
ನಟ ಪ್ರಭಾಸ್ ಅವರು ‘ಆದಿಪುರುಷ್’ (Adipurush) ಚಿತ್ರದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ 2023ರ ಜನವರಿ ತಿಂಗಳಲ್ಲಿ ರಿಲೀಸ್ ಆಗುತ್ತಿತ್ತು. ಆದರೆ ಈಗ ಬಿಡುಗಡೆ ದಿನಾಂಕವನ್ನು (Adipurush Release Date) ಮುಂದೂಡಲಾಗಿದೆ. ಈ ಕುರಿತು ಸ್ವತಃ ಚಿತ್ರದ ನಿರ್ದೇಶಕ ಓಂ ರಾವತ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ರೀತಿ ಆಗಿದ್ದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಪ್ರಭಾಸ್ (Prabhas) ಅವರನ್ನು ರಾಮನ ಅವತಾರಲ್ಲಿ ತೆರೆ ಮೇಲೆ ನೋಡಬೇಕು ಎಂದು ಕಾದಿದ್ದ ಅಭಿಮಾನಿಗಳು ಇನ್ನಷ್ಟು ದಿನ ಕಾಯುವುದು ಅನಿವಾರ್ಯ ಆಗಿದೆ. ಇದರಿಂದ ಕೆಲವರಿಗೆ ಬೇಸರ ಆಗಿದೆ. ಆದರೆ ಇನ್ನೊಂದು ವರ್ಗದ ಪ್ರೇಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ರಾಮಾಯಣದ ಕಥೆಯನ್ನು ಇಟ್ಟುಕೊಂಡು ‘ಆದಿಪುರುಷ್’ ಚಿತ್ರ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಅವರಿಗೆ ರಾಮನ ಪಾತ್ರವಿದೆ. ಸೀತೆಯಾಗಿ ಕೃತಿ ಸನೋನ್ ಅಭಿನಯಿಸುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಅಬ್ಬರಿಸಲಿದ್ದಾರೆ. ಪೌರಾಣಿಕ ಸಿನಿಮಾಗಳನ್ನು ಕಟ್ಟಿಕೊಡಲು ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಬೇಕಾಗುತ್ತದೆ. ಈ ವಿಚಾರದಲ್ಲಿ ‘ಆದಿಪುರುಷ್’ ತಂಡ ಎಡವಿತ್ತು.
ಅಕ್ಟೋಬರ್ 2ರಂದು ಅದ್ದೂರಿಯಾಗಿ ಅಯೋಧ್ಯೆಯಲ್ಲಿ ‘ಆದಿಪುರುಷ್’ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಇದನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ ಎಂದು ಚಿತ್ರತಂಡ ಭಾವಿಸಿತ್ತು. ಆದರೆ ಆಗಿದ್ದೇ ಬೇರೆ. ಟೀಸರ್ನಲ್ಲಿ ಕಳಪೆ ಗ್ರಾಫಿಕ್ಸ್ ಇದೆ ಎಂಬ ಕಾರಣಕ್ಕೆ ಜನರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದರು. ಅದರ ಪರಿಣಾಮವಾಗಿ ಚಿತ್ರತಂಡ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ.
ನಿರ್ದೇಶಕ ಓಂ ರಾವತ್ ಹೇಳಿದ್ದೇನು?
‘ಆದಿಪುರುಷ್ ಒಂದು ಸಿನಿಮಾ ಅಲ್ಲ. ರಾಮನ ಬಗ್ಗೆ ನಮಗೆ ಇರುವ ಭಕ್ತಿ ಮತ್ತು ಸಂಸ್ಕೃತಿ-ಇತಿಹಾಸದ ಬಗ್ಗೆ ನಮಗೆ ಇರುವ ಬದ್ಧತೆಯನ್ನು ಇದು ಪ್ರತಿನಿಧಿಸುತ್ತದೆ. ಪ್ರೇಕ್ಷಕರಿಗೆ ಸಂಪೂರ್ಣ ದೃಶ್ಯ ವೈಭವವನ್ನು ನೀಡಲು ಚಿತ್ರತಂಡಕ್ಕೆ ಇನ್ನಷ್ಟು ಸಮಯ ಬೇಕಾಗಿದೆ. ಹಾಗಾಗಿ ‘ಆದಿಪುರುಷ್’ ಚಿತ್ರ ಜೂನ್ 16ರಂದು ರಿಲೀಸ್ ಆಗಲಿದೆ. ಭಾರತವು ಹೆಮ್ಮೆ ಪಡುವಂತಹ ಸಿನಿಮಾ ಮಾಡಲು ನಾವು ಪಣತೊಟ್ಟಿದ್ದೇವೆ. ನಾವು ಮುಂದುವರಿಯಲು ನಿಮ್ಮ ಪ್ರೀತಿ, ಬೆಂಬಲ ಇರಲಿ’ ಎಂದು ಓಂ ರಾವತ್ ಟ್ವೀಟ್ ಮಾಡಿದ್ದಾರೆ.
जय श्री राम…#Adipurush releases IN THEATRES on June 16, 2023.#Prabhas #SaifAliKhan @kritisanon @mesunnysingh #BhushanKumar #KrishanKumar @vfxwaala @rajeshnair06 #ShivChanana @manojmuntashir @TSeries @RETROPHILES1 @UV_Creations @Offladipurush pic.twitter.com/kXNnjlEsib
— Om Raut (@omraut) November 7, 2022
ಚಿತ್ರತಂಡದ ಈ ನಿರ್ಧಾರದಿಂದ ಗ್ರಾಫಿಕ್ಸ್ ದೃಶ್ಯಗಳು ಉತ್ತಮ ಗುಣಮಟ್ಟದಲ್ಲಿ ಮೂಡಿಬರಲಿದೆ ಎಂಬ ಕಾರಣಕ್ಕೆ ಪ್ರಭಾಸ್ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಆದರೆ, ಇನ್ನೂ ಹಲವು ತಿಂಗಳು ಕಾಯಬೇಕಲ್ಲ ಎಂದು ಕೆಲವು ಅಭಿಮಾನಿಗಳಿಗೆ ಬೇಸರ ಆಗಿದೆ. ಈ ಚಿತ್ರಕ್ಕೆ ಭೂಷಣ್ ಕುಮಾರ್ ಮತ್ತು ಕ್ರಿಷನ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:49 am, Mon, 7 November 22