ಆರ್​. ಮಾಧವನ್​ ಖರೀದಿಸಿದ ಹೊಸ ಬಂಗಲೆ ಬೆಲೆ ಬರೋಬ್ಬರಿ 17.5 ಕೋಟಿ ರೂಪಾಯಿ

|

Updated on: Jul 25, 2024 | 9:37 PM

ಮುಂಬೈನಲ್ಲಿ ನಟ ಆರ್​. ಮಾಧವನ್​ ಅವರು ಹೊಸ ಮನೆ ಕೊಂಡುಕೊಂಡಿದ್ದಾರೆ. 4,182 ಚದರ ಅಡಿ ವಿಸ್ತೀರ್ಣವಿರುವ ಈ ಮನೆಯ ಫೋಟೋಗಳು ಕಣ್ಣು ಕುಕ್ಕುತ್ತಿವೆ. ‘ಶೈತಾನ್​’ ಸಿನಿಮಾದ ಭಾರಿ ಗೆಲುವಿನ ಬಳಿಕ ಮಾಧವನ್ ಅವರಿಗೆ ಅವಕಾಶಗಳು ಹೇರಳವಾಗಿವೆ. ಅದಕ್ಕೆ ತಕ್ಕಂತೆ ಅವರಿಗೆ ಸಂಭಾವನೆ ಸಿಗುತ್ತಿದೆ. ಹಾಗಾಗಿ ಅವರು ಪ್ರಾಪರ್ಟಿ ಖರೀದಿಸಿದ್ದಾರೆ.

ಆರ್​. ಮಾಧವನ್​ ಖರೀದಿಸಿದ ಹೊಸ ಬಂಗಲೆ ಬೆಲೆ ಬರೋಬ್ಬರಿ 17.5 ಕೋಟಿ ರೂಪಾಯಿ
ಆರ್​. ಮಾಧವನ್​ ಹೊಸ ಮನೆ
Follow us on

ನಟ ಆರ್​. ಮಾಧವನ್​ ಅವರು ಹೊಸದೊಂದು ಬಂಗಲೆ ಖರೀದಿಸುವ ಮೂಲಕ ಸುದ್ದಿ ಆಗಿದ್ದಾರೆ. ಚಿತ್ರರಂಗದಲ್ಲಿ ಬಹುಬೇಡಿಕೆಯ ಕಲಾವಿದನಾಗಿರುವ ಅವರು ಈಗಾಗಲೇ ಅನೇಕ ಕಡೆಗಳಲ್ಲಿ ಆಸ್ತಿ ಹೊಂದಿದ್ದಾರೆ. ಈಗ ಮುಂಬೈನಲ್ಲಿ ಅವರು ದೊಡ್ಡ ಬಂಗಲೆಗೆ ಒಡೆಯನಾಗಿದ್ದಾರೆ. ಇದರ ಬೆಲೆ ಬರೋಬ್ಬರಿ 17.5 ಕೋಟಿ ರೂಪಾಯಿ. ಇನ್ಮುಂದೆ ಈ ಮನೆಯೇ ಅವರ ಹೊಸ ವಿಳಾಸವಾಗಿರುತ್ತದೆ ಎನ್ನಲಾಗಿದೆ. ಆರ್​. ಮಾಧವನ್​ ಅವರ ಯಶಸ್ಸನ್ನು ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಹಾಗೂ ಬಾಲಿವುಡ್​ನಲ್ಲಿ ಆರ್​. ಮಾಧವನ್​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.

ಆರ್​. ಮಾಧವನ್​ ಅವರ ಪಾಲಿಗೆ 2024ರ ವರ್ಷ ಲಾಭದಾಯಕವಾಗಿದೆ. ಅವರು ನಟಿಸಿದ ‘ಶೈತಾನ್​’ ಸಿನಿಮಾ ಮಾರ್ಚ್​ 8ರಂದು ಬಿಡುಗಡೆ ಆಯಿತು. ಹಾರರ್​ ಕಥಾಹಂದರ ಇರುವ ಆ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸಖತ್ ಸದ್ದು ಮಾಡಿತು. ಆ ಚಿತ್ರದಲ್ಲಿ ಆರ್​. ಮಾಧವನ್​ ಅವರು ನೆಗೆಟಿವ್​ ಪಾತ್ರ ಮಾಡಿದ್ದಾರೆ. ಜನರನ್ನು ಅವರು ಬೆಚ್ಚಿ ಬೀಳಿಸಿದ್ದಾರೆ. ‘ಶೈತಾನ್​’ ಸಕ್ಸಸ್​ ನಂತರ ಮಾಧವನ್​ ಅವರಿಗೆ ಇದ್ದ ಬೇಡಿಕೆ ಡಬಲ್​ ಆಗಿದೆ.

ಕೈ ತುಂಬ ಸಂಭಾವನೆ ಪಡೆಯುವ ಆರ್​. ಮಾಧವನ್​ ಅವರು ಮುಂಬೈನಲ್ಲಿ ಖರೀದಿಸಿರುವ ಹೊಸ ಮನೆ ಬರೋಬ್ಬರಿ 4,182 ಚದರ ಅಡಿ ವಿಸ್ತೀರ್ಣ ಹೊಂದಿದೆ. ವಿಶಾಲವಾದ ಎರಡು ಪಾರ್ಕಿಂಗ್​ ಸ್ಪೇಸ್​ ಇದರಲ್ಲಿದೆ. ಕೂಡಲೇ ಶಿಫ್ಟ್​ ಆಗಿ ವಾಸಿಸಲು ಬೇಕಾದ ಎಲ್ಲ ಸೌಲಭ್ಯಗಳು ಇದರಲ್ಲಿವೆ. ಯಾವ ಸ್ಟಾರ್​ ಹೋಟೆಲ್​ಗೂ ಕಡಿಮೆ ಇಲ್ಲದಷ್ಟು ಐಷಾರಾಮಿಯಾಗಿದೆ ಆರ್​. ಮಾಧವನ್​ ಅವರ ಹೊಸ ಮನೆ. ಇಂಥ ಬಂಗಲೆ ಖರೀದಿಸಿರುವ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಇದನ್ನೂ ಓದಿ: ಮತ್ತೆ ಒಂದಾದ ಕಂಗನಾ ರಣಾವತ್​-ಆರ್​. ಮಾಧವನ್​; ಫೋಟೋ ವೈರಲ್​

‘ಶೈತಾನ್​’ ಸಿನಿಮಾದಲ್ಲಿ ಅಜಯ್​ ದೇವಗನ್​, ಜ್ಯೋತಿಕಾ, ಜಾನಕಿ ಬೋಡಿವಾಲಾ ಜೊತೆ ಆರ್​. ಮಾಧವನ್ ತೆರೆಹಂಚಿಕೊಂಡರು. ಬಾಕ್ಸ್​ ಆಫೀಸ್​ನಲ್ಲಿ ಆ ಸಿನಿಮಾ 149 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ಹಾರರ್​ ಪ್ರಿಯರನ್ನು ರಂಜಿಸಿದ ‘ಶೈತಾನ್​’ ಗೆಲುವಿನಿಂದ ಮಾಧವನ್​ ವೃತ್ತಿಜೀವನಕ್ಕೆ ಹೊಸ ಮೆರುಗು ಬಂದಿದೆ. ಅವರ ಕೈಯಲ್ಲಿ 5ಕ್ಕೂ ಅಧಿಕ ಸಿನಿಮಾಗಳು ಇವೆ. ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿಯೂ ಮಾಧವನ್​ ಗುರುತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:24 pm, Thu, 25 July 24