ಸಿನಿಮಾ ಹೆಸರಿನಲ್ಲಿ ‘ಇಂಡಿಯಾ’: ಹೆಸರು ಬದಲಿಸಿದ ಅಕ್ಷಯ್ ಕುಮಾರ್
Akshay Kumar:ಇಂಡಿಯಾ ಹೆಸರಿನ ಬದಲಿಗೆ ಭಾರತ ಎಂದು ಬಳಸಬೇಕೆಂಬ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇದರ ನಡುವೆ ನಟ ಅಕ್ಷಯ್ ಕುಮಾರ್ ತಮ್ಮ ಸಿನಿಮಾ ಹೆಸರು ಬದಲಾಯಿಸಿದ್ದಾರೆ. ಸಿನಿಮಾದಲ್ಲಿ 'ಇಂಡಿಯಾ' ಪದ ಇದ್ದದ್ದೇ ಈ ನಿರ್ಣಯಕ್ಕೆ ಕಾರಣ. ಯಾವುದು ಆ ಸಿನಿಮಾ? ಈಗ ಸಿನಿಮಾ ಹೆಸರೇನು?
ಇಂಡಿಯಾ (India) ಹೆಸರಿನ ಬದಲಿಗೆ ಭಾರತ ಎಂದು ಬದಲಾಯಿಸುವ ಬಗ್ಗೆ ಜೋರು ಚರ್ಚೆಗಳು ಚಾಲ್ತಿಯಲ್ಲಿದೆ. ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು ತಮ್ಮ ಭಾಷಣಗಳಲ್ಲಿ ‘ಇಂಡಿಯಾ’ ಎಂದು ಬಳಸುವುದನ್ನೇ ನಿಲ್ಲಿಸಿದ್ದಾರೆ. ಆರ್ಬಿಐ, ಇಂಡಿಯನ್ ಪಿನಲ್ ಕೋಡ್ ಇನ್ನಿತರೆಗಳನ್ನು ಬದಲಾಯಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ತಮ್ಮ ಸಿನಿಮಾದಲ್ಲಿ ‘ಇಂಡಿಯಾ’ ಎಂದು ಹೆಸರಿದ್ದ ಕಾರಣ ಸಿನಿಮಾದ ಹೆಸರನ್ನು ನಟ ಅಕ್ಷಯ್ ಕುಮಾರ್ (Akshay Kumar) ಬದಲಾಯಿಸಿದ್ದಾರೆ.
ಇತ್ತೀಚೆಗಷ್ಟೆ ಭಾರತದ ನಾಗರೀಕತ್ವ ಮರಳಿ ಪಡೆದಿರುವ ನಟ ಅಕ್ಷಯ್ ಕುಮಾರ್, ಕಳೆದ ಕೆಲ ವರ್ಷಗಳಿಂದಲೂ ರಾಷ್ಟ್ರೀಯವಾದಿಯಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಪ್ರಧಾನಿ ಮೋದಿಗೆ ಆಪ್ತರಾಗಿದ್ದು, ಬಿಜೆಪಿ ಪರ ಬೆಂಬಲಿಗರಿಗೆ ಪ್ರಿಯರೂ ಆಗಿದ್ದಾರೆ. ರಾಷ್ಟ್ರಪ್ರೇಮ ಸಾರುವ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿರುವ ಅಕ್ಷಯ್ ಕುಮಾರ್, ಇದೀಗ ನಿಜಜೀವನದ ಹೀರೋ ಎಂಜಿನಿಯರ್ ಜಸ್ವಂತ್ ಸಿಂಗ್ ಗಿಲ್ ಅವರ ಸಾಹಸವೊಂದನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಈ ಸಿನಿಮಾಕ್ಕೆ ಮೊದಲಿಗೆ ‘ಕ್ಯಾಪ್ಸೂಲ್ ಗಿಲ್’ ಎಂದು ಹೆಸರಿಡಲಾಗಿತ್ತು. ಅದಾದ ಬಳಿಕ ‘ದಿ ಗ್ರೇಟ್ ಇಂಡಿಯನ್ ಎಸ್ಕೇಪ್’ ಎಂದು ಹೆಸರು ಬದಲಾಯಿಸಲಾಯ್ತು, ಕೊನೆಗೆ ‘ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ’ ಎಂದು ಬದಲಾಯಿಸಲಾಯ್ತು. ಇದೀಗ ‘ಇಂಡಿಯಾ’ ಹೆಸರು ಕೈಬಿಟ್ಟು ಅದರ ಬದಲಿಗೆ ಭಾರತ ಎಂದು ಬಳಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿರುವ ಕಾರಣ ತಮ್ಮ ಸಿನಿಮಾದ ಹೆಸರನ್ನು ಸಹ ಅಕ್ಷಯ್ ಕುಮಾರ್ ಬದಲಿಸಿದ್ದಾರೆ.
ಇದನ್ನೂ ಓದಿ:ಆಮಿರ್ ಖಾನ್-ಅಕ್ಷಯ್ ಕುಮಾರ್ ಒಟ್ಟಾಗಿ ತೆರೆ ಹಂಚಿಕೊಳ್ಳದಿರಲು ಈ ಘಟನೆಯೇ ಕಾರಣ..
‘ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ’ ಹೆಸರನ್ನು ಬದಲಿಸಿ ‘ಮಿಷನ್ ರಾಣಿಗಂಜ್’ ಎಂದು ಹೆಸರಿಡಲಾಗಿದೆ. ರಾಣಿಗಂಜ್ ಪ್ರದೇಶದಲ್ಲಿನ ಗಣಿಯೊಂದರಲ್ಲಿ ಸಿಲುಕಿದ್ದ 65 ಕಾರ್ಮಿಕರನ್ನು ಎಂಜಿನಿಯರ್ ಜಸ್ವಂತ್ ಸಿಂಗ್ ಗಿಲ್ ರಕ್ಷಣೆ ಮಾಡಿದ ನಿಜ ಘಟನೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜಸ್ವಂತ್ ಸಿಂಗ್ ಗಿಲ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಟೀಸರ್ ಅನ್ನು ಅಕ್ಷಯ್ ಕುಮಾರ್ ಹುಟ್ಟುಹಬ್ಬವಾದ ಸೆಪ್ಟೆಂಬರ್ 9ಕ್ಕೆ ತೆರೆಗೆ ತರಲು ಚಿತ್ರತಂಡ ಉದ್ದೇಶಿಸಿದೆ.
ಈ ಸಿನಿಮಾವನ್ನು ಟಿನು ಸುರೇಶ್ ದೇಸಾಯಿ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಪರಿಣಿತಿ ಚೋಪ್ರಾ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಅಕ್ಟೋಬರ್ 6ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ನಟ ಅಕ್ಷಯ್ ಕುಮಾರ್ಗೆ ‘ಓಎಂಜಿ 2’ ಸಿನಿಮಾದಿಂದ ಹಿಟ್ ದೊರೆತಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆದ ‘ಓಎಂಜಿ 2’ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಮೊತ್ತ ಗಳಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ