ರಾಖಿ ಸಾವಂತ್ ಅನಾರೋಗ್ಯ ಊಹಾಪೋಗಳಿಗೆ ತೆರೆ, ಆಸ್ಪತ್ರೆಯಿಂದಲೇ ಹೆಲ್ತ್ ಅಪ್​ಡೇಟ್

|

Updated on: May 17, 2024 | 9:31 AM

ಕೆಲ ದಿನಗಳ ಹಿಂದೆ ನಟಿ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲಾದ ಸುದ್ದಿ ಹರಿದಾಡಿತ್ತು. ಆದರೆ ಹಲವರು ರಾಖಿಯ ಪ್ರಚಾರ ತಂತ್ರಗಳಲ್ಲಿ ಇದೊಂದು ಎಂದುಕೊಂಡಿದ್ದರು. ಆದರೆ ರಾಖಿಗೆ ಗಂಭೀರ ಆರೋಗ್ಯ ಸಮಸ್ಯೆ ಇರುವುದು ಇದೀಗ ಬೆಳಕಿಗೆ ಬಂದಿದೆ.

ರಾಖಿ ಸಾವಂತ್ ಅನಾರೋಗ್ಯ ಊಹಾಪೋಗಳಿಗೆ ತೆರೆ, ಆಸ್ಪತ್ರೆಯಿಂದಲೇ ಹೆಲ್ತ್ ಅಪ್​ಡೇಟ್
Follow us on

ರಾಖಿ ಸಾವಂತ್ (Rakhi Sawant) ಆಸ್ಪತ್ರೆಯ ಬೆಡ್​ ಮೇಲೆ ಮಲಗಿರುವ ಚಿತ್ರಗಳು ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದು, ರಾಖಿ ಸಾವಂತ್​ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಕೆಲವರು ರಾಖಿ ಸಾವಂತ್ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿರಬಹುದೆಂಬ ಅನುಮಾನವನ್ನು ವ್ಯಕ್ತಪಡಿಸಿದ್ದರು. ರಾಖಿಯ ಮಾಜಿ ಪತಿ ಆದಿಲ್, ರಾಖಿಗೆ ನ್ಯಾಯಾಲಯದ ನೊಟೀಸ್ ಬಂದಿದ್ದು, ಆಕೆ ಬಂಧನದಿಂದ ತಪ್ಪಿಸಿಕೊಳ್ಳಲು ಹೀಗೆ ಅನಾರೋಗ್ಯದ ನಾಟಕವಾಡುತ್ತಿದ್ದಾಳೆ ಎಂದಿದ್ದರು. ರಾಖಿಯ ಮತ್ತೊಬ್ಬ ಮಾಜಿ ಪತಿ ರಿತೇಶ್, ರಾಖಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಲ್ಲರೂ ಆಕೆಗಾಗಿ ಪ್ರಾರ್ಥಿಸಿ ಎಂದಿದ್ದರು. ಈ ಭಿನ್ನ ಹೇಳಿಕೆಗಳಿಂದ ರಾಖಿ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದರು. ಇದೀಗ ಸ್ವತಃ ರಾಖಿ ಸಾವಂತ್ ಹಾಗೂ ಆಸ್ಪತ್ರೆ ಕಡೆಯಿಂದಲೂ ಮಾಹಿತಿ ಖಚಿತಪಡಿಸಲಾಗಿದೆ.

ರಾಖಿ ಸಾವಂತ್ ಕೆಲ ದಿನಗಳ ಹಿಂದೆ ಹೊಟ್ಟೆ ಹಾಗೂ ಎದೆ ನೋವಿನ ಕಾರಣದಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ರಾಖಿ ಸಾವಂತ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅವರ ಬಗ್ಗೆ ಬೇರೆ-ಬೇರೆ ಸುದ್ದಿಗಳು ಹರಿದಾಡಲು ಆರಂಭವಾಗಿದ್ದವು. ಇದೀಗ ರಾಖಿ ಸಾವಂತ್ ತಮಗೆ ಗರ್ಭಕೋಶದಲ್ಲಿ ಟ್ಯೂಮರ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ವಿಡಿಯೋ ಒಂದರಲ್ಲಿ ಮಾತನಾಡಿರುವ ರಾಖಿ, 10 ಸಿಎಂನ ದೊಡ್ಡ ಟ್ಯುಮರ್ ಪತ್ತೆಯಾಗಿದೆ. ವೈದ್ಯರು, ಅದು ಕ್ಯಾನ್ಸರ್ ಆಗಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗಳು ನಡೆಯುತ್ತಿವೆ. ನಾನು ಆದಷ್ಟು ಬೇಗ ಹುಷಾರಾಗಿ ಬರುತ್ತೇನೆ. ನನಗೆ ಹೆಚ್ಚಿಗೆ ಮಾತನಾಡಲು ಆಗುತ್ತಿಲ್ಲ ನನ್ನ ಪರವಾಗಿ ರಿತೇಶ್ ಮಾಧ್ಯಮಗಳೊಟ್ಟಿಗೆ ಮಾತನಾಡಿ ಮಾಹಿತಿ ಹಂಚಿಕೊಳ್ಳುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ:ರಾಖಿ ಸಾವಂತ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಮಾಜಿ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ

ರಾಖಿ ಸಾವಂತ್​ರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯವರು ಸಹ ರಾಖಿ ಗರ್ಭಕೋಶದಲ್ಲಿ 10 ಸೆಂ.ಮೀ ಉದ್ದದ ಟ್ಯೂಮರ್ ಇರುವುದನ್ನು ಖಚಿತಪಡಿಸಿದ್ದು, ಮೇ 18ರಂದು ಶಸ್ತ್ರಚಿಕಿತ್ಸೆ ನಡೆಸುವುದಾಗಿ ಹೇಳಿದ್ದಾರೆ. ಇತ್ತೀಚೆಗಷ್ಟೆ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಸಹ ಗರ್ಭಕೋಶದ ಹೊರಗೆ ಉಂಟಾದ ಗಡ್ಡೆಯಿಂದಾಗಿ ತೀವ್ರ ನೋವು ಅನುಭವಿಸಿ ಕೊನೆಗೆ ಶಸ್ತ್ರಚಿಕಿತ್ಸೆಗೆ ಒಳಗಾದರು. ಈಗ ರಾಖಿ ಸಾವಂತ್​ ಇದೇ ಮಾದರಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.

ರಾಖಿ ಸಾವಂತ್, ಬಾಲಿವುಡ್​ನ ವಿವಾದಾತ್ಮಕ ನಟಿ. ಪ್ರಚಾರಕ್ಕಾಗಿ ಒಂದಲ್ಲ ಒಂದು ಸಾಹಸಗಳನ್ನು ರಾಖಿ ಸಾವಂತ್ ಮಾಡುತ್ತಲೇ ಇರುತ್ತಾರೆ. ಈ ಹಿಂದೆ ಮೈಸೂರಿನ ಆದಿಲ್ ಅನ್ನು ರಾಖಿ ಸಾವಂತ್ ವಿವಾಹವಾಗಿದ್ದರು. ಬಳಿಕ ಆದಿಲ್ ವಿರುದ್ಧ ಹಲವು ಆರೋಪಗಳನ್ನು ಮಾಡಿ ಆದಿಲ್ ವಿರುದ್ಧ ದೂರು ಸಹ ನೀಡಿದರು. ಅಂತೆಯೇ ಆದಿಲ್ ಬಂಧನವೂ ಆಗಿತ್ತು. ಬಳಿಕ ಆದಿಲ್, ರಾಖಿ ವಿರುದ್ಧ ಮರುದೂರು ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಒಂದು ವಾರದೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ರಾಖಿಗೆ ನೊಟೀಸ್ ಕಳಿಸಿತ್ತು. ಅಷ್ಟರಲ್ಲಾಗಲೆ ರಾಖಿ ಸಾವಂತ್ ಅನಾರೋಗ್ಯದಿಂದ ಆಸ್ಪತ್ರೆ ಸೇರಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ