ವರ್ಷಕ್ಕೆ ಕನಿಷ್ಠ ಮೂರು ಸಿನಿಮಾಗಳನ್ನು ಮಾಡುತ್ತ, ಅಭಿಮಾನಿಗಳನ್ನು ರಂಜಿಸೋಕೆ ಪ್ರಯತ್ನಿಸುತ್ತಾರೆ ನಟ ಅಕ್ಷಯ್ ಕುಮಾರ್. ಆದರೆ ಕೊರೊನಾ ವೈರಸ್ ಹಾವಳಿಯಿಂದಾಗಿ ಅವರ ಈ ವೇಗಕ್ಕೆ ಬ್ರೇಕ್ ಬಿದ್ದಿದೆ. ಬಹುದಿನಗಳ ಬಳಿಕ ಅಕ್ಷಯ್ ಕುಮಾರ್ ನಟನೆಯ ‘ಬೆಲ್ ಬಾಟಂ’ ಸಿನಿಮಾ ತೆರೆಕಂಡಿದೆ. ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಗಳಿಕೆ ಮಾಡುತ್ತಿರುವ ‘ಬೆಲ್ ಬಾಟಂ’ ವಿರುದ್ಧ ಪಂಜಾಬ್ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.
ಪಂಜಾಬ್ನ ಹಲವು ಥಿಯೇಟರ್ಗಳಲ್ಲಿ ಈ ಸಿನಿಮಾ ಪ್ರದರ್ಶನ ಮಾಡದಂತೆ ರೈತರು ಒತ್ತಾಯ ಹೇರಿದ್ದಾರೆ. ಅದರ ನಡುವೆಯೂ ಕೆಲವು ಚಿತ್ರಮಂದಿರಗಳು ‘ಬೆಲ್ ಬಾಟಂ’ ಪ್ರದರ್ಶಿಸುತ್ತಿವೆ. ಸಿನಿಮಾ ನೋಡಲು ಅಕ್ಷಯ್ ಕುಮಾರ್ ಅಭಿಮಾನಿಗಳು ಮುಗಿಬಿದ್ದು ಸಾಗುತ್ತಿದ್ದಾರೆ. ಅಂತಹ ಒಂದು ಚಿತ್ರಮಂದಿರದ ಎದುರು ರೈತರು ಪ್ರತಿಭಟನೆ ನಡೆಸಿದ್ದಾರೆ. ‘ಅಕ್ಷಯ್ ಕುಮಾರ್ ಸಿನಿಮಾ ನೋಡುವವರಿಗೆ ನಾಚಿಕೆ ಆಗ್ಬೇಕು’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದಾರೆ.
ಅಷ್ಟಕ್ಕೂ ಪಂಜಾಬ್ ರೈತರ ಕೋಪಕ್ಕೆ ಕಾರಣ ಏನು? ಅವರ ಬಗ್ಗೆ ಈ ಸಿನಿಮಾದಲ್ಲಿ ಏನಾದರೂ ಆಕ್ಷೇಪಾರ್ಹ ಅಂಶಗಳಿವೆಯೇ? ಹಾಗೇನೂ ಇಲ್ಲ. ಈ ಹಿಂದೆ ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿಯನ್ನು ವಿರೋಧಿಸಿ ಪಂಜಾಬ್ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಅದರ ಬಗ್ಗೆ ಪರ-ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆಗ ಅಕ್ಷಯ್ ಕುಮಾರ್ ಅವರು ಆ ಪ್ರತಿಭಟನೆಯನ್ನು ‘ಒಂದು ಪ್ರಚಾರ’ ಎಂದು ಟೀಕಿಸಿದ್ದರು. ಅದಕ್ಕಾಗಿಯೇ ಈಗ ಪಂಜಾಬ್ ರೈತರು ಅಕ್ಷಯ್ ಕುಮಾರ್ ನಟನೆಯ ಸಿನಿಮಾವನ್ನು ಬಹಿಷ್ಕರಿಸುತ್ತಿದ್ದಾರೆ. ಇಂಥ ನಟನ ಸಿನಿಮಾವನ್ನು ನೋಡುವ ಪಂಜಾಬ್ ಜನರಿಗೆ ನಾಚಿಕೆ ಆಗಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದಾರೆ.
ದೇಶದ ಹಲವೆಡೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೊವಿಡ್ಗೆ ಹೆದರಿಕೊಂಡು ಬಹುತೇಕರು ಚಿತ್ರಮಂದಿರದ ಕಡೆಗೆ ಬರುತ್ತಿಲ್ಲ. ಇಂಥ ಕಷ್ಟದ ಪರಿಸ್ಥಿತಿಯಲ್ಲೂ ‘ಬೆಲ್ ಬಾಟಂ’ ಸಿನಿಮಾ ಬಿಡುಗಡೆ ಮಾಡುವ ಧೈರ್ಯವನ್ನು ನಿರ್ಮಾಪಕರು ತೋರಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ವಾಣಿ ಕಪೂರ್, ಲಾರಾ ದತ್ತಾ, ಹುಮಾ ಖುರೇಷಿ, ಆದಿಲ್ ಹುಸೇನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಂಜಿತ್ ಎಂ. ತಿವಾರಿ ನಿರ್ದೇಶನ ಮಾಡಿದ್ದಾರೆ. ಈವರೆಗೂ ‘ಬೆಲ್ ಬಾಟಂ’ ಸಿನಿಮಾ 17.40 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ:
ಬಾಲಿವುಡ್ ಪಾರ್ಟಿಗಳೆಂದರೆ ಅಕ್ಷಯ್ ಕುಮಾರ್ಗೆ ಅಲರ್ಜಿ? ಇದರ ಹಿಂದಿದೆ ಇಂಟರೆಸ್ಟಿಂಗ್ ವಿಚಾರ
Akshay Kumar: ಪಾಕಿಸ್ತಾನದ ಬಗ್ಗೆ ಅಕ್ಷಯ್ ಕುಮಾರ್ ಪ್ರೀತಿಯ ಮಾತು; ವಿಡಿಯೋ ವೈರಲ್ ಮಾಡಿದ ಕಮಾಲ್ ಖಾನ್