AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಖಿ ಸಾವಂತ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಮಾಜಿ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ

Rakhi Sawant: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದ ಮಾಜಿ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖಡೆ, ನಟಿ ರಾಖಿ ಸಾವಂತ್ ಹಾಗೂ ವಕೀಲ ಅಲಿ ಖಾಸಿಫ್ ಖಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ರಾಖಿ ಸಾವಂತ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಮಾಜಿ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ
ಸಮೀರ್-ರಾಖಿ
Follow us
ಮಂಜುನಾಥ ಸಿ.
|

Updated on:Mar 20, 2024 | 12:59 PM

ಒಂದು ಕಾಲದಲ್ಲಿ ಬಾಲಿವುಡ್ (Bollywood) ನಟ-ನಟಿಯರಿಗೆ ಭೂತದಂತೆ ಕಾಡಿದ್ದ ಮಾಜಿ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಈಗ ತಾವೇ ಆರೋಪಿಯಾಗಿ ನಿಂತಿದ್ದಾರೆ. ಇದೀಗ ಸಮೀರ್ ವಾಂಖಡೆ ನಟಿ ರಾಖಿ ಸಾವಂತ್ ಹಾಗೂ ವಕೀಲ ಅಲಿ ಖಾಸಿಫ್ ಖಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದು, ಭವಿಷ್ಯದಲ್ಲಿ ಸಹ ತಮ್ಮ ಕುರಿತಾಗಿ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ಹೇರಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಸಮೀರ್​ ವಾಂಖೆಡೆ ಹೂಡಿರುವ ಮಾನನಷ್ಟ ಮೊಕದ್ದಮೆ ಬಗ್ಗೆ ಪ್ರತಿಕ್ರಿಯಿಸಿರುವ ವಕೀಲ ಅಲಿ ಖಾಸಿಫ್ ಖಾನ್, ಸಮೀರ್ ಈ ಪ್ರಕರಣದಲ್ಲಿ ಗೆದ್ದರೆ ಆತ ಹೇಳಿರುವುದಕ್ಕಿಂತಲೂ ಹೆಚ್ಚು ಹಣ ಕೊಡುವುದಾಗಿ ಸವಾಲು ಹಾಕಿದ್ದಾರೆ.

ಸಮೀರ್ ವಾಂಖೆಡೆ, ಎನ್​ಸಿಬಿ ಅಧಿಕಾರಿಯಾಗಿದ್ದಾಗ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದರು. ಅದೇ ವೇಳೆ ಮುನ್​ಮುನ್ ಧಮೇಚ ಹಾಗೂ ಆರ್ಯನ್ ಖಾನ್ ಗೆಳೆಯನೊಬ್ಬನನ್ನು ಬಂಧಿಸಲಾಗಿತ್ತು. ಆ ಪ್ರಕರಣದಲ್ಲಿ ಮುನ್​ಮುನ್ ಧಮೇಚಾ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ವಕೀಲ ಅಲಿ ಖಾಸಿಫ್ ಖಾನ್ ಇತ್ತೀಚೆಗೆ ಮರಾಠಿ ಟಿವಿ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸಮೀರ್ ವಾಂಖೆಡೆ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದರು.

ಇದನ್ನೂ ಓದಿ:25 ಕೋಟಿ ಲಂಚಕ್ಕೆ ಬೇಡಿಕೆ: ಶಾರುಖ್ ಪುತ್ರನ ಬಂಧಿಸಿದ್ದ ಸಮೀರ್ ವಿರುದ್ಧ ಇಡಿ ದೂರು

‘ಸಮೀರ್ ವಾಂಖೆಡೆ ಪ್ರಚಾರ ಪ್ರಿಯ, ಇದೇ ಕಾರಣಕ್ಕೆ ಆತ ಕೇವಲ ಸೆಲೆಬ್ರಿಟಿಗಳನ್ನು ಗುರಿ ಮಾಡಿಕೊಂಡು ಅವರಿಗೆ ಹಿಂಸೆ ನೀಡಿದ್ದ. ಆತ ಭ್ರಷ್ಟ, ಸೆಕ್ಷನ್ 29 ಅನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂಬಿತ್ಯಾದಿ ಆರೋಪಗಳನ್ನು ಮಾಡಿದ್ದರು. ವಕೀಲ ಅಲಿ ಖಾಸಿಫ್ ಖಾನ್ ರ ಸಂದರ್ಶನದ ವಿಡಿಯೋಗಳನ್ನು ನಟಿ ರಾಖಿ ಸಾವಂತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೆಲವು ದಾಖಲೆಗಳನ್ನು ಸಹ ರಾಖಿ ಸಾವಂತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೇ ಕಾರಣಕ್ಕೆ ಈಗ ಸಮೀರ್ ವಾಂಖೆಡೆ, ರಾಖಿ ಸಾವಂತ್ ಹಾಗೂ ವಕೀಲ ಅಲಿ ಖಾಸಿಫ್ ಖಾನ್ ಮೇಲೆ 11 ಲಕ್ಷ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಸಮೀರ್ ಆರೋಪಗಳಿಗೆ ಪ್ರತಿಕ್ರಿಯಿಸಿರುವ ವಕೀಲ ಅಲಿ ಖಾಸಿಫ್ ಖಾನ್, ‘ಸಾರ್ವಜನಿಕ ಹಿತಾಸಕ್ತಿಯಿಂದ ಸತ್ಯವನ್ನು ಹೇಳಿದರೆ ಅದು ಮಾನನಷ್ಟ ಮೊಕದ್ದಮೆ ಆಗುವುದಿಲ್ಲ. ಸಮೀರ್ ವಾಂಖೆಡೆಗೆ ಸಂಬಂಧಿಸಿದಂತೆ ನಾನು ಸತ್ಯಗಳನ್ನೇ ಹೇಳಿದ್ದೇನೆ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರದರ್ಶಿಸಿದ್ದೇನೆ. ಈ ಪ್ರಕರಣದಲ್ಲಿ ಅವರಿಗೆ ಗೆಲುವು ಸಿಗುವುದಿಲ್ಲ. ಒಂದೊಮ್ಮೆ ಅವರೇನಾದರೂ ಈ ಕಾನೂನು ಸಮರದಲ್ಲಿ ಗೆದ್ದರೆ ಅವರು ಹೂಡಿದ ದಾವೆಗಿಂತಲೂ ಹೆಚ್ಚಿನ ಹಣವನ್ನು ಅವರಿಗೆ ಕೊಡುತ್ತೇನೆ’ ಎಂದು ಸವಾಲು ಹಾಕಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಹಲವು ಸೆಲೆಬ್ರಿಟಿಗಳಿಗೆ ನೊಟೀಸ್ ನೀಡಿ ವಿಚಾರಣೆ ಮಾಡಿದ್ದ ಸಮೀರ್ ವಾಂಖೆಡೆ, ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ ಬಳಿಕ ನಡೆದ ಸರಣಿ ಘಟನಾವಳಿಗಳು, ತನಿಖೆ, ನ್ಯಾಯಾಲಯದ ವಿಚಾರಣೆಗಳ ಬಳಿಕ ಸಮೀರ್ ವಾಂಖಡೆ ಅಧಿಕಾರದ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಎನ್​ಸಿಬಿ ಆಂತರಿಕ ತನಿಖಾ ದಳ ವರದಿ ಒಪ್ಪಿಸಿತ್ತು. ಸಿಬಿಐ ಸಹ ಸಮೀರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಸಮೀರ್ ಅವರನ್ನು ಎನ್​ಸಿಬಿಯಿಂದ ಬೇರೆ ವಿಭಾಗಕ್ಕೆ ವರ್ಗಾವಣೆ ಸಹ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:59 pm, Wed, 20 March 24