮಾಡಿಕೊಂಡಿದ್ದರು. ಈಗ ಪರಿಣೀತಿ ಚೋಪ್ರಾ ಕೂಡ ಇದೇ ಆಯ್ಕೆ ಮಾಡಿಕೊಂಡಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿರುವ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ಈ ಮದುವೆ ನಡೆಯುತ್ತಿದೆ. ಈ ಹೋಟೆಲ್ ರೂಂಗಳ ಬಾಡಿಗೆ ಒಂದು ದಿನಕ್ಕೆ 30 ಸಾವಿರ ರೂಪಾಯಿ ಇಂದ ಆರಂಭ ಆಗಿ 9 ಲಕ್ಷ ರೂಪಾಯಿವರೆಗೆ ಇದೆ. ಗ್ರ್ಯಾಂಡ್ ಹೆರಿಟೇಜ್ ಗಾರ್ಡನ್ ವೀವ್ ರೂಂಗೆ 30 ಸಾವಿರ ರೂಪಾಯಿ ಇದೆ. ಮಹಾರಾಜ ಸ್ಯೂಟ್ಗೆ 9-10 ಲಕ್ಷ ರೂಪಾಯಿ ಇದೆ.
ಪರಿಣೀತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಮದುವೆಗೆ ಸಂಪೂರ್ಣ ಹೋಟೆಲ್ ಬುಕ್ ಮಾಡಲಾಗಿದೆ. ಇಲ್ಲಿ ವಿಶಾಲವಾದ ಜಾಗ ಇದೆ. ಸಾಂಪ್ರದಾಯಿಕ ಮದುವೆ ಆಗಲು ಈ ಜಾಗ ಹೇಳಿ ಮಾಡಿಸಿದಂತಿದೆ ಎಂಬುದು ಅನೇಕರ ಅಭಿಪ್ರಾಯ. ಈ ಕಾರಣದಿಂದಲೇ ಈ ಹೋಟೆಲ್ ಬುಕ್ ಮಾಡಲಾಗಿದೆ.
ಪರಿಣೀತಿ ಚೋಪ್ರಾ ಮದುವೆಗೆ ಸಾಕಷ್ಟು ಸೆಲೆಬ್ರಿಟಿಗಳು ಹಾಜರಿ ಹಾಕಲಿದ್ದಾರೆ. ಪರಿಣೀತಿ ಸಹೋದರಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಮದುವೆಗೆ ಬರಲಿದ್ದಾರೆ. ಬಾಲಿವುಡ್ನ ಸೆಲೆಬ್ರಿಟಿಗಳ ದಂಡು ವಿವಾಹಕ್ಕೆ ಆಗಮಿಸಲಿದೆ. ಹೀಗಾಗಿ ಮದುವೆ ಅದ್ದೂರಿಯಾಗಿ ನಡೆಯಲಿದೆ. ಉದಯಪುರದ ಐಷಾರಾಮಿ ಹೋಟೆಲ್ಗಳನ್ನು ಅತಿಥಿಗಳಿಗಾಗಿ ಬುಕ್ ಮಾಡಲಾಗಿದೆ. ಈ ಮದುವೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ರಾಘವ್ ಚಡ್ಡಾ ಆಪ್ ನಾಯಕ. ಹೀಗಾಗಿ, ದೆಹಲಿ ಸಿಎಂ, ಆಪ್ ಸ್ಥಾಪಕ ಅರವಿಂದ್ ಕೇಜ್ರಿವಾಲ್ ಅವರು ಮದುವೆಗೆ ಆಗಮಿಸಲಿದ್ದಾರೆ.
ಮದುವೆಗೂ ಮೊದಲು ಹಲವು ಕಾರ್ಯಕ್ರಮಗಳು ಆರಂಭ ಆಗಲಿದೆ. ಹಳದಿ, ಮೆಹೆಂದಿ ಕಾರ್ಯಕ್ರಮಗಳು ನಡೆಯಲಿವೆ. ಗುರುಗ್ರಾಮದಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಆಯೋಜನೆ ಮಾಡಲಾಗುತ್ತಿದೆ. ಇದಕ್ಕೂ ಸಾಕಷ್ಟು ಸಂಖ್ಯೆಯಲ್ಲಿ ಅತಿಥಿಗಳು ಬರಲಿದ್ದಾರೆ.
ರಾಘವ್ ಚಡ್ಡಾ ಹಾಗೂ ಪರಿಣೀತಿ ಚೋಪ್ರಾ ಅವರು ಎರಡು ತಿಂಗಳ ಹಿಂದೆಯೇ ಈ ಹೋಟೆಲ್ಗೆ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಹೋಟೆಲ್ ಇಷ್ಟವಾಗಿದೆ. ಅವರು ಹೋಟೆಲ್ ಬುಕ್ ಮಾಡಿದ್ದಾರೆ. ಒಂದು ವಾರಗಳ ಕಾಲ ರೂಂಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾಗೆ ವಿಶೇಷ ರೀತಿಯಲ್ಲಿ ವಿಶ್ ಮಾಡಿದ ತಂಗಿ ಪರಿಣೀತಿ
ಪರಿಣೀತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರದ್ದು ಪ್ರೇಮ ವಿವಾಹ. ಮೇ ತಿಂಗಳಲ್ಲಿ ಇವರ ನಿಶ್ಚಿತಾರ್ಥ ನೆರವೇರಿತು. ಪರಿಣೀತಿ ಅವರು ಈ ಮೊದಲ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆ ಒಂದು ವೈರಲ್ ಆಗಿತ್ತು. ಇದರಲ್ಲಿ ಅವರು ತಾವು ರಾಜಕಾರಣಿಯನ್ನು ಮದುವೆ ಆಗುವುದಿಲ್ಲ ಎಂದು ಹೇಳಿದ್ದರು. ‘ನಾನು ಯಾವುದೇ ರಾಜಕಾರಣಿಯನ್ನು ಮದುವೆ ಆಗಲು ಬಯಸುವುದಿಲ್ಲ’ ಎಂದು ಹೇಳಿದ್ದರು.
2011ರಲ್ಲಿ ಪರಿಣೀತಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ‘ಲೇಡಿಸ್ vs ರಿಕ್ಕಿ ಬಾಹ್ಲ್’ ಅವರ ನಟನೆಯ ಮೊದಲ ಸಿನಿಮಾ. ಆ ಬಳಿಕ ಅವರು ಹಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ, ದೊಡ್ಡ ಮಟ್ಟದ ಯಶಸ್ಸು ಸಿಗಲೇ ಇಲ್ಲ. ಇತ್ತೀಚೆಗೆ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:32 am, Thu, 7 September 23