ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ದಿನಗಳ ನೆನೆದ ನಟ ನವೀನ್ ಪೋಲಿಶೆಟ್ಟಿ
Sushant Singh Rajput: ಸುಶಾಂತ್ ಸಿಂಗ್ ರಜಪೂತ್ ಜೊತೆ ಕೆಲಸ ಮಾಡಿರುವ ನಟ ನವೀನ್ ಪೋಲಿಶೆಟ್ಟಿ, ಸುಶಾಂತ್ ಜೊತೆ ಕಳೆದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಸುಶಾಂತ್ ಎಷ್ಟು ಪ್ರತಿಭಾವಂತರಾಗಿದ್ದರು ಎಂಬುದನ್ನು ಉದಾಹರಣೆ ನೀಡಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ನಿಧನ ಹೊಂದಿ ಮೂರು ವರ್ಷಗಳಾಗಿವೆ. ಯುವ, ಪ್ರತಿಭಾವಂತ ನಟ ಹಠಾತ್ತನೆ ಇಲ್ಲವಾಗಿದ್ದನ್ನು ದೇಶದ ಸಿನಿ ಪ್ರೇಮಿಗಳು ಜೀರ್ಣಿಸಿಕೊಳ್ಳಲಾಗಿರಲಿಲ್ಲ. ಸುಶಾಂತ್ ಸಾವಿನ ಬಳಿಕ ಬಾಲಿವುಡ್ನಲ್ಲಿ ಹಲವು ನಾಟಕೀಯ ಬೆಳವಣಿಗೆಗಳಾದವು. ಸುಶಾಂತ್ರ ನಟನಾ ಪ್ರತಿಭೆಯ ಜೊತೆಗೆ ಅನೇಕ ವಿಷಯಗಳಲ್ಲಿ ಅವರಿಗಿದ್ದ ಜ್ಞಾನದ ಬಗ್ಗೆಯೂ ಆ ಸಮಯದಲ್ಲಿ ಚರ್ಚೆಗಳಾಗಿದ್ದವು. ಸುಶಾಂತ್ ಒಟ್ಟಿಗೆ ಸಿನಿಮಾ ಒಂದರಲ್ಲಿ ನಟಿಸಿದ್ದ ನವೀನ್ ಪೋಲಿಶೆಟ್ಟಿ ಇದೀಗ ಸುಶಾಂತ್ರೊಂದಿಗೆ ಕಳೆದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್, ‘ಚಿಚೋರೆ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಬೇರೆ ಯಾರಿಗೋ ಸಿಗಬೇಕಾದ ಅವಕಾಶ ಅದೃಷ್ಟವಷಾತ್ ನಟ ನವೀನ್ ಪೋಲಿಶೆಟ್ಟಿಗೆ ಸಿಕ್ಕಿತ್ತು. ಚಿತ್ರೀಕರಣ ನಡೆಯಬೇಕಾದರೆ ಸುಶಾಂತ್ ಹಾಗೂ ನವೀನ್ ಆತ್ಮೀಯ ಗೆಳೆಯರಂತಾಗಿದ್ದರು. ಸಿನಿಮಾದಲ್ಲಿಯೂ ಅವರದ್ದು ಗೆಳೆಯರ ಪಾತ್ರವೇ ಆಗಿತ್ತು. ಇದೀಗ ನವೀನ್ರ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ ತೆರೆಗೆ ಬರುತ್ತಿದ್ದು, ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಸುಶಾಂತ್ ರನ್ನು ನವೀನ್ ನೆನಪಿಸಿಕೊಂಡರು.
ಮಾಧ್ಯಮದವರೊಬ್ಬರ ಪ್ರಶ್ನೆಗೆ ಉತ್ತರಿಸಿದ ನಟ ನವೀನ್ ಪೋಲಿಶೆಟ್ಟಿ, ‘ನಾನು ಎಂಜಿನಿಯರಿಂಗ್ ಮಾಡಿದ್ದೆ, ಸುಶಾಂತ್ ಸಹ ಎಂಜಿನಯರ್, ‘ಚಿಚೋರೆ’ ಸಿನಿಮಾದ ನಿರ್ದೇಶಕ ನಿತೇಶ್ ತಿವಾರಿ ಸಹ ಎಂಜಿನಿಯರಿಂಗ್ ಮಾಡಿದ್ದರು. ಹಾಗಾಗಿ ನಾವು ಮೂವರು ಮೊದಲ ಬಾರಿಗೆ ಭೇಟಿ ಆದಾಗಲೇ ಚೆನ್ನಾಗಿ ಕನೆಕ್ಟ್ ಆದೆವು. ಎಂಜಿನಿಯರಿಂಗ್ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದೆವು” ಎಂದು ನವೀನ್ ನೆನಪು ಮಾಡಿಕೊಂಡರು.
ಇದನ್ನೂ ಓದಿ:ಮದುವೆ ಬೇಡ ಆದರೆ ಮಗು ಬೇಕು, ಮಿಸ್ ಶೆಟ್ಟಿಗೆ ಆಸೆ ಪೋಲಿಶೆಟ್ಟಿಗೆ ಸಂಕಷ್ಟ
”ಚಿಚೋರೆ’ ಸಿನಿಮಾ ಸಹ ಎಂಜಿನಿಯರಿಂಗ್ ಜೀವನದ ಬಗ್ಗೆಯೇ ಇತ್ತು, ಹಾಗಾಗಿ ನಮಗೆ ಆ ಸಿನಿಮಾದ ಕತೆ ಸಹ ಬಹಳ ಸುಲಭವಾಗಿ ಕನೆಕ್ಟ್ ಆಯ್ತು. ಶೂಟಿಂಗ್ ಸಂದರ್ಭದಲ್ಲಿ, ಸುಶಾಂತ್ ಪ್ರತಿದಿನ ಯಾವುದಾದರೂ ಒಂದು ಈಕ್ವೇಷನ್ ಅನ್ನೊ, ಎಂಜಿನಿಯರಿಂಗ್ ಸಮಸ್ಯೆಯನ್ನೋ ತರುತ್ತಿದ್ದರು, ನಾವು ಮೂವರು ಕುಳಿತು ಅದರ ಬಗ್ಗೆ ಚರ್ಚಿಸಿ ಅದನ್ನು ಪರಿಹಾರ ಮಾಡಲು ಯತ್ನಿಸುತ್ತಿದ್ದೆವು. ಇದು ಪ್ರತಿದಿನವೂ ನಡೆಯುತ್ತಿತ್ತು” ಎಂದಿದ್ದಾರೆ ನವೀನ್.
ನಮ್ಮನ್ನು ನೋಡಿ ಬೇರೆಯವರೂ ಸಹ ಪ್ರತಿದಿನ ಯಾವುದಾದರೂ ಒಂದು ಗಣಿತದ ಸಮಸ್ಯೆ ತಂದು ಸಮಸ್ಯೆ ಬಗೆಹರಿಸಲು ಯತ್ನಿಸುತ್ತಿದ್ದರು. ಕೆಲವರಿಗಂತೂ ನಾವು ಏನು ಮಾಡುತ್ತಿದ್ದೇವೆ ಎಂದು ಸಹ ಅರ್ಥವಾಗುತ್ತಿರಲಿಲ್ಲ. ಸಿನಿಮಾದ ನಾಯಕಿ ಆಗಿದ್ದ ಶ್ರದ್ಧಾ ಕಪೂರ್ ಬಂದು ನೀವೆಲ್ಲ ಗಂಟೆಗಟ್ಟಲೆ ಕುಳಿತುಕೊಂಡು ಏನು ಮಾಡುತ್ತಿರುತ್ತೀರ ಎಂದು ಪ್ರಶ್ನೆ ಮಾಡುತ್ತಿದ್ದರು. ಆದರೆ ನಾವು ಮಾತ್ರ ಎಂಜಿನಿಯರಿಂಗ್ ಬಗ್ಗೆ ಚರ್ಚೆ ಹಾಗೂ ಈಕ್ವೇಶನ್ಗಳನ್ನು ಬಿಡಿಸುವುದರಲ್ಲೇ ನಿರತರಾಗಿರುತ್ತಿದ್ದೆವು” ಎಂದಿದ್ದಾರೆ.
”ಸುಶಾಂತ್ ಒಬ್ಬ ಪ್ರತಿಭಾವಂತ, ಅದ್ಭುತವಾದ ವ್ಯಕ್ತಿ. ಅವರನ್ನು ಖಂಡಿತ ನಾನು ಈ ದಿನ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರನ್ನು ಪ್ರತಿದಿನವೂ ನಾನು ಮಿಸ್ ಮಾಡಿಕೊಳ್ಳುತ್ತೇನೆ” ಎಂದಿದ್ದಾರೆ ನವೀನ್. 2020ರ ಜುಲೈ 14 ರಂದು ಮುಂಬೈನ ಅಪಾರ್ಟ್ಮೆಂಟ್ನಲ್ಲಿ ಸುಶಾಂತ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಾಥಮಿಕ ತನಿಖೆ ನಡೆಸಿದ್ದ ಮುಂಬೈ ಪೊಲೀಸರು ಇದು ಆತ್ಮಹತ್ಯೆ ಎಂದಿದ್ದರು. ಆದರೆ ಹಲವರು ಇದೊಂದು ಕೊಲೆ ಎಂದು ಅನುಮಾನಿಸಿ ತನಿಖೆಗೆ ಒತ್ತಾಯಿಸಿದ್ದರು. ಬಳಿಕ ಬಿಹಾರ ಪೊಲೀಸ್ ಹಾಗೂ ಸಿಬಿಐ ತನಿಖೆ ನಡೆಸಿತು. ತನಿಖೆ ಇನ್ನೂ ಜಾರಿಯಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ