ನಟಿ ಪರಿಣೀತಿ ಚೋಪ್ರಾ (Parineeti Chopra) ಹಾಗೂ ಯುವರಾಜಕಾರಣಿ ರಾಘವ್ ಚಡ್ಡ (Raghav Chada) ನಿಶ್ಚಿತಾರ್ಥ ಇತ್ತೀಚೆಗಷ್ಟೆ ದೆಹಲಿಯ ಐಶಾರಾಮಿ ಹೋಟೆಲ್ನಲ್ಲಿ ಅದ್ಧೂರಿಯಾಗಿ ನಡೆದಿದೆ. ನಟಿ ಪ್ರಿಯಾಂಕಾ ಚೋಪ್ರಾ, ಬಾಲಿವುಡ್ನ ಹಲವು ದಿಗ್ಗಜರ ಜೊತೆಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಎಎಪಿ ಮುಖಂಡ ಮನೀಷ್ ಸಿಸೋಡಿಯಾ ಇನ್ನೂ ಹಲವರು ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದರು. ನಿಶ್ಚಿತಾರ್ಥಕ್ಕೆ ಪರಿಣೀತಿ ಚೋಪ್ರಾ ಹಾಗೂ ರಾಘವ್ ಚಡ್ಡ ಧರಿಸಿದ್ದ ಉಡುಗೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗಿತ್ತು. ಅಂತೆಯೇ ಇಬ್ಬರ ಉಂಗುರಗಳ ಬಗ್ಗೆಯೂ ಸಹ. ಅಂದಹಾಗೆ ಪರಿಣೀತಿಗೆ ರಾಘವ್ ನೀಡಿದ ಉಂಗುರದ ಬೆಲೆ ಎಷ್ಟು ಗೊತ್ತೆ.
ನಿಶ್ಚಿತಾರ್ಥದಂದು ಪರಿಣೀತಿಗೆ ವಜ್ರದ ಸುಂದರವಾದ ಉಂಗುರವನ್ನು ರಾಘವ್ ತೊಡಿಸಿದ್ದಾರೆ. ಪರಿಣೀತಿ ಧರಿಸಿರುವ ಉಂಗುರ ಸರಳವಾಗಿ ಕಾಣುತ್ತದೆಯಾದರೂ ಬೆಲೆ ಕಡಿಮೆಯೇನಲ್ಲ. ಹಾಗೆಂದೂ ತೀರ ದುಬಾರಿಯೂ ಅಲ್ಲ. ರಾಘವ್ ತೊಡಿಸಿದ ಮೂರು ಕ್ಯಾರೆಟ್ನ ವಜ್ರದ ಉಂಗುರದ ಬೆಲೆ ನಾಲ್ಕು ಲಕ್ಷ ರುಪಾಯಿಗಳಂತೆ. ತೆಳುವಾದ ಚಿನ್ನದ ಉಂಗುರಕ್ಕೆ ವಜ್ರದ ಮುಕುಟವನ್ನು ಇಡಲಾಗಿರುವ ಉಂಗುರ ಪರಿಣೀತಿ ಬೆರಳಲ್ಲಿ ಹೊಳೆಯುತ್ತಿದೆ.
ಇನ್ನು ಪರಿಣೀತಿ, ತಮ್ಮ ಭಾವಿ ಪತಿ ರಾಘವ್ಗೆ ಚಿನ್ನದ ಉಂಗುರ ತೊಡಿಸಿದ್ದಾರೆ. ಯಾವುದೇ ಹೆಚ್ಚುವರಿ ಡಿಸೈನ್ ಇಲ್ಲದ ಬ್ಯಾಂಡ್ ಮಾದರಿಯ ಸರಳವಾದ ಉಂಗುರವನ್ನು ಪರಿಣೀತಿ, ರಾಘವ್ಗೆ ತೊಡಿಸಿದ್ದಾರೆ. ಈ ಉಂಗುರದ ಬೆಲೆ ಸುಮಾರು ಒಂದು ಲಕ್ಷ ರುಪಾಯಿಗಳು ಎನ್ನಲಾಗುತ್ತಿದೆ. ಇಬ್ಬರೂ ಸಹ ತಮ್ಮ ನಿಶ್ಚಿತಾರ್ಥದ ಉಂಗುರಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:Parineeti Chopra: ‘ನಮ್ಮ ಪ್ರಪಂಚ ಬೇರೆ ಬೇರೆ’: ಎಂಗೇಜ್ಮೆಂಟ್ ಬಳಿಕ ಬಹಿರಂಗ ಪತ್ರ ಬರೆದ ಪರಿಣೀತಿ ಚೋಪ್ರಾ
ಪರಿಣೀತಿ-ರಾಘವ್ರ ನಿಶ್ಚಿತಾರ್ಥಕ್ಕೆ ನಟಿ ಪ್ರಿಯಾಂಕಾ ಚೋಪ್ರಾ, ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್, ವಸ್ತ್ರ ವಿನ್ಯಾಸಕ ಮನೀಷ್ ಮಲ್ಹೋತ್ರಾ, ನಟ ಅರ್ಜುನ್ ಕಪೂರ್ ಸೇರಿದಂತೆ ಇನ್ನೂ ಹಲವರು ಆಗಮಿಸಿದ್ದರು. ಇನ್ನು ಎಎಪಿಯ ಪ್ರಮುಖ ನಾಯಕ, ಸಂಸದರೂ ಆಗಿರುವ ರಾಘವ್ ಪರವಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಮನೀಷ್ ಸಿಸೋಡಿಯಾ ಇನ್ನು ಕೆಲವರು ಆಗಮಿಸಿದ್ದರು.
ನಿಶ್ಚಿತಾರ್ಥದ ಬಳಿಕ ಪೋಸ್ಟ್ ಒಂದನ್ನು ಪರಿಣೀತಿ ಚೋಪ್ರಾ ಹಂಚಿಕೊಂಡಿದ್ದು, ”‘ನಮ್ಮದು ಬೇರೆ ಬೇರೆ ಪ್ರಪಂಚ. ಈ ಸಮ್ಮಿಲನದಿಂದ ನಮ್ಮ ಪ್ರಪಂಚಗಳು ಒಂದಾಗುತ್ತವೆ. ನಾವು ಊಹಿಸಿರುವುದಕ್ಕಿಂತ ದೊಡ್ಡ ಕುಟುಂಬವನ್ನು ನಾವು ಗಳಿಸಿದ್ದೇವೆ. ನಾವು ನೋಡಿದ, ಓದಿದ ಎಲ್ಲ ಶುಭ ಹಾರೈಕೆಗಳು ನಮ್ಮ ಹೃದಯ ಮುಟ್ಟಿವೆ. ಎಲ್ಲರಿಗೂ ಪ್ರತ್ಯೇಕವಾಗಿ ಧನ್ಯವಾದ ಹೇಳಲು ಸಾಧ್ಯವಿಲ್ಲ. ಮಾಧ್ಯಮದಲ್ಲಿ ಇರುವ ಸ್ನೇಹಿತರಿಗೆ ವಿಶೇಷ ಧನ್ಯವಾದ. ದಿನವಿಡೀ ಅಲ್ಲಿದ್ದಕ್ಕಾಗಿ ಮತ್ತು ನಮ್ಮನ್ನು ಹುರಿದುಂಬಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ಪತ್ರದಲ್ಲಿ ಬರೆದಿದ್ದಾರೆ.
ಪರಿಣೀತಿ ಹಾಗೂ ರಾಘವ್ ಚಡ್ಡಾ ಲಂಡನ್ನಲ್ಲಿ ಒಟ್ಟಿಗೆ ಓದಿದ್ದರು. ಈ ವೇಳೆ ಅವರ ಮಧ್ಯೆ ಪರಿಚಯ ಬೆಳೆದಿತ್ತು. ಈ ಪರಿಚಯ ಪ್ರೀತಿಗೆ ತಿರುಗಿದೆ. ಪರಿಣೀತಿ ಚೋಪ್ರಾಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಇನ್ನೂ ಸಿಕ್ಕಿಲ್ಲ. ಇದೀಗ ಅವರ ಕೈಯಲ್ಲಿ ಎರಡು ಸಿನಿಮಾಗಳಷ್ಟೆ ಇವೆ. ಪರಿಣೀತಿ ಹಾಗೂ ರಾಘವ್ ವಿವಾಹ ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಮದುವೆ ಕಾರ್ಯಕ್ರಮ ಬಹು ಅದ್ಧೂರಿಯಾಗಿ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ