AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮದುವೆ ಬೇಡ ಆದರೆ ಮಗು ಬೇಕು’: ‘ಮಿಸ್ ಶೆಟ್ಟಿ’ಗೆ ಆಸೆ ‘ಪೋಲಿಶೆಟ್ಟಿ’ಗೆ ಸಂಕಷ್ಟ

Anushka Shetty: ಅನುಷ್ಕಾ ಶೆಟ್ಟಿ ನಟನೆಯ ಹೊಸ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಮೂರು ವರ್ಷಗಳ ಬಳಿಕ ಅನುಷ್ಕಾ ನಟಿಸಿರುವ ಸಿನಿಮಾ ಒಂದು ಬಿಡುಗಡೆ ಆಗಲಿದೆ.

'ಮದುವೆ ಬೇಡ ಆದರೆ ಮಗು ಬೇಕು': 'ಮಿಸ್ ಶೆಟ್ಟಿ'ಗೆ ಆಸೆ 'ಪೋಲಿಶೆಟ್ಟಿ'ಗೆ ಸಂಕಷ್ಟ
ಅನುಷ್ಕಾ-ನವೀನ್
ಮಂಜುನಾಥ ಸಿ.
|

Updated on: Aug 22, 2023 | 3:51 PM

Share

ಬಾಹುಬಲಿ‘ (Bahubali) ನಟಿ ಅನುಷ್ಕಾ ಶೆಟ್ಟಿ ಬಹಳ ವರ್ಷಗಳ ಬಳಿಕ ಮತ್ತೆ ಬೆಳ್ಳಿ ತೆರೆಯಲ್ಲಿ ಮಿಂಚಲು ಬಂದಿದ್ದಾರೆ. ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಹೆಸರಿನ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ (Anushka Shetty) ನಟಿಸಿದ್ದು, ಸಿನಿಮಾದ ಕತೆ ತುಸು ಭಿನ್ನವಾಗಿದೆ. ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 22) ಬಿಡುಗಡೆ ಆಗಿದ್ದು, ಸಿನಿಮಾದಲ್ಲಿ ಶೆಫ್ ಪಾತ್ರ ಮಾಡಿರುವ ಅನುಷ್ಕಾ ಶೆಟ್ಟಿಗೆ ಮದುವೆ ಬೇಡ ಆದರೆ ಮಗು ಬೇಕಾಗಿದೆ. ಇದಕ್ಕಾಗಿ ಸೂಕ್ತ ಗಂಡಿನ ಹುಡುಕಾಟದಲ್ಲಿದ್ದಾರೆ ಅನುಷ್ಕಾ.

‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಜೊತೆ ನಾಯಕನಾಗಿ ನವೀನ್ ಪೋಲಿಶೆಟ್ಟಿ ನಟಿಸಿದ್ದಾರೆ. ಈ ಹಿಂದೆ ‘ಜಾತಿರತ್ನಾಲು’ ‘ಏಜೆಂಟ್ ಸಾಯಿ ಶ್ರೀನಿವಾಸ ಆತ್ರೆಯ’ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಇವರಿಬ್ಬರ ಸರ್ ನೇಮ್​ಗಳನ್ನೇ ಸಿನಿಮಾ ಹೆಸರನ್ನಾಗಿ ಇಡಲಾಗಿದ್ದು, ನಡುವಯಸ್ಸಿನ ಮಹಿಳೆ ಹಾಗೂ ಯುವಕನ ನಡುವಿನ ಪ್ರೇಮಕತೆಯನ್ನು ಹೇಳಲು ಹೊರಟಿದ್ದಾರೆ ನಿರ್ದೇಶಕ ಮಹೇಶ್ ಬಾಬು ಬಿ.

ಇಂದು ಬಿಡುಗಡೆ ಆಗಿರುವ 2:30 ನಿಮಿಷದ ಟ್ರೈಲರ್​ನಲ್ಲಿ ಸಿನಿಮಾದ ಕತೆಯ ಎಳೆಯನ್ನು ಬಿಟ್ಟುಕೊಟ್ಟಿರುವ ನಿರ್ದೇಶಕರು ನಾಯಕ ನಾಯಕಿ ಸೇರಿದಂತೆ ಹಲವು ಪಾತ್ರಗಳ ಪರಿಚಯ ಮಾಡಿಸಿದ್ದಾರೆ. ಸಿನಿಮಾದಲ್ಲಿ ಫೈವ್​ಸ್ಟಾರ್ ಹೋಟೆಲ್​ನ ಶೆಫ್ ಆಗಿರುವ ನಟಿ ಅನುಷ್ಕಾ ಶೆಟ್ಟಿ, ಮದುವೆಯಾಗದ ನಡುವಯಸ್ಸಿನ ಮಹಿಳೆ. ಪ್ರೀತಿ, ಪ್ರೇಮ, ಮದುವೆಗಳಲ್ಲಿ ಆಸಕ್ತಿಯಿಲ್ಲ ಆದರೆ ಯಾವುದೋ ಕಾರಣಕ್ಕೆ ಮಗು ಪಡೆಯಲೇ ಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಅದಕ್ಕಾಗಿ ಸೂಕ್ತವಾದ ಯುವಕನ ಹುಡುಕಾಟದಲ್ಲಿದ್ದಾರೆ.

ಇದನ್ನೂ ಓದಿ:ನಟಿ ಅನುಷ್ಕಾ ಶೆಟ್ಟಿ ಸಂಭಾವನೆ ಎಷ್ಟು? ಕಡಿಮೆ ಸಿನಿಮಾ ಮಾಡಿದರೂ ಪಡೆಯುತ್ತಾರೆ ಕೋಟಿ ಕೋಟಿ ಹಣ

ನಾಯಕ ನವೀನ್ ಪೋಲಿಶೆಟ್ಟಿ, ಇಂಜಿನಿಯರಿಂಗ್ ಮುಗಿಸಿ ಸೂಕ್ತ ಕೆಲಸ ಸಿಗದೇ ಸ್ಟ್ಯಾಂಡಪ್ ಕಾಮಿಡಿ ಮಾಡುತ್ತಾ, ಮನೆಯವರಿಂದ ಬೈಸಿಕೊಳ್ಳುತ್ತಾ ಜಾಲಿಯಾಗಿರುವ ಯುವಕ. ಅನುಷ್ಕಾ, ಮಗು ಪಡೆಯಲು ನವೀನ್ ಪೋಲಿಶೆಟ್ಟಿಯ ಸಹಾಯ ಬೇಡುತ್ತಾಳೆ. ಇದು ಹಲವು ಗೊಂದಲ, ಅನುಮಾನ, ಭಾವುಕ ಸನ್ನಿವೇಶಗಳಿಗೆ ಕಾರಣವಾಗುತ್ತದೆ. ಈ ರೀತಿಯ ಕಾಂಟ್ರಾಕ್ಟ್ ಸಂಬಂಧಗಳು ಸರಿಯೇ, ಸಮಾಜಕ್ಕೆ ಒಳಿತೆ ಇತ್ಯಾದಿ ವಿಷಯಗಳ ಬಗ್ಗೆ ಸಿನಿಮಾ ಚರ್ಚಿಸುವಂತಿದೆ.

‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾವನ್ನು ಮಹೇಶ್ ಬಾಬು ಪಿ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ಪ್ರಭಾಸ್ ಸಹಭಾಗಿತ್ವದ ಯುವಿ ಕ್ರಿಯೇಷನ್ಸ್. ಸಿನಿಮಾದಲ್ಲಿ ಅನುಷ್ಕಾ, ನವೀನ್ ಹೊರತಾಗಿ ಹಿರಿಯ ನಟರಾದ ಮುರಳಿಶರ್ಮಾ, ನಾಸರ್, ಕೇಶವ್ ದೀಪಕ್, ಜಯಸುಧಾ ಇನ್ನೂ ಹಲವರಿದ್ದಾರೆ. 2020ರಲ್ಲಿ ಬಿಡುಗಡೆ ಆಗಿದ್ದ ‘ನಿಶ್ಯಬ್ಧಂ’ ಸಿನಿಮಾದ ಬಳಿಕ ಯಾವ ಸಿನಿಮಾದಲ್ಲಿಯೂ ನಟಿಸಿರದಿದ್ದ ಅನುಷ್ಕಾ ಶೆಟ್ಟಿ ಇದೀಗ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.

ಇನ್ನು ನಟ ಪೋಲಿಶೆಟ್ಟಿ ನಟನೆಯ ‘ಜಾತಿರತ್ನಾಲು’ ಸಿನಿಮಾ 2021ರಲ್ಲಿ ಬಿಡುಗಡೆ ಆಗಿತ್ತು, ಅದಾದ ಬಳಿಕ ಇದೀಗ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಸಿನಿಮಾದ ಬಳಿಕ ‘ಅನಗನಗಾ ಒಕ ರಾಜು’ ಹೆಸರಿನ ಸಿನಿಮಾದಲ್ಲಿ ನವೀನ್ ಪೋಲಿಶೆಟ್ಟಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ