‘ಮದುವೆ ಆಗಿಲ್ಲ ಅಂತ ಸುಳ್ಳು ಹೇಳಬೇಕು’: ನಟ ಆರ್​. ಮಾಧವನ್​ ಮೇಲೆ ಹೇರಲಾಗಿತ್ತು ಒತ್ತಡ

TV9 Digital Desk

| Edited By: ಮದನ್​ ಕುಮಾರ್​

Updated on: Sep 23, 2021 | 5:13 PM

ಮದುವೆ ವಿಚಾರದಲ್ಲಿ ಆ ರೀತಿ ಸುಳ್ಳು ಹೇಳಲು ಮಾಧವನ್​ ಮನಸ್ಸು ಒಪ್ಪಲಿಲ್ಲ. ಆಗ ಅವರು ನಿರ್ದೇಶಕ ಮಣಿರತ್ನಂ ಬಳಿ ಸಲಹೆ ಕೇಳಿದರು. ಮುಂದೇನಾಯ್ತು?

‘ಮದುವೆ ಆಗಿಲ್ಲ ಅಂತ ಸುಳ್ಳು ಹೇಳಬೇಕು’: ನಟ ಆರ್​. ಮಾಧವನ್​ ಮೇಲೆ ಹೇರಲಾಗಿತ್ತು ಒತ್ತಡ
ಆರ್​. ಮಾಧವನ್​, ಸರಿತಾ
Follow us

ನಟ ಆರ್​. ಮಾಧವನ್​ ಅವರಿಗೆ ಬಹುಭಾಷೆಯಲ್ಲಿ ಬೇಡಿಕೆ ಇದೆ. ಹಲವು ಹಿಟ್​ ಸಿನಿಮಾಗಳನ್ನು ನೀಡಿದ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್​ ಕೂಡ ಹೌದು. ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲೇ ಅವರು ಮದುವೆ ಆದರು. ಆದರೆ ಬಹುತೇಕರಿಗೆ ಈ ವಿಷಯ ತಿಳಿದಿರಲಿಲ್ಲ. ಆ ಸಂದರ್ಭದಲ್ಲಿ ಎದುರಾದ ಒಂದು ಸಂದಿಗ್ಧ ಪರಿಸ್ಥಿತಿ ಬಗ್ಗೆ ಸಂದರ್ಶನವೊಂದರಲ್ಲಿ ಮಾಧವನ್​ ಹೇಳಿಕೊಂಡಿದ್ದಾರೆ. ತಾವು ಮದುವೆ ಆಗಿರುವ ವಿಚಾರವನ್ನೇ ಮುಚ್ಚಿಡಬೇಕು ಎಂದು ಸಿನಿಮಾದ ಪಿಆರ್ (ಪ್ರಚಾರ)​ ತಂಡದವರು ಮಾಧವನ್​ ಮೇಲೆ ಒತ್ತಡ ಹೇರಿದ್ದರು.

ಅದು 2000ನೇ ಇಸವಿ ಸಂದರ್ಭ. ಮಾಧವನ್​ ಯಾರು ಎಂಬುದು ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ. ಕಾಲಿವುಡ್​ನಲ್ಲಿ ಮಣಿರತ್ನಂ ನಿರ್ದೇಶನದ ‘ಅಲೈಪಯುತಿ’ ಚಿತ್ರದಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಕೆಲವೇ ತಿಂಗಳ ಹಿಂದೆ ಮದುವೆ ಆಗಿದ್ದ ಅವರು ಸಿನಿಮಾದ ಶೂಟಿಂಗ್​ನಲ್ಲಿ ಭಾಗವಹಿಸಿದ್ದರು. ಆ ವೇಳೆ ಸುದ್ದಿಗೋಷ್ಠಿ ನಡೆದಾಗ ತಮಗೆ ಮದುವೆ ಆಗಿರುವ ವಿಚಾರವನ್ನು ಮಾಧ್ಯಮದವರ ಎದುರು ಬಾಯಿ ಬಿಡಬಾರದು. ಮದುವೆ ಆಗಿಲ್ಲ ಅಂತ ಸುಳ್ಳು ಹೇಳಬೇಕು ಎಂದು ಪಿಆರ್​ ತಂಡದವರು ಒತ್ತಡ ಹೇರಿದರಂತೆ. ಅದಕ್ಕೆ ಕಾರಣ ಕೂಡ ಇತ್ತು.

ಮದುವೆ ಆದ ನಟರ ಮೇಲೆ ಮಹಿಳಾ ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರಿಸುವುದಿಲ್ಲ ಎಂದು ಆ ಪಿಆರ್​ ತಂಡದವರು ಭಾವಿಸಿದ್ದರು. ಹಾಗಾಗಿ ಮದುವೆ ಆಗಿದೆ ಎಂಬುದನ್ನು ಮುಚ್ಚಿಟ್ಟರೆ ಅದರಿಂದ ಮಾಧವನ್​ಗೆ ಒಳಿತಾಗಲಿದೆ ಎಂದು ಅವರು ಸಲಹೆ ನೀಡಿದರು. ಆದರೆ ಮದುವೆ ವಿಚಾರದಲ್ಲಿ ಆ ರೀತಿ ಸುಳ್ಳು ಹೇಳಲು ಮಾಧವನ್​ ಮನಸ್ಸು ಒಪ್ಪಲಿಲ್ಲ. ಆಗ ಅವರು ನಿರ್ದೇಶಕ ಮಣಿರತ್ನಂ ಬಳಿ ಸಲಹೆ ಕೇಳಿದರು. ‘ನಿಮಗೆ ಯಾವುದು ಸರಿ ಎನಿಸುತ್ತದೆಯೋ ಹಾಗೆ ಮಾಡಿ’ ಎಂದು ಮಣಿರತ್ನಂ ಹೇಳಿದರು.

ಸುಳ್ಳು ಹೇಳಲು ಮಾಧವನ್​ ಸಿದ್ಧರಿರಲಿಲ್ಲ. ಸುದ್ದಿಗೋಷ್ಠಿಯಲ್ಲಿ ತಮ್ಮ ಮದುವೆ ಬಗ್ಗೆ ಅವರು ಸತ್ಯವನ್ನೇ ಹೇಳಿದರು. ‘9 ವರ್ಷ ಡೇಟಿಂಗ್​ ಮಾಡಿದ ಹುಡುಗಿಯನ್ನೇ ನಾಲ್ಕು ತಿಂಗಳ ಹಿಂದೆ ಮದುವೆ ಆಗಿದ್ದೇನೆ. ಆಕೆ ಹೆಸರು ಸರಿತಾ’ ಎಂದು ಮಾಧವನ್​ ನೇರವಾಗಿ ಎಲ್ಲವನ್ನೂ ಬಹಿರಂಗಪಡಿಸಿದರು. ಆ ಸತ್ಯದಿಂದ ಅವರಿಗೆ ಏನೂ ತೊಂದರೆ ಆಗಲಿಲ್ಲ. ಆ ಚಿತ್ರಕ್ಕೆ ಮಾಧವನ್​ ಫಿಲ್ಮ್​ ಫೇರ್​ ಪ್ರಶಸ್ತಿ ಪಡೆದುಕೊಂಡರು. ಬಾಲಿವುಡ್​ನಲ್ಲೂ ಸ್ಟಾರ್​ ಆಗಿ ಮಿಂಚಿದರು. ಈಗಲೂ ಅವರಿಗೆ ಸಖತ್​ ಬೇಡಿಕೆ ಇದೆ.

ಮಾಧವನ್​ ನಟಿಸಿರುವ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್​’ ಚಿತ್ರ ಬಿಡುಗಡೆ ಸಜ್ಜಾಗಿದೆ. ಈ ಬಹುನಿರೀಕ್ಷಿತ ಚಿತ್ರವನ್ನು ಅವರೇ ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ವೆಬ್​ ಸಿರೀಸ್​ ಲೋಕದಲ್ಲಿ ಅವರು ಸಕ್ರಿಯರಾಗಿದ್ದಾರೆ. ಹಲವು ವೆಬ್​ ಸರಣಿಗಳಲ್ಲಿ ಮಾಧವನ್​ ನಟಿಸುತ್ತಿದ್ದಾರೆ.

ಇದನ್ನೂ ಓದಿ:

Madhavan: ಹೆಂಡತಿ ಎದುರು ನಾನು ಅಸಮರ್ಥ; ನಟ ಮಾಧವನ್​ ಬಹಿರಂಗವಾಗಿ ಹೀಗೆ ಹೇಳಲು ಕಾರಣ ಏನು?

ನಿಮ್ಮ ಮೇಲೆ ಕ್ರಶ್ ಆಗಿದೆ ಎಂದ ಅಭಿಮಾನಿಗಳಿಗೆ ಮಾಧವನ್‌ ಕೊಟ್ಟ ಉತ್ತರವೇನು ಗೊತ್ತಾ?

ತಾಜಾ ಸುದ್ದಿ

Related Stories

Click on your DTH Provider to Add TV9 Kannada