ಬಿಡುಗಡೆಗೆ ಮುನ್ನವೇ 50 ಕೋಟಿ ಬಾಚಿದ ‘ಜವಾನ್’ ತಮ್ಮದೇ ದಾಖಲೆ ಮುರಿಯುವರೇ ಶಾರುಖ್
Jawan: ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಸೂಪರ್ ಹಿಟ್ ಆಗಿತ್ತು, ಇದೀಗ ಅವರದ್ದೇ 'ಜವಾನ್' ಬಿಡುಗಡೆ ಆಗುತ್ತಿದ್ದು, ಬಿಡುಗಡೆ ಆಗುವ ಮುನ್ನವೇ 50 ಕೋಟಿಗೂ ಹೆಚ್ಚಿನ ಮೊತ್ತವನ್ನು ಅಡ್ವಾನ್ಸ್ ಬುಕಿಂಗ್ನಿಂದ ಕಲೆಕ್ಷನ್ ಮಾಡಿದೆ.
ಸತತ ಸೋಲುಗಳನ್ನು ಕಂಡಿದ್ದ ಶಾರುಖ್ ಖಾನ್ಗೆ (Shah Rukh Khan) ‘ಪಠಾಣ್’ ಸಿನಿಮಾದಿಂದ ಅದೃಷ್ಟ ಖುಲಾಯಿಸಿದಂತಿದೆ. ಕೆಲವೇ ತಿಂಗಳ ಹಿಂದೆ ಬಿಡುಗಡೆ ಆಗಿದ್ದ ‘ಪಠಾಣ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಶಾರುಖ್ ಖಾನ್ ವೃತ್ತಿ ಬದುಕಿನಲ್ಲೇ ಅತಿ ದೊಡ್ಡ ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಗಳಿಕೆ ಮಾಡಿದೆ. ಇದೀಗ ಶಾರುಖ್ ಖಾನ್ರ ‘ಜವಾನ್’ ಸಿನಿಮಾ ಬಿಡುಗಡೆ ಆಗುತ್ತಿದ್ದು, ‘ಪಠಾಣ್’ ಸಿನಿಮಾಕ್ಕಿಂತಲೂ ದೊಡ್ಡ ಹಿಟ್ ಆಗುವ ಮುನ್ಸೂಚನೆಯನ್ನು ನೀಡಿದೆ.
‘ಜವಾನ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಭಾರಿ ಜೋರಾಗಿ ನಡೆದಿದ್ದು, ಕೇವಲ ಅಡ್ವಾನ್ಸ್ ಬುಕಿಂಗ್ನಿಂದಲೇ ‘ಜವಾನ್’ ಸಿನಿಮಾ ಈಗಾಗಲೇ 50 ಕೋಟಿಗೂ ಹೆಚ್ಚು ಮೊತ್ತವನ್ನು ವಿಶ್ವದಾದ್ಯಂತ ಕಲೆ ಹಾಕಿದೆ. ಆ ಮೂಲಕ ಬಿಡುಗಡೆ ಆಗುವ ಮುನ್ನವೇ ‘ಪಠಾಣ್’ ಸಿನಿಮಾದ ಓಪನಿಂಗ್ ಡೇ ಕಲೆಕ್ಷನ್ ಅನ್ನು ‘ಜವಾನ್’ ಸಿನಿಮಾ ಹಿಂದಿಕ್ಕಿದೆ.
ಭಾರತದ ಮಲ್ಟಿಪ್ಲೆಕ್ಸ್ ಚೈನ್ಗಳಲ್ಲಿ ಈಗಾಗಲೇ 32.47 ಕೋಟಿ ರೂಪಾಯಿ ಮೌಲ್ಯದ ಅಡ್ವಾನ್ಸ್ ಬುಕಿಂಗ್ ಆಗಿದೆ. ಇನ್ನು ವಿದೇಶಗಳಲ್ಲಿ 18.70 ಕೋಟಿ ಮೌಲ್ಯದ ಟಿಕೆಟ್ಗಳು ಮುಂಗಡವಾಗಿ ಸೇಲ್ ಆಗಿವೆ. ಅಂದಹಾಗೆ ಇದು ಸೆಪ್ಟೆಂಬರ್ 5ರ ದಿನದ ಲೆಕ್ಕ. ಸೆಪ್ಟೆಂಬರ್ 6 ರಂದು ಆಗಿರುವ ಅಡ್ವಾನ್ಸ್ ಬುಕಿಂಗ್ ಲೆಕ್ಕಾಚಾರ ಸೆಪ್ಟೆಂಬರ್ 7ರಂದು ಬರಲಿದೆ.
ಇದನ್ನೂ ಓದಿ:‘ಮಗನ ಮುಟ್ಟುವ ಮೊದಲು ನನ್ನನ್ನು ಎದುರಿಸು’; ಎಚ್ಚರಿಕೆ ನೀಡಿದ ಶಾರುಖ್ ಖಾನ್
‘ಜವಾನ್’ ಸಿನಿಮಾವು ಕೇವಲ ಭಾರತದ ಮಲ್ಟಿಪ್ಲೆಕ್ಸ್ಗಳಲ್ಲಿ ಸೆಪ್ಟೆಂಬರ್ 5ರ ಸಂಜೆ ವೇಳೆಗೆ 3.90 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳನ್ನು ಮಾರಾಟ ಮಾಡಿದೆ. ಬಿಡುಗಡೆಗೆ ಮುನ್ನ ಇಷ್ಟು ದೊಡ್ಡ ಸಂಖ್ಯೆಯ ಟಿಕೆಟ್ ಮಾರಾಟ ಮಾಡಿದ ಕೆಲವೇ ಸಿನಿಮಾಗಳ ಪಟ್ಟಿಗೆ ‘ಜವಾನ್’ ಸಹ ಸೇರಿಕೊಂಡಿದೆ. ಸಿನಿಮಾ ಸೆಪ್ಟೆಂಬರ್ 7ರಂದು ಬಿಡುಗಡೆ ಆಗಲಿದ್ದು, ಮೊದಲ ದಿನ ಕಲೆಕ್ಷನ್ನಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ. ಕನಿಷ್ಟ ಶಾರುಖ್ ಖಾನ್ರ ಈ ಹಿಂದಿನ ಬ್ಲಾಕ್ ಬಸ್ಟರ್ ‘ಪಠಾಣ್’ ಸಿನಿಮಾದ ದಾಖಲೆಯನ್ನು ದೂಳಿಪಟ ಮಾಡುವುದು ಪಕ್ಕಾ ಎನ್ನಲಾಗುತ್ತಿದೆ.
‘ಜವಾನ್’ ಸಿನಿಮಾವನ್ನು ಸ್ವತಃ ಶಾರುಖ್ ಖಾನ್ ನಿರ್ಮಾಣ ಮಾಡಿದ್ದು, ನಿರ್ದೇಶನ ಮಾಡಿರುವುದು ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ. ಸಿನಿಮಾದಲ್ಲಿ ನಯನತಾರಾ ನಾಯಕಿ. ಜೊತೆಗೆ ದೀಪಿಕಾ ಪಡುಕೋಣೆ, ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ ಸೇರಿದಂತೆ ಇನ್ನೂ ಕೆಲವು ಜನಪ್ರಿಯ ನಟಿಯರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನ ಖ್ಯಾತ ನಟ ಯೋಗಿ ಬಾಬು ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ