Cannes 2024: ಬ್ಯಾಂಡೇಜ್ ಸುತ್ತಿಕೊಂಡೇ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಐಶ್ವರ್ಯಾ ರೈ ಬಚ್ಚನ್
ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಬಚ್ಚನ್ ಅವರ ಕೈಗೆ ಪೆಟ್ಟಾಗಿದೆ. ಆದರೂ ಕೂಡ ಅವರು ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿ ಆಗುವುದನ್ನು ತಪ್ಪಿಸಿಕೊಂಡಿಲ್ಲ. ಕೈಯಲ್ಲಿ ಬ್ಯಾಂಡೇಜ್ ಇದ್ದರೂ ಸಹ ಅವರು ನಗು ನಗುತ್ತಲೇ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿದ್ದಾರೆ. ಮಾಧ್ಯಮಗಳ ಕ್ಯಾಮೆರಾಗಳತ್ತ ನಗು ಚೆಲ್ಲಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ.
ನಟಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರು ಸಿನಿಮಾ ಮಾತ್ರವಲ್ಲದೇ ಮಾಡೆಲಿಂಗ್ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಜಾಗತಿಕ ಮಟ್ಟದ ಸೌಂದರ್ಯ ವರ್ಧಕ ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿರುವ ಅವರು ಹಲವು ವರ್ಷಗಳಿಂದ ಕಾನ್ ಚಿತ್ರೋತ್ಸವದ (Cannes Film Festival 2024) ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾ ಬಂದಿದ್ದಾರೆ. ಈ ಬಾರಿ ಕೂಡ ಅವರು ರೆಡ್ ಕಾರ್ಪೆಟ್ನಲ್ಲಿ ಮಿಂಚಿದ್ದಾರೆ. ಅಚ್ಚರಿ ಏನೆಂದರೆ, ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಅವರು ರೆಡ್ ಕಾರ್ಪೆಟ್ನಲ್ಲಿ (Cannes Red Carpet) ನಡೆದು ಬಂದಿದ್ದಾರೆ. ಅವರ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ. ಅವರ ಆತ್ಮವಿಶ್ವಾಸಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.
ಬುಧವಾರ (ಮೇ 15) ರಾತ್ರಿ ಐಶ್ವರ್ಯಾ ರೈ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅವರ ಕೈಗೆ ಗಾಯ ಆಗಿದ್ದನ್ನು ನೋಡಿ ಅಭಿಮಾನಿಗಳಿಗೆ ಬೇಸರ ಆಗಿತ್ತು. ಕೈಗೆ ಪೆಟ್ಟಾಗಿರುವುದರಿಂದ ಈ ಬಾರಿ ಅವರು ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕುವುದು ಅನುಮಾನ ಎಂದು ಅನೇಕರು ಭಾವಿಸಿದ್ದರು. ಆದರೆ ಐಶ್ವರ್ಯಾ ರೈ ಅವರು ತಮ್ಮ ಬದ್ಧತೆ ತೋರಿಸಿದ್ದಾರೆ.
Exclusive ~ Aishwarya Rai at Cannes 2024 ! 🔥🥀❤️#AishwaryaRaiBachan #Aishwaryaraiatcannes #cannes2024 pic.twitter.com/v3F6QxNf4V
— Mishkat Mahir (@MahirMishkat) May 16, 2024
ಕೈಗೆ ಪೆಟ್ಟಾಗಿದೆ ಎಂಬ ನೆಪ ಹೇಳದೇ ಐಶ್ವರ್ಯಾ ರೈ ಅವರು ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿ ಆಗಿದ್ದಾರೆ. ಕಪ್ಪು, ಬಿಳಿ ಮತ್ತು ಗೋಲ್ಡನ್ ಬಣ್ಣಗಳಿಂದ ವಿನ್ಯಾಸಗೊಂಡ ಗೌನ್ ಧರಿಸಿ ಅವರು ಮಿಂಚಿದ್ದಾರೆ. ಬಲಗೈನಲ್ಲಿ ಬ್ಯಾಂಡೇಜ್ ಇದ್ದರೂ ಕೂಡ ಅವರು ಆ ಬಗ್ಗೆ ಹೆಚ್ಚು ಗಮನ ನೀಡಿಲ್ಲ. ಮೊದಲೇ ಒಪ್ಪಿಕೊಂಡ ಈ ಕೆಲಸವನ್ನು ಅವರು ಎಂದಿನ ಉತ್ಸಾಹದಲ್ಲಿ ಮಾಡಿ ಮುಗಿಸಿದ್ದಾರೆ. ಅವರ ಫೋಟೋಗಳಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ಗೆ ಐಶ್ವರ್ಯಾ ರೈ ಜೋಡಿ ಎಂದಾಗ ಕಕ್ಕಾಬಿಕ್ಕಿ ಆಗಿದ್ದ ರಾಜಸ್ಥಾನಿ ವ್ಯಕ್ತಿ
ಐಶ್ವರ್ಯಾ ರೈ ಬಚ್ಚನ್ ಅವರಿಗೆ ಕಾನ್ ಚಿತ್ರೋತ್ಸವ ಹೊಸದೇನೂ ಅಲ್ಲ. 2002ರಲ್ಲಿ ಅವರು ಮೊದಲ ಬಾರಿಗೆ ಕಾನ್ ಚಿತ್ರೋತ್ಸವದ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ್ದರು. ಅಂದಿನಿಂದ ಇಂದಿನ ತನಕ ಅವರು ಪ್ರತಿ ವರ್ಷವೂ ಅಲ್ಲಿಗೆ ತೆರಳಿ ತಮ್ಮ ಹಾಜರಿ ಹಾಕಿದ್ದಾರೆ. ಈವರೆಗೂ 21 ಬಾರಿ ಅವರು ಕಾನ್ ಫಿಲ್ಮ್ ಫೆಸ್ಟಿವಲ್ನ ರೆಡ್ ಕಾರ್ಪೆಟ್ನಲ್ಲಿ ವಾಕ್ ಮಾಡಿದ್ದಾರೆ. ಈ ಬಾರಿ ಕೈಗೆ ಪೆಟ್ಟಾಗಿದ್ದನ್ನು ಕೂಡ ಅವರು ಲೆಕ್ಕಿಸದೇ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ನಗುಮುಖದಿಂದ ಪೋಸ್ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.