ನಟಿ ರಾಖಿ ಸಾವಂತ್ (Rakhi Sawant) ಅವರು ಪ್ರತಿ ದಿನವೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಪತಿ ಆದಿಲ್ ಖಾನ್ ದುರಾನಿ ಜೊತೆ ಅವರು ಕಿರಿಕ್ ಮಾಡಿಕೊಂಡು ಹಲವು ತಿಂಗಳುಗಳು ಕಳೆದಿವೆ. ಆ ನೋವಲ್ಲೇ ಅವರು ಕಣ್ಣೀರು ಹಾಕುತ್ತಾ ಮೆಕ್ಕಾ (Mecca) ಮದೀನಾಗೆ ಭೇಟಿ ನೀಡಿ ಬಂದಿದ್ದಾರೆ. ಯಾತ್ರೆ ಮುಗಿಸಿ ಬಂದ ಬಳಿಕ ಅವರ ಮಾತಿನ ಧಾಟಿ ಬದಲಾಗಿದೆ. ವೇಷ-ಭೂಷಣ ಕೂಡ ಬದಲಾಗಿಹೋಗಿದೆ. ರಾಖಿ ಸಾವಂತ್ ಈಗ ಮೈ ತುಂಬಾ ಬಟ್ಟೆ ಧರಿಸುತ್ತಿದ್ದಾರೆ. ‘ಗಂಡಸರು ಹತ್ತಿರಕ್ಕೆ ಬಂದರೆ ಹುಷಾರ್’ ಎಂದು ಅವರು ಎಚ್ಚರಿಕೆ ನೀಡುತ್ತಿದ್ದಾರೆ. ಆ ರೀತಿ ಅವರು ಕೂಗಾಡಿದ ವಿಡಿಯೋ (Rakhi Sawant Viral Video) ವೈರಲ್ ಆಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ರಾಖಿ ಸಾವಂತ್ ಎಲ್ಲಿಯೇ ಹೋದರೂ ಅಲ್ಲಿ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಅವರ ವಿಡಿಯೋ ಹಾಗೂ ಫೋಟೋಗೋಸ್ಕರ ನೂಕುನುಗ್ಗಲು ಮಾಡಲಾಗುತ್ತದೆ. ಅದನ್ನು ರಾಖಿ ಸಾವಂತ್ ಎಂಜಾಯ್ ಮಾಡುತ್ತಾರೆ ಕೂಡ. ಆದರೆ ಇತ್ತೀಚೆಗೆ ಅವರ ವರ್ತನೆಯಲ್ಲಿ ಬದಲಾವಣೆ ಕಾಣಿಸಿದೆ. ತಮ್ಮ ಫೋಟೋ ಕ್ಲಿಕ್ಕಿಸಲು ಬಂದ ಪಾಪರಾಜಿಗಳು ಮತ್ತು ಪುರುಷ ಅಭಿಮಾನಿಗಳನ್ನು ಕಂಡು ರಾಖಿ ಸಾವಂತ್ ಕೂಗಾಡಿದ್ದಾರೆ. ಮೆಕ್ಕಾ ಮದೀನಾಗೆ ಹೋಗಿ ಬಂದ ಬಳಿಕ ಅವರಲ್ಲಿ ಆಗಿರುವ ಈ ಬದಲಾವಣೆ ಕಂಡು ಎಲ್ಲರಿಗೂ ಅಚ್ಚರಿ ಆಗಿದೆ.
ಇತ್ತೀಚೆಗೆ ರಾಖಿ ಸಾವಂತ್ ಅವರು ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ‘ನಾನು ಮೆಕ್ಕಾ ಮದೀನಾಗೆ ಹೋಗಿ ಬಂದಿದ್ದೇನೆ. ಗಂಡಸರು ದೂರ ನಿಲ್ಲಿ. ನನ್ನನ್ನು ಮುಟ್ಟಬೇಡಿ. ನಾನು ಪವಿತ್ರಳಾಗಿದ್ದೇನೆ’ ಎಂದು ರಾಖಿ ಸಾವಂತ್ ಗರಂ ಆಗಿದ್ದಾರೆ. ಅಲ್ಲಿದ್ದ ಕೆಲವು ಅಭಿಮಾನಿಗಳು ರಾಖಿಯ ವೇಷಭೂಷಣಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ‘ನಾನು ಸೌದಿಯವಳ ರೀತಿ ಕಾಣ್ತೀನಾ’ ಎಂದು ರಾಖಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಅಭಿಮಾನಿಯೊಬ್ಬರು, ‘ಇಲ್ಲ.. ದುಬೈ ಮಹಿಳೆ ರೀತಿ ಕಾಣುತ್ತಿದ್ದೀರಿ’ ಎಂದಿದ್ದಾರೆ. ‘ರೇಖಾ ರೀತಿ ಅಲ್ಲ.. ಶೇಖಾ ರೀತಿ ಕಾಣುತ್ತಿದ್ದೇನೆ’ ಎಂದು ರಾಖಿ ಸಾವಂತ್ ಅವರು ತಮ್ಮನ್ನು ತಾವು ಹೊಗಳಿಕೊಂಡಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಇವರು ರಾಖಿ ಸಾವಂತ್ ಅಲ್ಲ, ಫಾತಿಮಾ: ದಿಢೀರನೇ ಹೆಸರು ಬದಲಾಯಿಸಿಕೊಂಡ ನಟಿ
ಚಿತ್ರರಂಗದಲ್ಲಿ ರಾಖಿ ಸಾವಂತ್ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಹೆಚ್ಚಿತು. ವೈಯಕ್ತಿಕ ಜೀವನದ ಕಾರಣಕ್ಕೆ ಅವರು ಆಗಾಗ ಸುದ್ದಿ ಆಗುತ್ತಾರೆ. ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಜೊತೆ ನಡೆದಿದ್ದ ಅವರ ಮದುವೆಯು ಈಗ ಮುರಿದು ಬಿದ್ದಿದೆ. ಶೀಘ್ರದಲ್ಲೇ ಅವರು ವಿಚ್ಛೇದನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಪತಿಯಿಂದ ದೂರಾಗಿದ್ದರೂ ಕೂಡ ರಾಖಿ ಸಾವಂತ್ ಅವರು ಸದ್ಯಕ್ಕೆ ಇಸ್ಲಾಂ ಧರ್ಮವನ್ನು ಪಾಲಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.