ಇಂಡಿಯಾ ಗಾಟ್ ಲೇಟೆಂಟ್ ವಿವಾದ, ರಾಖಿ ಸಾವಂತ್​ಗೂ ಸಮನ್ಸ್

|

Updated on: Feb 22, 2025 | 8:47 AM

India Got Latent: ಸಮಯ್ ರೈನಾ ನಡೆಸಿಕೊಡುತ್ತಿದ್ದ ಯೂಟ್ಯೂಬ್ ಕಾರ್ಯಕ್ರಮ ಇಂಡಿಯಾ ಗಾಟ್ ಲೇಟೆಂಟ್ ಕಳೆದ ಕೆಲ ವಾರದಿಂದ ತೀವ್ರ ಚರ್ಚೆಗೆ ಕಾರಣವಾಗಿದೆ. ಶೋನಲ್ಲಿ ಯೂಟ್ಯೂಬರ್ ರಣ್ವೀರ್ ಅಲ್ಹಾಬಾದಿಯಾ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿದ್ದು, ಹಲವರ ಮೇಲೆ ಪ್ರಕರಣ ದಾಖಲಾಗಿದೆ. ಇದೀಗ ನಟಿ ರಾಖಿ ಸಾವಂತ್​ಗೂ ಸಮನ್ಸ್ ಜಾರಿ ಮಾಡಲಾಗಿದೆ.

ಇಂಡಿಯಾ ಗಾಟ್ ಲೇಟೆಂಟ್ ವಿವಾದ, ರಾಖಿ ಸಾವಂತ್​ಗೂ ಸಮನ್ಸ್
Rakhi Sawant
Follow us on

‘ಇಂಡಿಯಾ ಗಾಟ್ ಲೇಟೆಂಟ್’ ಕಳೆದ ಕೆಲ ವಾರಗಳಿಂದ ಭಾರಿ ವಿವಾದ ಸೃಷ್ಟಿಸಿದೆ. ಕಮಿಡಿಯನ್ ಸಮಯ್ ರೈನಾ ನಡೆಸಿಕೊಡುತ್ತಿದ್ದ ಈ ಶೋನಲ್ಲಿ ಮತ್ತೊಬ್ಬ ಯೂಟ್ಯೂಬರ್ ರಣ್ವೀರ್ ಅಲ್ಹಾಬಾದಿಯಾ ಆಡಿದ್ದ ಮಾತುಗಳು ಭಾರಿ ಆಕ್ರೋಶ ವ್ಯಕ್ತವಾಗಿವೆ. ಆ ಶೋನಲ್ಲಿ ಸೊಂಟದ ಕೆಳಗಿನ ಮಾತುಗಳು, ಲೈಂಗಿಕತೆ ಬಗ್ಗೆ ಹಾಸ್ಯದ ಮಾತುಗಳು, ಬೈಗುಳಗಳು ಸಾಮಾನ್ಯ ಎನ್ನುವಂತಿದ್ದವು. ಆದರೆ ಇತ್ತೀಚೆಗೆ ಶೋಗೆ ಬಂದಿದ್ದ ಯೂಟ್ಯೂಬರ್ ರಣ್ವೀರ್ ಅಲ್ಹಾಬಾದಿಯಾ ಗಡಿಗಳನ್ನು ಮೀರಿ, ಪೋಷಕರ ಲೈಂಗಿಕತೆ ಮತ್ತು ಅದರಲ್ಲಿ ಮಕ್ಕಳು ಭಾಗವಹಿಸುವ ಬಗ್ಗೆ ಅತ್ಯಂತ ಅಶ್ಲೀಲ ಜೋಕ್ ಮಾಡಿದ್ದರು. ಇದು ತೀವ್ರ ವಿವಾದ ಎಬ್ಬಿಸಿದೆ.

ಈಗಾಗಲೇ ರಣ್ವೀರ್ ಅಲ್ಹಾಬಾದಿಯಾ, ಸಮಯ್ ರೈನಾ ಸೇರಿದಂತೆ ಅಂದು ಪ್ಯಾನೆಲ್​ನಲ್ಲಿದ್ದ ಇತರೆ ಯೂಟ್ಯೂಬರ್​ಗಳ ಮೇಲೆ ಪ್ರಕರಣ ದಾಖಲಾಗಿದ್ದು ವಿಚಾರಣೆ ಚಾಲ್ತಿಯಲ್ಲಿದೆ. ಇದರ ನಡುವೆ ಅಂದಿನ ಶೋನಲ್ಲಿ ಇರದೇ ಇದ್ದ ನಟಿ, ವಿವಾದಗಳ ರಾಣಿ ರಾಖಿ ಸಾವಂತ್​ಗೂ ಸಮನ್ಸ್ ಜಾರಿ ಮಾಡಲಾಗಿದೆ.

ರಾಖಿ ಸಾವಂತ್ ಈ ಹಿಂದೆ ‘ಇಂಡಿಯಾ ಗಾಟ್ ಲೇಟೆಂಟ್’ನ ಎಪಿಸೋಡ್ ಒಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಆ ಶೋನಲ್ಲಿ ರಾಖಿ ಸಾವಂತ್ ಅತ್ಯಂತ ಅಶ್ಲೀಲ ಮಾತುಗಳನ್ನು ಆಡಿದ್ದರು. ಅದೇ ಪ್ಯಾನಲ್​ನಲ್ಲಿ ಅತಿಥಿಯಾಗಿದ್ದ ಕಮಿಡಿಯನ್ ಮಹೀಪ್​ ಸಿಂಗ್ ಅವರ ಬಗ್ಗೆಯೂ ಬಹಳ ತುಚ್ಛವಾಗಿ ಮಾತನಾಡಿದ್ದರು. ಆ ಶೋನಲ್ಲಿ ಜಗಳ ಮಾಡಿಕೊಂಡಿದ್ದ ರಾಖಿ ಸಾವಂತ್, ಅರ್ಧಕ್ಕೆ ಶೋ ಬಿಟ್ಟು ಹೋಗಿದ್ದರು. ಆ ಎಪಿಸೋಡ್ ಅನ್ನು ಸಮಯ್ ರೈನಾ ಬಿಡುಗಡೆ ಮಾಡಿರಲಿಲ್ಲ. ಆದರೆ ಕೊನೆಗೆ ಪ್ರೇಕ್ಷಕರ ಒತ್ತಾಯದ ಮೇರೆಗೆ ತಿಂಗಳುಗಳ ಬಳಿಕ ಎಪಿಸೋಡ್ ಅನ್ನು ಬಿಡುಗಡೆ ಮಾಡಿದ್ದರು. ಈಗ ಅದೇ ಎಪಿಸೋಡ್​ಗೆ ಸಂಬಂಧಿಸಿದಂತೆ ರಾಖಿ ಮೇಲೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:‘ಇಂಡಿಯಾಸ್ ಗಾಟ್ ಲೇಟೆಂಟ್’ನ ಎಲ್ಲಾ ಎಪಿಸೋಡ್​ ಡಿಲೀಟ್; ಸಮಯ್ ರೈನಾ ದೊಡ್ಡ ನಿರ್ಧಾರ

‘ಇಂಡಿಯಾ ಗಾಟ್ ಲೇಟೆಂಟ್’ ಶೋನಲ್ಲಿ ರಾಖಿ ಸಾವಂತ್ ಆಡಿದ್ದ ಅವಾಚ್ಯ ಮಾತುಗಳ ಬಗ್ಗೆ ದೂರು ದಾಖಲಾಗಿದ್ದು, ಮಹಾರಾಷ್ಟ್ರ ಸೈಬರ್ ಸೆಲ್ ಪೊಲೀಸರು ರಾಖಿ ಸಾವಂತ್​ಗೆ ಸಮನ್ಸ್ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ‘ಇಂಡಿಯಾ ಗಾಟ್ ಲೇಟೆಂಟ್’ ಶೋ ವಿವಾದ ಎಬ್ಬಿಸುತ್ತಿದ್ದಂತೆ ಸಮಯ್ ರೈನಾ, ಶೋನ ಎಲ್ಲ ಎಪಿಸೋಡ್​ಗಳನ್ನು ಯೂಟ್ಯೂಬ್​ನಿಂದ ಡಿಲೀಟ್ ಮಾಡಿದ್ದಾರೆ. ಆದರೂ ಸಹ ಪೊಲೀಸರು ಹಳೆಯ ಎಪಿಸೋಡ್​ಗಳೆಲ್ಲವನ್ನೂ ಹುಡುಕಾಡುತ್ತಿದ್ದು, ಈಗಾಗಲೇ ಶೋನ ನಿರ್ಮಾಪಕರು, ನಿರ್ದೇಶಕರು, ಸ್ಪರ್ಧಿಗಳು, ಯೂಟ್ಯೂಬರ್​ಗಳು ಸೇರಿದಂತೆ 42 ಮಂದಿಗೆ ಸಮನ್ಸ್ ಜಾರಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ